ಪ್ರಗತಿವಾಹಿನಿ ಸುದ್ದಿ; ತಿರುವನಂತಪುರಂ: ಕೇರಳದ ಕೋಯಿಕ್ಕೋಡ್ ನಿಲ್ದಾಣದ ರನ್ವೇನಲ್ಲಿ ಲ್ಯಾಂಡಿಂಗ್ ವೇಳೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿನ ಸಂಖ್ಯೆ 18ಕ್ಕೆಏರಿಕೆಯಾಗಿದೆ.
ಈ ವಿಮಾನದಲ್ಲಿ 180 ಮಂದಿ ಪ್ರಯಾಣಿಕರು ಇದ್ದರು. ಅವಘಡದಲ್ಲಿ ಇಬ್ಬರು ಪೈಲಟ್ಗಳು ಸೇರಿದಂತೆ 18 ಮಂದಿ ಮೃತಪಟ್ಟಿದ್ದಾರೆ. ವಿಮಾನದಲ್ಲಿ 180 ಪ್ರಯಾಣಿಕರಲ್ಲಿ 10 ಪುಟ್ಟ ಮಕ್ಕಳು ಕೂಡ ಇದ್ದರು.
ದುಬೈ- ಕೋಯಿಕ್ಕೋಡ್ ವಿಮಾನ X1344 ಬೋಯಿಂಗ್ 737 ವಿಮಾನ ನಿನ್ನೆ ಸಂಜೆ ಕೋಯಿಕ್ಕೋಡ್ನ ಕರಿಪುರ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದ್ದು, ರನ್ವೇನಲ್ಲಿ ಅಪಘಾತಕ್ಕೆ ಈಡಾಗಿದೆ. ಕೇರಳ ಪೊಲೀಸ್ ಅಧಿಕಾರಿಗಳ ಪ್ರಕಾರ, ಕನಿಷ್ಠ 35 ಮಂದಿ ಗಾಯಗೊಂಡಿದ್ದು, ಅವರನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಭಾರತದ ಉನ್ನತ ವಿಮಾನಯಾನ ಸಮಿತಿಯಾದ ಡಿಜಿಸಿಎ ಘಟನೆ ಸಂಬಂಧ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.
ಭಾರೀ ಮಳೆಯಿಂದಾಗಿ ರನ್ ವೇಯಿಂದ ವಿಮಾನ ಜಾರಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ದುರಂತ ತಪ್ಪಿಸಲು ವಿಮಾನದ ಪೈಲಟ್ ಹರಸಾಹಸ ಪಟ್ಟಿದ್ದಾರೆ. ಮಳೆಯ ಮಧ್ಯೆ ಉಬ್ಬಿದ ರನ್ ವೇಯಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಲು ಪೈಲಟ್ ಎರಡು ಬಾರಿ ಪ್ರಯತ್ನಿಸಿದ್ದು ತಿಳಿದುಬಂದಿದೆ. ಅಷ್ಟೇ ಅಲ್ಲ, ವಿಮಾನ ಇಳಿಯುವ ಮುನ್ನ ಹಲವು ಬಾರಿ ಏರ್ಪೋರ್ಟ್ ಅನ್ನು ವಿಮಾನ ಸುತ್ತಾಡಿದೆ. ಜಾಗತಿಕವಾಗಿ ವಿಮಾನಗಳನ್ನ ಲೈವ್ ಆಗಿ ಟ್ರ್ಯಾಕ್ ಮಾಡುವ ಫ್ಲೈಟ್ ರ್ಯಾಡರ್ 24 ಎಂಬ ಫ್ಲೈಟ್ ಟ್ರ್ಯಾಕರ್ ವೆಬ್ಸೈಟ್ನಲ್ಲಿನ ಮಾಹಿತಿಯಲ್ಲಿ ಇದು ಬೆಳಕಿಗೆ ಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ