ಪ್ರಗತಿವಾಹಿನಿ ಸುದ್ದಿ; ತಿರುವನಂತಪುರಂ: ಎರಡು ವರ್ಷಗಳಿಂದ ಪ್ರೀತಿಸಿ ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾದ ನವ ದಂಪತಿ ಇದೀಗ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕೇರಳದ ಆಲಪ್ಪುಳ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ಪಂಥಾಲಂ ಮೂಲದ ಜಿಥಿನ್ (27) ಮತ್ತು ಪತ್ನಿ ದೇವಿಕಾ ದಾಸ್ (20) ಎಂದು ಗುರುತಿಸಲಾಗಿದೆ. ಚೆನ್ನಿತಾಲದ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಜಿಥಿನ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ದೇವಿಕಾ ದಾಸ್ ಹಾಸಿಗೆಯ ಮೇಲೆ ಶವವಾಗಿ ಪತ್ತೆಯಾಗಿದ್ದಾಳೆ.
ಮೃತ ಜಿಥಿನ್ ಪೇಂಟಿಂಗ್ ಕೆಲಸ ಮಾಡುತ್ತಿದ್ದನು. ಮೇ 6 ರಂದು ಪಂಥಲಂನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಇವರಿಬ್ಬರು ಮದುವೆಯಾಗಿದ್ದರು. ಜಿಥಿನ್ ಮತ್ತು ದೇವಿಕಾ ದಾಸ್ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಮನೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದರಿಂದ ಎರಡು ವರ್ಷದ ಹಿಂದೆ ಇಬ್ಬರು ಓಡಿ ಹೋಗಿದ್ದರು. ಆಗ ದೇವಿಕಾ ದಾಸ್ ಅಪ್ರಾಪ್ತೆಯಾಗಿದ್ದಳು. ಹೀಗಾಗಿ ಪೊಲೀಸರು ಜಿಥಿನ್ ವಿರುದ್ಧ ಪೋಕ್ಸೋ ಪ್ರಕರಣವನ್ನು ದಾಖಲಿಸಿದ್ದರು. ನಂತರ ಪೊಲೀಸರು ಇಬ್ಬರನ್ನು ಪತ್ತೆ ಮಾಡಿ ನ್ಯಾಯಲಯದ ಮುಂದೆ ಹಾಜರು ಪಡಿಸಿದ್ದರು. ಈ ವೇಳೆ ಜಿಥಿನ್ ಜೊತೆ ಹೋಗಲು ಹುಡುಗಿ ಬಯಸಿದ್ದರಿಂದ ನ್ಯಾಯಾಲಯವು ಅವಳನ್ನು ಚೆರ್ಥಾಲಾ ಬಾಲಮಂದಿರದಲ್ಲಿ ಇರಿಸುವಂತೆ ಆದೇಶ ನೀಡಿತ್ತು. ಎರ್ನಾಕುಲಂನ ಖಾಸಗಿ ಮಾಲ್‍ನಲ್ಲಿ ದೇವಿಕಾ ದಾಸ್ ಕೆಲಸ ಮಾಡುತ್ತಿದ್ದಳು. ಅಂತಿಮವಾಗಿ ಈ ಜೋಡಿ ಎರಡು ತಿಂಗಳ ಹಿಂದೆ ವಿವಾಹವಾಗಿದ್ದರು. ಚೆನ್ನಿತಾಲಾದ ಬಾಡಿಗೆ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದ್ದರು. ಜಿಥಿನ್ ಪೇಂಟಿಂಗ್ ಕೆಲಸಕ್ಕೆ ಹೋಗುತ್ತಿದ್ದ.
ಜಿಥಿನ್ ಕೆಲಸಕ್ಕೆ ಬಾರದ ಹಿನ್ನಲೆಯಲ್ಲಿ ಗುತ್ತಿಗೆದಾರ ಅವರ ಮನೆಗೆ ಭೇಟಿ ನೀಡಿದ್ದಾಗ ದಂಪತಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ತಕ್ಷಣ ಆತ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ