ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಿರೂಪಣೆಯಲ್ಲಿ ಕರಣ್ ಜೋಹರ್ ಅವರ ಅನುಭವ ದೊಡ್ಡದು. ಈಗ ಅವರು ‘ಕೆಜಿಎಫ್: ಚಾಪ್ಟರ್ 2’ ಟ್ರೇಲರ್ ಬಿಡುಗಡೆ ಸಮಾರಂಭದ ನಿರೂಪಣೆ ಮಾಡಲು ಒಪ್ಪಿಕೊಂಡಿದ್ದಾರೆ.
ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಸ್ಥಾನ ಪಡೆದಿರುವ ‘ಕೆಜಿಎಫ್: ಚಾಪ್ಟರ್ 2’ ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭ ಆಗಿದೆ. ಚಿತ್ರದ ಪ್ರಚಾರಕ್ಕಾಗಿ ಹತ್ತು-ಹಲವು ಪ್ಲ್ಯಾನ್ಗಳನ್ನು ಮಾಡಿಕೊಳ್ಳಲಾಗಿದೆ. ಆ ಪೈಕಿ ಟ್ರೇಲರ್ (KGF Chapter 2 Trailer) ರಿಲೀಸ್ ಕಾರ್ಯಕ್ರಮದ ಬಗ್ಗೆ ದೊಡ್ಡ ಮಟ್ಟದ ಕಾತರ ಮೂಡಿದೆ. ಯಾಕೆಂದರೆ ಇದು ಪ್ಯಾನ್ ಇಂಡಿಯಾ ಸಿನಿಮಾ. ಎಲ್ಲ ರಾಜ್ಯಗಳಲ್ಲೂ ‘ಕೆಜಿಎಫ್ ಚಾಪ್ಟರ್ 2’ ಚಿತ್ರ ಧೂಳೆಬ್ಬಿಸುವುದು ಖಚಿತ. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆಯೇ ‘ಕೆಜಿಎಫ್ 2’ ಟ್ರೇಲರ್ ಬಿಡುಗಡೆ ಮಾಡಲು ‘ಹೊಂಬಾಳೆ ಫಿಲ್ಮ್ಸ್’ ನಿರ್ಧರಿಸಿದೆ. ಟ್ರೇಲರ್ ಬಿಡುಗಡೆ ಕಾರ್ಯಕ್ರಮದ ನಿರೂಪಣೆಗೆ ಕರಣ್ ಜೋಹರ್ (Karan Johar) ಅವರನ್ನು ಆಹ್ವಾನಿಸಲಾಗುತ್ತಿದೆ. ಈ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಹಲವು ವರ್ಷಗಳಿಂದ ಅನೇಕ ಪ್ರತಿಷ್ಠಿತ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ ಅನುಭವ ಕರಣ್ ಜೋಹರ್ ಅವರಿಗೆ ಇದೆ. ಈಗ ಅವರು ಕನ್ನಡ ಸಿನಿಮಾದ ಸಲುವಾಗಿ ಬೆಂಗಳೂರಿಗೆ ಬಂದು ನಿರೂಪಣೆ ಮಾಡಲಿದ್ದಾರೆ. ಯಶ್ ಅಭಿಮಾನಿಗಳು ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಕಾದಿದ್ದಾರೆ. ಈ ಇವೆಂಟ್ನಲ್ಲಿ ನಟ ಶಿವರಾಜ್ಕುಮಾರ್ ಅವರು ಮುಖ್ಯ ಅತಿಥಿ ಆಗಿರಲಿದ್ದಾರೆ ಎಂಬುದು ಕೂಡ ವಿಶೇಷ.
ಬೆಂಗಳೂರಿನಲ್ಲಿ ಮಾ.27ರಂದು ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರು, ಕಲಾವಿದರಾದ ಯಶ್, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಮುಂತಾದವರು ಭಾಗಿ ಆಗಲಿದ್ದಾರೆ. ಬೇರೆ ಬೇರೆ ರಾಜ್ಯಗಳಿಂದ ಪತ್ರಕರ್ತರನ್ನು ಆಹ್ವಾನಿಸಲಾಗಿದೆ. ಅದ್ದೂರಿಯಾಗಿ ನಡೆಯುವ ಈ ಕಾರ್ಯಕ್ರಮವನ್ನು ಕರಣ್ ಜೋಹರ್ ನಡೆಸಿಕೊಡಲಿದ್ದಾರೆ.
ನಿರೂಪಣೆಯಲ್ಲಿ ಕರಣ್ ಜೋಹರ್ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ‘ಕಾಫಿ ವಿಥ್ ಕರಣ್’, ‘ಕಾಲಿಂಗ್ ಕರಣ್’, ‘ವಾಟ್ ದ ಲವ್’ ಮುಂತಾದ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ಬಾಲಿವುಡ್ನ ಅನೇಕ ಅವಾರ್ಡ್ ಫಂಕ್ಷನ್ಗಳನ್ನು ಅವರು ನಿರೂಪಿಸಿದ್ದಾರೆ. ‘ಹಿಂದಿ ಬಿಗ್ ಬಾಸ್ ಒಟಿಟಿ’ ಶೋ ಕೂಡ ಕರಣ್ ಜೋಹರ್ ಅವರ ನಿರೂಪಣೆಯಲ್ಲೇ ಮೂಡಿಬಂದಿತ್ತು. ತುಂಬ ಲವಲವಿಕೆಯಿಂದ ಅವರು ಮಾಡುವ ನಿರೂಪಣೆ ಜನರಿಗೆ ಸಖತ್ ಇಷ್ಟ ಆಗುತ್ತದೆ. ಆದರೆ ಅದೆಲ್ಲವೂ ಹಿಂದಿ ಸಿನಿಮಾಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳು. ಈ ಬಾರಿ ಅವರು ಕನ್ನಡ ಸಿನಿಮಾದ ಈ ಕಾರ್ಯಕ್ರಮವನ್ನು ಹೇಗೆ ನಿರೂಪಿಸಬಹುದು ಎಂಬ ಕೌತುಕ ಮನೆ ಮಾಡಿದೆ.
ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾ ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ಮಲಯಾಳಂ ಹಾಗೂ ತೆಲುಗು ಭಾಷೆಗಳಿಗೂ ಡಬ್ ಆಗಿ ಏ.14ರಂದು ಅದ್ದೂರಿಯಾಗಿ ಬಿಡುಗಡೆ ಆಗಲಿದೆ. ಈಗಾಗಲೇ ರಿಲೀಸ್ ಆಗಿರುವ ‘ತೂಫಾನ್..’ ಹಾಡು ಧೂಳೆಬ್ಬಿಸುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ