ಖಾನಾಪುರ ಶಾಸಕರ ಕಚೇರಿ ಪ್ರಹಸನ: ಬೆಳಗ್ಗೆ ಆರಂಭ; ಸಂಜೆ ಬೀಗ!
ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾದ ಶಾಸಕರ ಕಚೇರಿ ಪ್ರಕರಣ
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಪಟ್ಟಣದಲ್ಲಿ ಶಾಸಕರ ಕಚೇರಿಯನ್ನು ಆರಂಭಿಸುವ ಪ್ರಕರಣ ಈಗ ರಾಜಕೀಯ
ಜಿದ್ದಾಜಿದ್ದಿಗೆ ಕಾರಣವಾಗಿದ್ದು, ಈಗಾಗಲೇ ಶನಿವಾರ ಮುಂಜಾನೆ ಉದ್ಘಾಟನೆಗೊಂಡಿದ್ದ
ಶಾಸಕರ ಕಚೇರಿಯನ್ನು ಬಂದ್ ಮಾಡಿಸುವಂತೆ ಸಂಜೆ ಕಾಂಗ್ರೆಸ್ ಅಧಿಕಾರಿಗಳಿಗೆ ಮನವಿ
ಸಲ್ಲಿಸಿದ್ದು, ಕಾಂಗ್ರೆಸ್ ಮನವಿಗೆ ಬೆಂಬಲ ಸೂಚಿಸಿದ ಅಧಿಕಾರಿಗಳು ಪೊಲೀಸರ
ಬಂದೋಬಸ್ತ್ ನಲ್ಲಿ ಶಾಸಕರ ಕಚೇರಿಯನ್ನು ಬಂದ್ ಮಾಡಿಸಿದ್ದಾರೆ.
ಶಾಸಕರ ಜನಸಂಪರ್ಕ ಕಚೇರಿ ಆರಂಭಿಸುವ ಪ್ರಕರಣ ಹಾಲಿ ಮತ್ತು ಮಾಜಿ ಶಾಸಕರ ನಡುವಿನ ಶೀತಲಸಮರಕ್ಕೆ
ಕಾರಣವಾಗಿದೆ.
ಖಾನಾಪುರ ಕ್ಷೇತ್ರದ ನೂತನ ಶಾಸಕ ವಿಠಲ ಹಲಗೇಕರ ಪಟ್ಟಣದ ಜಾಂಬೋಟಿ ರಸ್ತೆಯಲ್ಲಿರುವ ಡಿ
ದೇವರಾಜ್ ಅರಸ್ ಭವನವನ್ನು ಶಾಸಕರ ಕಚೇರಿಯ ಸ್ಥಾಪನೆಗಾಗಿ ಒದಗಿಸುವಂತೆ ಕಳೆದ
ಜು.21ರಂದು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಗೆ ಪತ್ರ ಬರೆದಿದ್ದರು.
ಶಾಸಕರ ಪತ್ರಕ್ಕೆ ಸ್ಪಂದಿಸಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳು ಇದಕ್ಕೆ
ಮೌಖಿಕವಾಗಿ ಸಮ್ಮತಿ ನೀಡಿದ್ದರಿಂದ ಶಾಸಕರ ಬೆಂಬಲಿಗರು ದೇವರಾಜ್ ಅರಸು ಭವನ ಒಳಗೆ
ಮತ್ತು ಹೊರಗೆ ಶಾಸಕರ ಕಚೇರಿ ಸ್ಥಾಪನೆಗೆ ಬೇಕಾದ ಸಿದ್ಧತೆಗಳನ್ನು ನಡೆಸಿದ್ದರು.
ಶನಿವಾರ ಶಾಸಕ ವಿಠ್ಠಲ ಹಲಗೇಕರ ತಾಲ್ಲೂಕಿನ ರಾಜಕೀಯ ಮುಖಂಡರು ಮತ್ತು ಗಣ್ಯರ
ಉಪಸ್ಥಿತಿಯಲ್ಲಿ ಕಚೇರಿ ಉದ್ಘಾಟಿಸಿದ್ದರು.
ಶಾಸಕರ ಕಚೇರಿಯ ಉದ್ಘಾಟನೆಯ ಮಾಹಿತಿ ಪಡೆದ ಬಳಿಕ ಬ್ಲಾಕ್ ಕಾಂಗ್ರೆಸ್ ದೇವರಾಜ್ ಅರಸು
ಭವನವನ್ನು ಶಾಸಕರ ಕಚೇರಿ ಆರಂಭಿಸಲು ನೀಡಿರುವ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳ
ಕ್ರಮವನ್ನು ಖಂಡಿಸಿ ತಹಸೀಲ್ದಾರ್ ಹಾಗೂ ಇತರೆ ಅಧಿಕಾರಿಗಳಿಗೆ ಮನವಿಯನ್ನು
ಸಲ್ಲಿಸಿತ್ತು. ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳಕರ ಅವರೂ ಸಹ ಈ ವಿಷಯವನ್ನು
ಖಂಡಿಸಿದ್ದರು. ಕಾಂಗ್ರೆಸ್ ಪಕ್ಷದ ಒತ್ತಡಕ್ಕೆ ಮಣಿದ ಅಧಿಕಾರಿಗಳು ಕೂಡಲೇ ಶಾಸಕರಿಗೆ
ನೀಡಿದ ಕಚೇರಿಯನ್ನು ಹಿಂಪಡೆಯುವಂತೆ ತಾಲ್ಲೂಕು ಆಡಳಿತಕ್ಕೆ ಸೂಚಿಸಿದ ಹಿನ್ನೆಲೆಯಲ್ಲಿ
ಶನಿವಾರ ದೇವರಾಜ್ ಅರಸು ಭವನಕ್ಕೆ ಭೇಟಿ ನೀಡಿದ ಅಧಿಕಾರಿಗಳು ಪೊಲೀಸರ ನೆರವಿನಿಂದ
ಶಾಸಕರ ಕಚೇರಿಯನ್ನು ಬಂದ್ ಮಾಡಿಸಿದರು.
ಶಾಸಕರ ಕಚೇರಿಯನ್ನು ಬಂದ್ ಮಾಡಿಸಿದ ಅಧಿಕಾರಿಗಳ ಕ್ರಮವನ್ನು ಕಾಂಗ್ರೆಸ್ ಪಕ್ಷ
ಸ್ವಾಗತಿಸಿದ್ದು, ಬಿಜೆಪಿ ತೀವ್ರವಾಗಿ ಖಂಡಿಸಿದೆ. ಸಧ್ಯ ಈ ಪ್ರಕರಣ
ತಾಲ್ಲೂಕಿನಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಖಾನಾಪುರ ಮತಕ್ಷೇತ್ರದ ಜನತೆಯ ಅನುಕೂಲಕ್ಕಾಗಿ ದೇವರಾಜ ಅರಸು ಭವನದಲ್ಲಿ ಶಾಸಕರ ಕಚೇರಿ ಆರಂಭಿಸಲು ಅನುವು ಮಾಡಿಕೊಡಲು ಸಂಬಂಧಿಸಿದ ಅಧಿಕಾರಿಗಳಿಗೆ ಜು.೨೧ರಂದು ಲಿಖಿತವಾಗಿ ಮನವಿ ಸಲ್ಲಿಸಲಾಗಿತ್ತು. ಆದರೆ ಈ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರ ಜನವಿರೋಧಿ ನೀತಿಯನ್ನು ಪ್ರದರ್ಶಿಸಿದೆ. ಅಧಿಕಾರಿಗಳೂ ಸಹ ಪಕ್ಷದ ತಾಳಕ್ಕೆ ಹೆಜ್ಜೆ ಹಾಕಿದ್ದಾರೆ. ಶಾಸಕರ ಕಚೇರಿ ಪ್ರಕರಣವನ್ನು ಪಕ್ಷದ ವರಿಷ್ಠರು ಮತ್ತು ವಿಧಾನಸಭಾ ಅಧ್ಯಕ್ಷರ ಗಮನಕ್ಕೆ ತರಲಾಗುತ್ತದೆ. ಸಧ್ಯ ಪಕ್ಷದ ಆದೇಶದ ಮೇರೆಗೆ ತೆಲಂಗಾಣ ರಾಜ್ಯದ ಪ್ರವಾಸದಲ್ಲಿದ್ದು, ಮರಳಿದ ಬಳಿಕ ಖಾನಾಪುರ ಪ್ರಮುಖ ರಸ್ತೆಯ ಮಧ್ಯದಲ್ಲಿ ಶಾಸಕರ ಕಚೇರಿ ಆರಂಭಿಸಲಾಗುವುದು. ತಾಕ್ಕತ್ತಿದ್ದರೆ ಕಾಂಗ್ರೆಸ್ ಅದನ್ನೂ ತಡೆದು ತೋರಿಸಲಿ.
-ವಿಠ್ಠಲ ಹಲಗೇಕರ, ಶಾಸಕರು.
ಶಾಸಕರ ಕಚೇರಿ ಪ್ರಕರಣದ ಬಗ್ಗೆ ಮಾಹಿತಿ ಪಡೆಯಲು ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ಕರೆ ಮಾಡಿದರೆ ಅವರು ಕರೆ ಸ್ವೀಕರಿಸಲಿಲ್ಲ.
ಖಾನಾಪುರ ಶಾಸಕರು ಹಿಂದುಳಿದ ವರ್ಗಗಳ ಜನರ ಬಳಕೆಗಾಗಿ ಮೀಸಲಿದ್ದ ದೇವರಾಜ ಅರಸು ಭವನವನ್ನು ತಮ್ಮ ಕಚೇರಿ ನಿರ್ಮಿಸಲು ಬಳಕೆ ಮಾಡಿದ್ದನ್ನು ಕಾಂಗ್ರೆಸ್ ಪಕ್ಷ ಖಂಡಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿತ್ತು.ಪಕ್ಷದ ಮನವಿ ಪುರಸ್ಕರಿಸಿದ ಅಧಿಕಾರಿಗಳು ಶಾಸಕರ ಕಚೇರಿಗೆ ದೇವರಾಜ ಅರಸು ಭವನವನ್ನು ಶಾಸಕರಿಂದ ವಶಪಡಿಸಿಕೊಂಡಿದ್ದಾರೆ. ಹಿಂದುಳಿದ ವರ್ಗಗಳ ಜನರಿಗಾಗಿ ಮೀಸಲಿದ್ದ ಕಟ್ಟಡವನ್ನು ಮರಳಿ ಅವರ ಉಪಯೋಗಕ್ಕೆ ಒದಗಿಸಲು ಪಕ್ಷ ಕೈಗೊಂಡ ಪ್ರಯತ್ನಕ್ಕೆ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳಕರ ಅವರ ಬೆಂಬಲ ದೊರೆತಿದ್ದರಿಂದ ಹಿಂದುಳಿದ ವರ್ಗಗಳ ಜನರಿಗೆ ಅನುಕೂಲ ಆಗಿದೆ.
– ಮಹಾದೇವ ಕೋಳಿ, ಬ್ಲಾಕ್ ಅಧ್ಯಕ್ಷ ಹಾಗೂ ಕೆಪಿಸಿಸಿ ಸದಸ್ಯ ಖಾನಾಪುರ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ