
ನೊಂದ ವಿದ್ಯಾರ್ಥಿನಿಗೆ ನ್ಯಾಯ ಒದಗಿಸಿಕೊಡಲು ಆಗ್ರಹ
ಪ್ರಗತಿವಾಹಿನಿಸುದ್ದಿ, ಖಾನಾಪುರ : ಗುರು- ಶಿಷ್ಯೆ ಸರಸದಿಂದ ಪರಸ್ಪರ ತುಟಿಯಿಂದ ತುಟಿಗೆ ಮುತ್ತಿಟ್ಟು ಸರಸ ಸಲ್ಲಾಪ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯಲ್ಲಿ ಭಾಗಿಯಾದ ಶಿಕ್ಷಕನ ರಕ್ಷಣೆಗೆ ಶಿಕ್ಷಕರ ಸಂಘಟನೆ ಮತ್ತು ರಾಜಕೀಯ ಮುಖಂಡರು ನಿಂತಿದ್ದು, ಘಟನೆಯಿಂದ ನೊಂದಿರುವ ವಿದ್ಯಾರ್ಥಿನಿಗೆ ನ್ಯಾಯ ಒದಗಿಸಿಕೊಡಲು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ.
ಏನಿದು ಪ್ರಕರಣ….?
ತಾಲೂಕಿನ ಖಾಸಗಿ ಪ್ರೌಢಶಾಲೆಯೊಂದರ ಶಿಕ್ಷಕ ಅದೇ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿಯೊಂದಿಗೆ ಖಾಸಗಿಯಾಗಿ ಇರುವ ಕೆಲ ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ಹರಿಯದಾಡುತ್ತಿವೆ. ಶಿಕ್ಷಕನ ಕಲ್ಯಾಣ ಗುಣದ ಬಗ್ಗೆ ಮಾಹಿತಿ ದೊರೆಯುತ್ತಲೇ ಪ್ರೌಢಶಾಲೆಯ ಆಡಳಿತ ಮಂಡಳಿ ಶಿಕ್ಷಕನನ್ನು ಶನಿವಾರ ಕರ್ತವ್ಯದಿಂದ ಬಿಡುಗಡೆಗೊಳಿಸಿದೆ.
ಇತ್ತ ತನ್ನ ಮಗಳ ವರ್ತನೆಯಿಂದ ಮನನೊಂದ ಪೋಷಕರು ಕಳೆದೊಂದು ವಾರದಿಂದ ಆಕೆ ಶಾಲೆಗೆ ಹೋಗುವುದನ್ನು ಬಿಡಿಸಿ ಮನೆಯಲ್ಲಿರಿಸಿಕೊಂಡಿದ್ದಾರೆ.
ತನ್ನ ಶಿಕ್ಷಕನ ಜೊತೆ ವಿಡಿಯೋದಲ್ಲಿರುವಾಕೆ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಾಳೆ. ಓದಿನಲ್ಲಿ ಮುಂದಿದ್ದಾಳೆ. ತೀರಾ ಬಡ ಕುಟುಂಬದಿಂದ ಬಂದಿರುವ ಆಕೆ ಕಷ್ಟಪಟ್ಟು ಓದುತ್ತಿದ್ದಾಳೆ.
ಆದರೆ ಆಕೆ ಎಲ್ಲರೊಂದಿಗೆ ಸಲುಗೆಯಿಂದ ಇರುವುದನ್ನು ಗಮನಿಸಿದ್ದ ಶಿಕ್ಷಕ ಕಳೆದ ಕೆಲದಿನಗಳಿಂದ ಆಕೆಯನ್ನು ಪ್ರೀತಿಸತೊಡಗಿದ್ದ. ಅವರಿಬ್ಬರೂ ಶಾಲೆಯಲ್ಲಿ ಬಹಳ ಸಲುಗೆಯಿಂದ ಇರುತ್ತಿದ್ದರು. ಕೆಲದಿನಗಳ ಹಿಂದೆ ಶಾಲೆಯ ಅಟೆಂಡರ್ ಮನೆಯ ಮಂಗಳ ಕಾರ್ಯವೊಂದರಲ್ಲಿ ಭಾಗವಹಿಸಲು ಆಕೆಯನ್ನು ಶಿಕ್ಷಕರು ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದರು. ಆಗ ಇವರಿಬ್ಬರೂ ಖಾಸಗಿಯಾಗಿ ಕಳೆದಿದ್ದ ಕೆಲ ವಿಡಿಯೋಗಳನ್ನು ಶಿಕ್ಷಕರು ತಮ್ಮ ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದರು.
ಶಿಕ್ಷಕರ ಮೊಬೈಲ್ನಲ್ಲಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭಿಸಿದ ಬಳಿಕ ಆಕೆ ಮಾನಸಿಕವಾಗಿ ನೊಂದಿದ್ದಾಳೆ. ಆಕೆಗೆ ನ್ಯಾಯ ಒದಗಿಸಿಕೊಡಬೇಕು ಎಂದು ನೊಂದ ವಿದ್ಯಾರ್ಥಿನಿಯ ಸಹಪಾಠಿಗಳು ಮತ್ತು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳು ಸಂಬಂಧಪಟ್ಟವರನ್ನು ಆಗ್ರಹಿಸಿದ್ದಾರೆ.
ಒಟ್ಟಾರೆ ಗುರುಶಿಷ್ಯರ ನಡುವಿನ ಪವಿತ್ರ ಸಂಬಂಧಕ್ಕೆ ಧಕ್ಕೆ ತರುವ ರೀತಿಯಲ್ಲಿ ನಡೆದಿರುವ ಈ ಘಟನೆ ತಾಲೂಕಿನಲ್ಲಿ ಸಧ್ಯ ಗಂಭೀರ ಚರ್ಚೆಯ ವಿಷಯವಾಗಿದೆ. ಸಧ್ಯ ಚುನಾವಣಾ ಪರ್ವ ಆರಂಭವಾಗಿದ್ದು, ಆರೋಪಿ ಶಿಕ್ಷಕನಿಗೆ ಸಮಸ್ಯೆ ಉಂಟು ಮಾಡಿದರೆ ಇಡೀ ಶಿಕ್ಷಕ ಸಮುದಾಯದ ಕೆಂಗಣ್ಣಿಗೆ ಗುರಿಯಾಗಬಹುದು ಎಂಬ ದೃಷ್ಟಿಯಿಂದ ತಾಲೂಕಿನ ರಾಜಕೀಯ ನಾಯಕರು ಮೌನ ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇಂತಹ ಗಂಭೀರ ವಿಷಯದಲ್ಲಿ ನೊಂದ ವಿದ್ಯಾರ್ಥಿನಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಮೀನಮೀಷ ಎಣಿಸುತ್ತಿರುವ ತಾಲೂಕಿನ ರಾಜಕೀಯ ಮುಖಂಡರ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಇದುವರೆಗೂ ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.
ಮದುವೆ ಮುನ್ನಾ ದಿನ ಕುಸಿದು ಬಿದ್ದು ಮೃತಪಟ್ಟ ಯುವತಿ
https://pragati.taskdun.com/girl-died-previous-day-of-her-marriage/
					
				
					
					
					
					
					
					
					

