*ಸ್ತ್ರೀಕುಲ ಎಂದೂ ವಿಶ್ವಾಸದ್ರೋಹ ಮಾಡುವುದಿಲ್ಲ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್*


ಪ್ರಗತಿವಾಹಿನಿ ಸುದ್ದಿ; ಕಿತ್ತೂರು: ಮಹಿಳೆಗೆ ಯಾವುದೇ ಜವಾಬ್ದಾರಿ ನೀಡಿದರೂ ಅಚ್ಚುಕಟ್ಟಾಗಿ ನಿರ್ವಹಿಸುತ್ತಾಳೆ. ವಿಶ್ವಾಸದ್ರೋಹವನ್ನು ಸ್ತ್ರೀಕುಲ ಎಂದೂ ಮಾಡುವುದಿಲ್ಲ. ಆದರೆ ಓರ್ವ ಮಹಿಳೆ ಇನ್ನೋರ್ವ ಮಹಿಳೆಯನ್ನು ಸಹಿಸಿಕೊಳ್ಳುವುದಿಲ್ಲ ಎನ್ನುವ ಅಪವಾದವಿದೆ. ನಾವೆಲ್ಲ ಒಂದಾಗಿ ಮಹಿಳಾ ಶಕ್ತಿಗೆ ನಾಂದಿ ಹಾಡಬೇಕಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕರೆ ನೀಡಿದರು.

ಕಿತ್ತೂರಿನಲ್ಲಿ ನಡೆಯುತ್ತಿರುವ ಕಿತ್ತೂರು ರಾಣಿ ಚೆನ್ನಮ್ಮ ವಿಜಯೋತ್ಸವದ ಮೂರನೇ ದಿನವಾದ ಬುಧವಾರ ನಡೆದ ರಾಜ್ಯ ಮಟ್ಟದ ಮಹಿಳಾಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚಂದ್ರಯಾನ ಸೇರಿದಂತೆ ಪ್ರತಿಯೊಂದು ಸಾಧನೆಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಈಗ ರಾಜಕೀಯದಲ್ಲಿಯೂ ಶೇ.೩೩ರಷ್ಟು ಮೀಸಲಾತಿ ಘೋಷಣೆಯಾಗಿದೆ. ಕೊರೊನಾದಂತಹ ಸಂಕಷ್ಟದ ಸಂದರ್ಭದಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ದೇವರಂತೆ ಕಷ್ಟದಲ್ಲಿರುವವರ ಸಹಾಯಕ್ಕೆ ಬಂದಿದ್ದಾರೆ ಎಂದು ಹೇಳಿದರು.
ಮಹಿಳೆಯನ್ನು ಹಿಂದಿನಿಂದಲು ಮನೆಗೆ ಸೀಮಿತಗೊಳಿಸಲಾಗಿತ್ತು. ನಮ್ಮ ಸರ್ಕಾರ ಬಂದ ನಂತರ ಹಲವಾರು ಯೋಜನೆಗಳ ಮೂಲಕ ಆರ್ಥಿಕ ಸಬಲೀಕರಣಕ್ಕೆ ಮಹಿಳೆಯರ ಸ್ವಾಭೀಮಾನಕ್ಕೆ ಒತ್ತು ನೀಡಲಾಗಿದೆ. ಮಹಿಳೆಗೆ ಯಜಮಾನಿ ಸ್ಥಾನ ನಿಡುವ ಮೂಲಕ ಗೌರವ ನೀಡಲಾಗಿದೆ ಎಂದು ಹೆಬ್ಬಾಳ್ಕರ್ ಹೇಳಿದರು.

ಕಿತ್ತೂರು ರಾಣಿ ಚನ್ನಮ್ಮ ಮಹಿಳೆಯರ ಸ್ವಾಭಿಮಾನ, ಹೋರಾಟದ ಕಿಚ್ಚು ಹಾಗೂ ಜೀವನ ಸ್ಪೂರ್ತಿಯ ಸಂಕೇತ. ನಾನು ಮೊದಲಿನಿಂದಲೂ ಚನ್ನಮ್ಮನ ಆದರ್ಶವನ್ನು ಮೈಗೂಡಿಸಿಕೊಂಡು ನಡೆಯಲು ಪ್ರಯತ್ನಿಸುತ್ತಿದ್ದೇನೆ. ಗ್ರಾಮೀಣ ಭಾಗದ ಮಹಿಳೆಯರು ತಮ್ಮ ಕುಟುಂಬ, ಮಕ್ಕಳ ವಿದ್ಯಾಭ್ಯಾಸಗಳಿಗಾಗಿ ದಿನವಿಡಿ ಹೋರಾಡುವುದನ್ನು ಹತ್ತಿರದಿಂದ ನೋಡಿದ್ದೇನೆ ಎಂದರು.
ಹಿರಿಯ ಪತ್ರಕರ್ತೆ, ರಾಜ್ಯ ಲೇಖಕಿಯರ ಸಂಘದ ಕಾರ್ಯದರ್ಶಿ ಭಾರತಿ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ ಮಾಜಿ ಸದಸ್ಯೆ ರೋಹಿಣಿ ಪಾಟೀಲ ಆಶಯ ಮಾತುಗಳನ್ನಾಡಿದರು. ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ವಿಚಾರಸಂಕಿರಣದಲ್ಲಿ ರಾಣಿ ಚನ್ನಮ್ಮ ಹಾಗೂ ಜೀವನ ಹೋರಾಟದ ರೂಪಕವಾಗಿ ಮಹಿಳೆ ವಿಷಯವಾಗಿ ಡಾ.ಮಾನಸಾ ಮಾತನಾಡಿದರು.
ಕಿತ್ತೂರು ರಾಣಿ ಚನ್ನಮ್ಮ ಹಾಗೂ ಮಹಿಳಾ ಸಬಲೀಕರಣ ವಿಷಯವಾಗಿ ಡಾ.ಸುಜಾತಾ ಕೊಂಬಳಿ ಮಾತನಾಡಿದರು. ಕಿತ್ತೂರು ಸಂಸ್ಥಾನ ಹಾಗೂ ರಾಣಿ ಚನ್ನಮ್ಮ ವಿಷಯವಾಗಿ ಡಾ.ಸಾವಿತ್ರಿ ಕಮಲಾಪುರ, ಸ್ವಾಭಿಮಾನದ ಹೆಗ್ಗುರುತಾಗಿ ರಾಣಿ ಚನ್ನಮ್ಮ ವಿಷಯವಾಗಿ ಡಾ.ಸಂಗೀತಾ ಕುಸುಗಲ್, ಕಿತ್ತೂರು ರಾಣಿ ಚನ್ನಮ್ಮ ಹಾಗೂ ಪ್ರಸ್ತುತತೆ ವಿಷಯವಾಗಿ ಜಯಶ್ರೀ ಚುನಮರಿ, ಕಿತ್ತೂರು ಅಂದು- ಇಂದು ವಿಷಯವಾಗಿ ಭಾರತಿ ಮದಭಾವಿ, ರಾಣಿ ಚನ್ನಮ್ಮಳ ಆಡಳಿತ ಹಾಗೂ ಮಮತಾಮಯಿ ವಿಷಯವಾಗಿ ಸ್ವಾತಿ ರಾವ್, ರಾಣಿ ಚನ್ನಮ್ಮ ಹಾಗೂ ಬ್ರಿಟಿಷರು ವಿಷಯವಾಗಿ ಮೀನಾಕ್ಷಿ ದೀಪಕ್, ಕಿತ್ತೂರು ಚನ್ನಮನ ಆಡಳಿತದ ವೈಜ್ಞಾನಿಕ ದೃಷ್ಟಿಕೋನ ವಿಷಯವಾಗಿ ಭಾರತಿ ಮಠದ್ ಮಾತನಾಡಿದರು.
ಕಾರ್ಯಕ್ರಮವನ್ನು ಹಿರಿಯ ಉಪನ್ಯಾಸಕಿ ವಿನೋದಾ ಅಂಗಡಿ ನಿರೂಪಿಸಿದರು.

ಈ ವೇಳೆ ಸಚಿವರನ್ನು ಕಾರ್ಯಕ್ರಮದ ಆಯೋಜಕರ ಪರವಾಗಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಹುಮಾನ ವಿತರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ