*ಕೆ.ಪಿ.ಮೊಖಾಶಿ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳೊಂದಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಂವಾದ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ : ಕಿತ್ತೂರು ತಾಲ್ಲೂಕಿನ ಹೂಲಿಕಟ್ಟಿ ಗ್ರಾಮದ ಕೆ.ಪಿ.ಮೊಖಾಶಿ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳು ಚಳಿಗಾಲದ ಅಧಿವೇಶನದ ಮೂರನೇ ದಿನವಾದ ಇಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿದರು.
ಸುವರ್ಣ ಸೌಧದಲ್ಲಿರುವ ಸಚಿವರ ಕಚೇರಿಯಲ್ಲಿ ಭೇಟಿ ಮಾಡಿದ ವಿದ್ಯಾರ್ಥಿಗಳು ಸಂವಾದ ನಡೆಸಿದರು.
ಶಾಲೆಗೆ ಸಂಬಂಧಿಸಿದಂತೆ ಬೇಡಿಕೆಗಳನ್ನು ಮಾನ್ಯ ಸಚಿವರ ಮುಂದಿಟ್ಟರು. ಶಾಲಾ ಕಾಂಪೌಂಡ ದುರಸ್ಥಿ, ಎರಡು ಜೊತೆ ಸಮವಸ್ತ್ರವನ್ನು ಪೂರೈಸುತ್ತಿದ್ದು ಸಮವಸ್ತ್ರದ ಬಣ್ಣವನ್ನು ಬದಲಾಯಿಸಿ ವಿತರಿಸಲು ವಿನಂತಿಸಿದರು.

ಈ ಬಗ್ಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮಕ್ಕಳ ಬೇಡಿಕೆಗಳನ್ನು ಪೂರೈಸಲು ಕ್ರಮಕೈಗೊಳ್ಳುವುದಾಗಿ ಸಚಿವರು ತಿಳಿಸಿದರು.
ಈ ಹಿಂದೆ ಶಾಲಾ ಮಕ್ಕಳಿಗೆ 8ನೇ ತರಗತಿ ವರೆಗೆ ಮಾತ್ರ ಮೊಟ್ಟೆಯನ್ನು ಕೊಡುತ್ತಿದ್ದು, ಪ್ರಸ್ತುತ ಈ ಸರ್ಕಾರದ ಬಂದ ನಂತರ 10ನೇ ತರಗತಿ ವರೆಗೆ ಮುಂದುವರೆಸಿದ್ದು, ವಾರದಲ್ಲಿ ಒಂದು ಇದ್ದ ಮೊಟ್ಟೆಯನ್ನು ಎರಡಕ್ಕೆ ಹೆಚ್ಚಿಸಿರುವ ಕುರಿತು ಹಾಗೂ ಎಸ್.ಎಸ್.ಎಲ್.ಸಿ ಮುಖ್ಯ ಪರೀಕ್ಷೆಯನ್ನು ಮೂರು ಹಂತದಲ್ಲಿ ಕೈಗೊಳ್ಳುತ್ತಿರುವ ಕ್ರಮದ ಬಗ್ಗೆ ವಿದ್ಯಾರ್ಥಿಗಳು ಹರ್ಷವನ್ನು ವ್ಯಕ್ತಪಡಿಸಿ ಸಚಿವರಿಗೆ ಅಭಿನಂದನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳು ಸಚಿವರನ್ನು ಭೇಟಿಗೆ ಅವಕಾಶ ನೀಡಿದ ಕಾರಣ ಅಭಿನಂದನೆಯನ್ನು ಸಲ್ಲಿಸಿದರು.
ಮುಂದಿನ ವಾರ ಇದೇ ಶಾಲಾ ಮಕ್ಕಳೊಂದಿಗೆ ಮಧ್ಯಾಹ್ನದ ಬಿಸಿಯೂಟವನ್ನು ಮಾಡುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ