*1.64 ಕೆಜಿ ತೂಕದ ಬೃಹತ್ ಗರ್ಭಾಶಯದ ಗಡ್ಡೆ ತೆಗೆದ ಕೆಎಲ್ಇ ವೈದ್ಯರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದ ಯಳ್ಳೂರು ರಸ್ತೆಯಲ್ಲಿರುವ ಕೆಎಲ್‌ಇ ಸೆಂಟಿನರಿ ಚಾರಿಟೇಬಲ್ ಆಸ್ಪತ್ರೆಯಲ್ಲಿ 41 ವರ್ಷದ ಮಹಿಳೆಯ ಗರ್ಭಾಶಯದಲ್ಲಿದ್ದ ಬರೋಬ್ಬರಿ 1.64 ಕೆಜಿ ತೂಕದ ಬೃಹತ್ ಗಡ್ಡೆಯನ್ನು ಸಂಕೀರ್ಣ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ತೆರವುಗೊಳಿಸಲಾಗಿದೆ.
ಮಹಿಳೆಯು ಹಲವು ದಿನಗಳಿಂದ ಹೊಟ್ಟೆ ನೋವು ಸೇರಿದಂತೆ ವಿವಿಧ ದೈಹಿಕ ಸಮಸ್ಯೆಗಳಿಂದ ಬಳಲುತ್ತಿದ್ದರು. ಹೊಟ್ಟೆಯ ಭಾಗದಲ್ಲಿ ಗಡ್ಡೆ ದೊಡ್ಡದಾಗುತ್ತಾ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ಬಳಿಕ ಗಡ್ಡೆಯ ಗಾತ್ರ ಮತ್ತು ರೋಗಿಯ ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ ಶಸ್ತ್ರಚಿಕಿತ್ಸೆ ನಡೆಸಲು ವೈದ್ಯರು ನಿರ್ಧರಿಸಿದರು.
ಗರ್ಭಾಶಯದಲ್ಲಿ ಬೆಳೆಯುವ ಇಂತಹ ಗಡ್ಡೆಗಳನ್ನು ವೈದ್ಯಕೀಯವಾಗಿ ಫೈಬ್ರಾಯ್ಡ್ ಎಂದು ಕರೆಯಲಾಗುತ್ತದೆ. ಗಡ್ಡೆಗಳು ದೊಡ್ಡದಾದ ಸಂದರ್ಭದಲ್ಲಿ ಹೊಟ್ಟೆ ನೋವು, ಅತಿಯಾದ ಮುಟ್ಟಿನ ರಕ್ತಸ್ರಾವ ಹಾಗೂ ಹೊಟ್ಟೆಯಲ್ಲಿ ಭಾರವಾದ ಅನುಭವ ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈ ಪ್ರಕರಣದಲ್ಲಿ ಗಡ್ಡೆ ಬೃಹತ್ ಗಾತ್ರದಲ್ಲಿದ್ದ ಕಾರಣ ಅಬ್ಡಾಮಿನಲ್ ಹಿಸ್ಟರೆಕ್ಟಮಿ ಎಂಬ ಹೊಟ್ಟೆಯ ಮೂಲಕ ನಡೆಸುವ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಯಿತು.
ಈ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಡಾ. ಗೀತಾಂಜಲಿ ಮತ್ತು ಡಾ. ಹೊಲಿಕಟ್ಟಿ ಯಶಸ್ವಿಯಾಗಿ ನೆರವೇರಿಸಿದರು.
ಶಸ್ತ್ರಚಿಕಿತ್ಸೆಯ ವೇಳೆ ಅರಿವಳಿಕೆ ತಜ್ಞರ ತಂಡ ಸೇರಿದಂತೆ ವೈದ್ಯಕೀಯ ಹಾಗೂ ಶುಶ್ರೂಷಾ ಸಿಬ್ಬಂದಿ ಅಗತ್ಯ ಸಹಕಾರ ನೀಡಿದರು. ವೈದ್ಯರ ತಂಡದ ಪರಿಣತಿ, ಸಮನ್ವಯ ಮತ್ತು ನಿಖರವಾದ ಚಿಕಿತ್ಸಾ ನಿರ್ವಹಣೆಯಿಂದ ಸಂಕೀರ್ಣ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಶಸ್ತ್ರಚಿಕಿತ್ಸೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಆಸ್ಪತ್ರೆಯ ನಿರ್ದೇಶಕ ಡಾ. ಎಚ್.ಬಿ. ರಾಜಶೇಖರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಎನ್. ಹಾಗೂ ವೈದ್ಯಕೀಯ ಅಧೀಕ್ಷಕ ಡಾ. ಸಂಜಯ್ ಕಂಬಾರ್ ವೈದ್ಯರ ತಂಡ, ಶುಶ್ರೂಷಾ ಸಿಬ್ಬಂದಿ, ಅರಿವಳಿಕೆ ತಜ್ಞರು ಹಾಗೂ ಶಸ್ತ್ರಚಿಕಿತ್ಸಾ ಕೊಠಡಿಯ ಸಿಬ್ಬಂದಿಯ ಸೇವೆಯನ್ನು ಶ್ಲಾಘಿಸಿ ಅಭಿನಂದಿಸಿದ್ದಾರೆ.
ರೋಗಿಗಳಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಮತ್ತು ಸುರಕ್ಷಿತ ಶಸ್ತ್ರಚಿಕಿತ್ಸಾ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕೆಎಲ್‌ಇ ಸೆಂಟಿನರಿ ಚಾರಿಟೇಬಲ್ ಆಸ್ಪತ್ರೆ ತನ್ನ ಸೇವೆಯನ್ನು ಮುಂದುವರಿಸುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




