Belagavi NewsBelgaum News

*ಪ್ರಗತಿವಾಹಿನಿ ಸುದ್ದಿ ಇಂಪ್ಯಾಕ್ಟ್*: *ಲೋಡ್‌ಶೆಡ್ಡಿಂಗ್ ರದ್ದು!*

ಬೆಳಗಾವಿ ವಾಣಿಜ್ಯೋದ್ಯಮ ಸಂಘದ ತೀವ್ರ ವಿರೋಧಕ್ಕೆ ಮಣಿದ KPTCL? ನಿಗದಿತ ವಿದ್ಯುತ್ ಕಡಿತಕ್ಕೆ ಬ್ರೇಕ್!


ಪ್ರಗತಿವಾಹಿನಿ ಸುದ್ದಿ:
ಬೆಳಗಾವಿ ಉದ್ಯಮ ವಲಯಕ್ಕೆ ಮಹತ್ವದ ನಿರಾಳತೆ ಸಿಕ್ಕಿದೆ. ನಿಗದಿತ ಲೋಡ್‌ಶೆಡ್ಡಿಂಗ್‌ಗೆ ಬೆಳಗಾವಿ ವಾಣಿಜ್ಯೋದ್ಯಮ ಸಂಘ (ಚೇಂಬರ್ ಆಫ್ ಕಾಮರ್ಸ್) ತೀವ್ರ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ, ನಿಗದಿಪಡಿಸಲಾಗಿದ್ದ ವಿದ್ಯುತ್ ಕಡಿತವನ್ನು ರದ್ದುಗೊಳಿಸಲಾಗಿದೆ.


ವಾಣಿಜ್ಯೋದ್ಯಮ ಸಂಘದ ತೀವ್ರ ವಿರೋಧದ ಕುರಿತು ಪ್ರಗತಿವಾಹಿನಿ ಶುಕ್ರವಾರವೇ ವರದಿ ಪ್ರಕಟಿಸಿತ್ತು. ಇದೀಗ KPTCL ಅಧಿಕಾರಿಗಳೊಂದಿಗೆ ನಡೆದ ಸುದೀರ್ಘ ಚರ್ಚೆ ಹಾಗೂ ಪರ್ಯಾಯ ವಿದ್ಯುತ್ ನಿರ್ವಹಣಾ ಕ್ರಮಗಳ ಬಳಿಕ ನಿಗದಿತ ಲೋಡ್‌ಶೆಡ್ಡಿಂಗ್ ರದ್ದುಗೊಳಿಸಿರುವ ಮಾಹಿತಿ ಹೊರಬಿದ್ದಿದೆ.


ಪರ್ಯಾಯ ವ್ಯವಸ್ಥೆ ಮೂಲಕ ವಿದ್ಯುತ್ ನಿರ್ವಹಣೆ
ವಿದ್ಯುತ್ ವ್ಯವಸ್ಥೆಯ ಮೇಲಿನ ಹೆಚ್ಚುವರಿ ಹೊರೆ ನಿಯಂತ್ರಿಸಲು ಅಧಿಕಾರಿಗಳು ಪರ್ಯಾಯ ಕ್ರಮಗಳನ್ನು ಕೈಗೊಂಡಿದ್ದಾರೆ.


ನೀರಾವರಿ ಪಂಪ್‌ಸೆಟ್‌ಗಳ ಸಮಯ ಬದಲಾವಣೆ: ಮಾಚೆ ಮತ್ತು ಉಚಗಾವ್ 110 ಕೆವಿ ವಿದ್ಯುತ್ ಕೇಂದ್ರಗಳ ವ್ಯಾಪ್ತಿಯಲ್ಲಿ ನೀರಾವರಿ ಪಂಪ್‌ಸೆಟ್‌ಗಳ ಕಾರ್ಯಾಚರಣೆಯ ಸಮಯವನ್ನು ಮುಂಜಾನೆ ಅವಧಿಗೆ ಬದಲಾಯಿಸಲಾಗುತ್ತದೆ.


220 ಕೆವಿ ಏಕ್ವಸ್ ಕೇಂದ್ರದಲ್ಲಿ ನಿಯಂತ್ರಣ: ಈ ಅವಧಿಯಲ್ಲಿ 220 ಕೆವಿ ಏಕ್ವಸ್ ವಿದ್ಯುತ್ ಕೇಂದ್ರ ಹಾಗೂ ಅದರ ಅಧೀನದ ಕೇಂದ್ರಗಳಲ್ಲಿ ವಿದ್ಯುತ್ ಹೊರೆಯನ್ನು ನಿಯಂತ್ರಿಸಲಾಗುತ್ತದೆ.


ಉಚಗಾವ್–ಉದ್ಯಮಬಾಗ್ ಮಾರ್ಗದ ಬಳಕೆ: ಹೆಚ್ಚುವರಿ ವಿದ್ಯುತ್ ಹೊರೆಯನ್ನು ನಿರ್ವಹಿಸಲು ಉಚಗಾವ್–ಉದ್ಯಮಬಾಗ್ ವಿದ್ಯುತ್ ಮಾರ್ಗದ ಮೂಲಕವೂ ವ್ಯವಸ್ಥೆ ಮಾಡಲಾಗಿದೆ.


ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ವಿದ್ಯುತ್ ಕಡಿತ
ವಿದ್ಯುತ್ ಹೊರೆಯನ್ನು ನಿಯಂತ್ರಿಸಲು ಸಾಧ್ಯವಾಗದ ತೀವ್ರ ಪರಿಸ್ಥಿತಿಗಳು ಎದುರಾದರೆ, ವಿದ್ಯುತ್ ವ್ಯವಸ್ಥೆಯ ಸ್ಥಿರತೆ ಕಾಪಾಡುವ ಉದ್ದೇಶದಿಂದ 30 ನಿಮಿಷದಿಂದ ಒಂದು ಗಂಟೆಯವರೆಗೆ ಕನಿಷ್ಠ ಅವಧಿಯ ವಿದ್ಯುತ್ ಕಡಿತ ಅನಿವಾರ್ಯವಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಉದ್ಯಮ ವಲಯಕ್ಕೆ ತಾತ್ಕಾಲಿಕ ನಿರಾಳತೆ
ನಿಗದಿತ ಲೋಡ್‌ಶೆಡ್ಡಿಂಗ್ ರದ್ದಾಗಿರುವುದು ಬೆಳಗಾವಿಯ ಉದ್ಯಮ ಮತ್ತು ವಾಣಿಜ್ಯ ವಲಯಕ್ಕೆ ಸಮಾಧಾನ ತಂದಿದೆ. ಉತ್ಪಾದನೆ, ಯಂತ್ರೋಪಕರಣಗಳ ಕಾರ್ಯಾಚರಣೆ ಹಾಗೂ ವ್ಯಾಪಾರ ಚಟುವಟಿಕೆಗಳಿಗೆ ವಿದ್ಯುತ್ ಪೂರೈಕೆ ಅತ್ಯಂತ ಮುಖ್ಯವಾಗಿರುವ ಹಿನ್ನೆಲೆಯಲ್ಲಿ, ಪರ್ಯಾಯ ವ್ಯವಸ್ಥೆಗಳ ಮೂಲಕ ವಿದ್ಯುತ್ ಕಡಿತ ತಪ್ಪಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ.


ವಿದ್ಯುತ್ ಸಮಸ್ಯೆ ಕುರಿತು ವಾಣಿಜ್ಯೋದ್ಯಮ ಸಂಘದ ವಿರೋಧ ಮತ್ತು ಉದ್ಯಮ ವಲಯದ ಆತಂಕವನ್ನು ಮುನ್ನೆಲೆಗೆ ತಂದಿದ್ದ ಪ್ರಗತಿವಾಹಿನಿಯ ಶುಕ್ರವಾರದ ವರದಿಯ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button