*ಬಿಮ್ಸ್ ಜೊತೆ ಒಡಂಬಡಿಕೆ ಮಾಡಿಕೊಂಡ ಕೆಎಲ್ಇ ಆಸ್ಪತ್ರೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೆಎಲ್ ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋನಾ ಕೇಂದ್ರ ಮತ್ತು ಬೆಳಗಾವಿಯ ಬಿಮ್ಸ್ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ಜೊತೆಗೂಡಿ ಅತ್ಯಾಧುನಿಕ ವೈದ್ಯಕೀಯ ಸೇವೆ ನೀಡುವ ಒಡಂಬಡಿಕೆಗೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಕರ್ನಲ್ ಎಂ ದಯಾನಂದ ಹಾಗೂ ಡಾ ಅಶೋಕ ಕುಮಾರ ಶೆಟ್ಟಿ ಅವರಿಂದಿಲ್ಲಿ ಸಹಿ ಹಾಕಿದರು.
ಆರ್ಥಿಕವಾಗಿ ಹಿಂದುಳಿದಿರುವ ಹಾಗೂ ಗ್ರಾಮೀಣ ಭಾಗದ ಜನರಿಗೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯವನ್ನು ಉಚಿತವಾಗಿ ನೀಡಲು ಅನುಕೂಲವಾಗುವಂತೆ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯು ಬಿಮ್ಸ ಆಸ್ಪತ್ರೆಯೊಂದಿಗೆ ಕೈಜೋಡಿಸಲಾಗಿದೆ.
ಬಿಮ್ಸ್ ಆಸ್ಪತ್ರೆಯ ಸಹಕಾರದೊಂದಿಗೆ ಈ ಭಾಗದ ಜನರಿಗೆ ಉಚಿತ ಚಿಕಿತ್ಸೆ ನೀಡಲು ನಾವು ಉತ್ಸುಕರಾಗಿದ್ದೇವೆ. ಈಗಾಗಲೇ ಸುಮಾರು 1400 ಹಾಸಿಗೆಗಳ ಮೂಲಕ ಆರ್ಥಿಕವಾಗಿ ಹಿಂದುಳಿದ ಜನರಿಗೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಅದರೊಂದಿಗೆ ಇನ್ನೂ ಹೆಚ್ಚಿನ ಜನರಿಗೆ ಸೇವೆಯನ್ನು ನೀಡಲು ಈ ಒಡಂಬಡಿಕೆಯನ್ನು ಮಾಡಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಮಾತನಾಡಿ, ಸಾಮಾಜ ಸೇವೆಯ ಮೂಲ ಉದ್ದೇಶವನ್ನಿಟ್ಟುಕೊಂಡು ಬಿಮ್ಸನೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಎಲ್ಲರಿಗೂ ಆರೋಗ್ಯವನ್ನು ನೀಡಬೇಕೆನ್ನುವದು ನಮ್ಮ ಆಶಯ. ಬಿಮ್ಸ ಸೂಪರ ಸ್ಪೆಶಾಲಿಟಿ ಆಸ್ಪತ್ರೆಯ ಕಟ್ಟಡ ಪೂರ್ಣಗೊಂಡು ಎರಡು ವರ್ಷ ಕಳೆದರೂ ಕೂಡ ವೈದ್ಯಕೀಯ ಸೇವೆಯನ್ನು ನೀಡುತ್ತಿರಲಿಲ್ಲ. ಆದ್ದರಿಂದ 2 ಬಾರಿ ಸರಕಾರಕ್ಕೆ ಮನವಿ ಮಾಡಿ ಆರ್ಥಿಕವಾಗಿ ಹಿಂದುಳಿದಿರುವ ಜನರಿಗೆ ಅನುಕೂಲ ಕಲ್ಪಿಸಲು ವೈದ್ಯಕೀಯ ಸೇವೆ ಪ್ರಾಂರಂಭಿಸಿ ಎಂದು ಒತ್ತಾಯಿಸಲಾಗಿತ್ತು. ಆದರೂ ಕೂಡ ಸರಕಾರ ಅದಕ್ಕೆ ಸ್ಪಂಧಿಸಿರಲಿಲ್ಲ. ಕೊನೆಗೆ ನಾವೇ ವೈದ್ಯರನ್ನು ನೀಡುತ್ತೇವೆ ವೈದ್ಯಕೀಯ ಸೇವೆಯನ್ನು ಪ್ರಾರಂಭಿಸಿ ಎಂದಾಗ ಅದಕ್ಕೆ ಸರಕಾರ ಒಪ್ಪಿಕೊಂಡಿದೆ. ಅದರಂತೆ ವೈದ್ಯರ ಸೇವೆ ಮಾತ್ರ ಇರಲಿದೆ. ಅದರಲ್ಲಿ ಯಾವುದೇ ಬಲಾಭದ ುದ್ದೇಶವಿಲ್ಲ. ಬಿಮ್ಸ್ ಆಸ್ಪತ್ರೆಗೆ ಬರುವ ರೋಗಿಗಳಿಗೆ ಹೆಚ್ಚು ವೈದ್ಯಕೀಯ ಸೇವೆಗಳು ಅಗತ್ಯವಿದ್ದರೆ, ಅವರಿಗೆ ಕೆಎಲ್ ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಈ ಮೂಲಕ ರೋಗಿಗಳಿಗೆ ಉತ್ತಮ ಹಾಗೂ ಸುಧಾರಿತ ಚಿಕಿತ್ಸೆ ದೊರೆಯುವಂತೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಸೂಪರ್ ಸ್ಪೆಶಾಲಿಟಿ ವಿಭಾಗಗಳಲ್ಲಿನ ಕೊರತೆಯನ್ನು ನಿವಾರಿಸುವ ಮುಖ್ಯ ಉದ್ದೇಶವಾಗಿದ್ದು, ನರರೋಗ, ನರಶಸ್ತ್ರಚಿಕಿತ್ಸೆ, ಮೂತ್ರಪಿಂಡ, ಮೂತ್ರಕೋಶ ಕಾಯಿಲೆ, ಹೃದಯ ರೋಗ, ಹೃದಯ ಶಸ್ತ್ರಚಿಕಿತ್ಸೆ, ಗ್ಯಾಸ್ಟ್ರೋಎಂಟರಾಲಜಿ (ಜಠರ ಮತ್ತು ಕರುಳಿನ ಕಾಯಿಲೆಗಳು), ಚಿಕ್ಕಮಕ್ಕಳ ಶಸ್ತ್ರಚಿಕಿತ್ಸೆ ಹಾಗೂ ಕ್ಯಾನ್ಸರನಿಂದ ಬಳಲುವ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಕಲ್ಪಿಸಲಾಗುತ್ತದೆ. ಬಿಮ್ಸ್ ಆಸ್ಪತ್ರೆಯು ತೀವ್ರ ಸ್ವರೂಪದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸಂಪೂರ್ಣವಾಗಿ ಸಜ್ಜಾಗಿಲ್ಲ. ಈ ಒಪ್ಪಂದದಿಂದಾಗಿ, ಆಯುಷ್ಮಾನ್ ಭಾರತ್ ಯೋಜನೆಯಡಿ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ಒದಗಿಸಲಾಗುವದು ಎಂದರು.
ಶಾಸಕ ಆಸಿಫ್ ( ರಾಜು) ಸೇಟ್ ಅವರು ಮಾತನಾಡಿ, ಡಾ. ಪ್ರಭಾಕರ ಕೋರೆ ಅವರು ಸ್ವತಃ ಮುಂದಾಗಿ ಸೇವೆ ಮಾಡಲು ಒಪ್ಪಿದ್ದಾರೆ. ವೈದ್ಯರನ್ನು ಕಳಿಸಿ ಬಡ ರೋಗಿಗಳಿಗೆ ಸೇವೆ ನೀಡುತ್ತಿದ್ದಾರೆ. ಅವರು ವೈದ್ಯರನ್ನು ನೀಡುವ ಮೂಲಕ ಉಚಿತ ಸೇವೆ ಮಾಡುತ್ತಿದ್ದಾರೆ. ಆರೋಗ್ಯ ಕಾಳಜಿಯಲ್ಲಿ ಒಂದು ಹೆಜ್ಜೆ ಮುಂದಿದ್ದಾರೆ. ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೂ ಗುಣಮಟ್ಟದ ಚಿಕಿತ್ಸೆ ದೊರೆಯಲಿದೆ. ಈ ಒಡಂಬಡಿಕೆಯು ಎರಡೂ ಸಂಸ್ಥೆಗಳ ನಡುವೆ ಸೌಹಾರ್ದಯುತ ವಾತಾವರಣವನ್ನು ನಿರ್ಮಿಸುತ್ತದೆ. ಇದರಿಂದ ಬೆಳಗಾವಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ಜನರಿಗೆ ಅತ್ಯಾಧುನಿಕ ಗುಣಮಟ್ಟದ ಆರೋಗ್ಯ ಸೇವೆಗಳು ಸುಲಭವಾಗಿ ಲಭ್ಯವಾಗುತ್ತವೆ ಎಂದು ಭರವಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾಹೆರ ಉಪಕುಲಪತಿ ಡಾ. ನಿತಿನ ಗಂಗಾನೆ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ, ಡಾ. ವಿ ಡಿ ಪಾಟೀಲ, ಡಾ. ವಿಶ್ವನಾಥ ಪಟ್ಟಣಶೆಟ್ಟಿ, ಡಾ. ರಾಜೇಶ ಪವಾರ, ಡಾ. ಮಾಧವ ಪ್ರಭು, ಡಾ. ರಾಜಶೇಖರ ಸೋಮನಟ್ಟಿ, ಡಾ. ಬಸವರಾಜ ಬಿಜ್ಜರಗಿ, ಬಿಮ್ಸನ ಮುಖ್ಯ ಆಡಳಿತಾಧಿಕಾರಿ ಡಾ. ಸಿದ್ದು ಹುಲ್ಲೋಳ್ಳಿ, ವೈದ್ಯಕೀಯ ಅಧೀಕ್ಷಕರಾದ ಡಾ. ಈರಣ್ಣ ಪಲ್ಲೇದ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.