
ಪ್ರಗತಿವಾಹಿನಿ ಸುದ್ದಿ: ಕಾನೂನು ವಿದ್ಯಾರ್ಥಿಗಳು ಕಾನೂನು ಕ್ಷೇತ್ರದಲ್ಲಿ ಅಪಾರ ಪರಿಣತಿ ಸಾಧಿಸಿ ಈ ಕ್ಷೇತ್ರದಲ್ಲಿ ಸಾಧನೆಯ ಉತ್ತುಂಗ ತಲುಪಬೇಕು ಎಂದು ಕೆಎಲ್ ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಸಲಹೆ ನೀಡಿದರು.
ನವಿ ಮುಂಬಯಿಯ ಕೆಎಲ್ ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ ಸ್ಪಾರ್ಕಲ್-6.0 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೆಎಲ್ ಇ ಸಂಸ್ಥೆ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ. ಕೆಎಲ್ ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಕಾನೂನು ಶಿಕ್ಷಣವನ್ನು ನೀಡುತ್ತಿವೆ ಎಂದು ಹೇಳಿದರು.
ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಅರವಿಂದ ಕುಮಾರ್ ಮಾತನಾಡಿ, ಕಠಿಣ ಪರಿಶ್ರಮ, ನಿರಂತರ ಅಧ್ಯಯನದಿಂದ ಮಾತ್ರ ಉತ್ಕೃಷ್ಟ ನ್ಯಾಯವಾದಿಗಳಾಗಿ ಹೊರಹೊಮ್ಮಲು ಸಾಧ್ಯವಿದೆ ಎಂದು ಹೇಳಿದರು.
ಕರ್ನಾಟಕ ಉಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶ ಪಿ.ಎಸ್. ದಿನೇಶ್ ಕುಮಾರ್ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ನ್ಯಾಯವಾದಿಗಳ ಪಾತ್ರ ಬಹುಮುಖ್ಯವಾಗಿದೆ. ಉತ್ಕೃಷ್ಟ ನ್ಯಾಯವಾದಿಗಳ ಅವಶ್ಯಕತೆಯ ಅಗತ್ಯತೆಯನ್ನು ಅವರು ತಿಳಿಸಿದರು.
ಮುಂಬಯಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಮಿಲಿಂದ ಜಾಧವ ಮಾತನಾಡಿ, ಕಾನೂನು ವಿದ್ಯಾರ್ಥಿಗಳಲ್ಲಿ ನೈತಿಕತೆ ಮಹತ್ವದಾಗಿದೆ. ಯಶಸ್ವಿ ನ್ಯಾಯವಾದಿಗಳಾಗಲು ವಿದ್ಯಾರ್ಥಿಗಳು ಕೌಶಲಗಳನ್ನು ಹೊಂದಿರಬೇಕು ಎಂದು ತಿಳಿಸಿದರು.
ಕ್ರೈಸ್ಟ್ ವಿಶ್ವವಿದ್ಯಾಲಯದ ಡಾ.ಸೋಮು ಸಿ ಎಸ್ ಉಪಸ್ಥಿತರಿದ್ದರು.
ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ಕೆಇಎಸ್ ಶ್ರೀ ಜಯಂತಿಲಾಲ್ ಕಾನೂನು ಮಹಾವಿದ್ಯಾಲಯ ವಿಜೇತರಾಗಿ ಹೊರಹೊಮ್ಮಿದೆ. ಈ ಮೂಲಕ ₹ 31,000 ತನ್ನದಾಗಿಸಿಕೊಂಡಿತು. ರನ್ನರ್ ಅಪ್ ಆಗಿ ಬೆಂಗಳೂರು ಅಲಯನ್ಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಬಹುಮಾನ ಹಾಗೂ ₹ 21,000, ನಗದು ಬಹುಮಾನ ಪಡೆದುಕೊಂಡರು.
ಕ್ರೈಸ್ಟ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಉತ್ತಮ ನ್ಯಾಯವಾದಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಉತ್ಕೃಷ್ಟ ಮೆಮೋರಿಯಲ್ ಪುರಸ್ಕಾರವನ್ನು ಮಹಾರಾಜ ಸಯ್ಯಜಿ ರಾವ್ ವಿಶ್ವವಿದ್ಯಾಲಯ ಬರೋಡ ಪಡೆದುಕೊಂಡಿದೆ. ಕಕ್ಷಿದಾರರ ಸಮಾಲೋಚನಾ ಸ್ಪರ್ಧೆಯಲ್ಲಿ ದಾಮೋದರಂ ಸಂಜೀವಯ್ಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ವಿಜೇತವಾಗಿ ₹ 11,000 ಪಡೆದುಕೊಂಡಿದೆ.
ರನ್ನರ್ ಅಪ್ ಆಗಿ ಗುರುಗ್ರಾಮದ ಐ ಐ ಎಲ್ ಎಂ ವಿಶ್ವವಿದ್ಯಾಲಯ ಹೊರಹೊಮ್ಮಿತು. ಮತ್ತು ಈ ವಿಶ್ವವಿದ್ಯಾಲಯದ ವಿದ್ಯಾರ್ಥಿ ಉತ್ತಮ ಸಮಾಲೋಚಕ ಪ್ರಶಸ್ತಿ ಪಡೆದುಕೊಂಡರು. ನವಿ ಮುಂಬಯಿ ಕೆಎಲ್ ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ದಿನೇಶ ಗಿಟ್ಟೆ ವಂದಿಸಿದರು.