Kannada NewsKarnataka NewsLatest

ಸಪ್ತರ್ಷಿಗಳ ಸಮಾಜಮುಖಿ ಕೈಂಕರ್ಯದಿಂದ ಸಾರ್ಥಕತೆಯ ಉತ್ತುಂಗದಲ್ಲಿ ಕೆಎಲ್ ಇ ಸಂಸ್ಥೆ: ಡಾ. ಎಚ್. ಐ. ತಿಮ್ಮಾಪುರ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ಕೆ.ಎಲ್.ಇ ಏಷ್ಯಾಖಂಡದಲ್ಲಿಯೇ ಶಿಸ್ತುಬದ್ಧ ಸಂಸ್ಥೆ. ಡಾ. ಪ್ರಭಾಕರ ಕೋರೆಯವರ ದೂರದೃಷ್ಟಿ, ಸಮಯಪ್ರಜ್ಞೆ, ಮಹಾತ್ವಾಕಾಂಕ್ಷೆಯಿಂದಾಗಿ ಇಂದು 296ಕ್ಕೂ ಹೆಚ್ಚು ಅಂಗಸಂಸ್ಥೆಗಳನ್ನು ಹೊಂದಿ, 38 ಸಾವಿರ ಸಿಬ್ಬಂದಿ, 1.38 ಲಕ್ಷ ವಿದ್ಯಾರ್ಥಿಗಳೊಂದಿಗೆ ಹೆಮ್ಮರವಾಗಿ ಬೆಳೆದಿದೆ ಎಂದು ಅಂಜುಮನ್ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಚ್. ಐ. ತಿಮ್ಮಾಪುರ  ಹೇಳಿದರು.

ಅವರು ಚಿಕ್ಕೋಡಿಯ ಕೆ.ಎಲ್.ಇ ಅಂಗ ಸಂಸ್ಥೆಗಳ ಆಶ್ರಯದಡಿ ಪಟ್ಟಣದ ಕೆ.ಎಲ್.ಇ. ಎಂಜಿನಿಯರಿಂಗ್ ಕಾಲೇಜಿನ ಸಭಾಭವನದಲ್ಲ್ಲಿ ಹಮ್ಮಿಕೊಳ್ಳಲಾಗಿದ್ದ ಕೆ.ಎಲ್.ಇ. ಸಂಸ್ಥೆಯ 107ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. 

ಧೈರ್ಯ ಮತ್ತು ತ್ಯಾಗ ಮನೋಭಾವವಿದ್ದರೆ ಇತಿಹಾಸ ನಿರ್ಮಿಸಲು ಸಾಧ್ಯ ಎಂದು ಸಪ್ತರ್ಷಿಗಳು ತೋರಿಸಿಕೊಟ್ಟಿದ್ದಾರೆ. ತನು, ಮನ, ಧನದಿಂದ ಸಮಾಜಮುಖಿ ಸೇವೆ ಸಲ್ಲಿಸಿರುವ ಸಪ್ತರ್ಷಿಗಳು ಚಿರಸ್ಮರಣಿಯರು ಎಂದು ಅವರು ಹೇಳಿದರು.

ಅಂದಿನ ದಿನಮಾನದಲ್ಲಿ ಶಾಲೆಗಳು ಕೆಲವೇ ವರ್ಗಗಳಿಗೆ ಸೀಮಿತವಾಗಿದ್ದವು. 1916ರಲ್ಲಿ ಅಂದಿನ ಕಾಲದಲ್ಲಿ ಉತ್ತರ ಕರ್ನಾಟಕ ಶಿಕ್ಷಣದಿಂದ ವಂಚಿತವಾಗಿತ್ತು. ಸಮಾಜದ ಎಲ್ಲ ಪ್ರತಿಭೆಗಳನ್ನು ಪೋಷಿಸುವಂತಹ ಶಾಲೆಗಳಿರಲಿಲ್ಲ. ಈ ತಾರತಮ್ಯ ಗಮನಿಸಿ ಸಪ್ತರ್ಷಿಗಳು ಶೋಷಿತ ವರ್ಗಕ್ಕೆ ಶಿಕ್ಷಣ ಹಾಗೂ ಬದುಕು ಕಟ್ಟಿಕೊಳ್ಳಲು ಈ ಸಂಸ್ಥೆಯನ್ನು ಹುಟ್ಟುಹಾಕಿದ್ದು ಅದೀಗ ಸಾರ್ಥಕತೆಯ ಉತ್ತುಂಗದಲ್ಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಚಿಕ್ಕೋಡಿಯ ಕೆ.ಎಲ್.ಇ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ  ಕೆ.ಎಲ್.ಇ ಅಜೀವ ಸದಸ್ಯರಾದ ಡಾ. ಪ್ರಸಾದ ರಾಂಪೂರೆ ಮಾತನಾಡಿ, ಇಂದು ಕೆ.ಎಲ್.ಇ ಸಂಸ್ಥೆಯ ಸಂಸ್ಥಾಪನಾ ದಿನದ ಜೊತೆಗೆ ವಿಶ್ವ ದಯಾ ದಿನವು ಸಹಿತ ಇಂದೇ ಇರುವುದು ಸುಯೋಗ. ಹಣವಿದ್ದವರು ಎಲ್ಲಿಯಾದರೂ ಹೋಗಿ ಶಿಕ್ಷಣ ಪಡೆಯಬಹುದು ಆದರೆ ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ನೀಡುವ ಮಹದುದ್ದೇಶದೊಂದಿಗೆ ಸ್ಥಾಪಿಸಿದ ಸಂಸ್ಥೆ.
ಬೆಳಗಾವಿಯಂತಹ ಸೂಕ್ಷ್ಮ  ಹಾಗೂ ಸಂವೇದನಶೀಲ ಪ್ರದೇಶದಲ್ಲಿ ಕನ್ನಡ ಶಿಕ್ಷಣ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದು ಇಂದು ಇತಿಹಾಸ. ಸಪ್ತರ್ಷಿಗಳ ಆಶಯದಂತೆ ಮಹಾದಾನಿಗಳಿಂದ ಸಂಸ್ಥೆಯ ಕನಸು ಸಾಕಾರಗೊಂಡಿತು. 1984 ಕೆ.ಎಲ್.ಇ ಸಂಸ್ಥೆಯ ಚರಿತ್ರೆಯಲ್ಲಿ ದಾಖಲಾದ ವರ್ಷ. ಡಾ ಪ್ರಭಾಕರ ಕೋರೆಯವರು ಸಂಸ್ಥೆಯ ಚೂಕ್ಕಾಣಿ ಹಿಡಿದರು. ಇವರ ಆಗಮನ ಪೂರ್ವದಲ್ಲಿ 38 ರಷ್ಟಿದ್ದ ಅಂಗಸಂಸ್ಥೆಗಳ ಸಂಖ್ಯೆ ಇಂದು 293 ಕ್ಕೆ ತಲುಪಿದೆ. ಆರೋಗ್ಯ ಕ್ಷೇತ್ರದಲ್ಲಿ ಸಮಾಜ ಸೇವೆ ಸಲ್ಲಿಸಲು ಡಾ. ಪ್ರಭಾಕರ ಕೋರೆ ಆಸ್ಪತ್ರೆಗಳ ಪಾತ್ರ ದೊಡ್ಡದು. ಕೆ ಎಲ್ ಇ ಶತಮಾನೊತ್ಸವದ ಅಂಗವಾಗಿ 50 ಕ್ಕೂ ಹೆಚ್ಚು ಉಚಿತ ಆರೋಗ್ಯ ಶಿಬಿರಗಳನ್ನ ಆಯೋಜಿಸಿ 2 ಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿರುವುದು ದಾಖಲೆ. 50 ಸಾವಿರ ಸರಕಾರಿ ಶಾಲಾ ಮಕ್ಕಳು ಉಚಿತ ದಂತ ಚಿಕಿತ್ಸೆ ಲಾಭ ಪಡೆದುಕೊಂಡಿದ್ದಾರೆ. ಶೈಕ್ಷಣಿಕ ಉದ್ದೇಶ ಇಟ್ಟುಕೊಂಡು ಹುಟ್ಟಿದ ಸಂಸ್ಥೆ, ಇಂದು ಆರೋಗ್ಯ ಕ್ಷೇತ್ರದಲ್ಲಿ ಪವಾಡ ಸೃಷ್ಟಿಸಿದೆ. ಇಂದು ಈ ಸಂಸ್ಥೆ ಸಪ್ತರ್ಷಿಗಳ ಆಶಯದಂತೆ ಡಾ.ಪ್ರಭಾಕರ ಕೋರೆಯವರ ಸಮರ್ಥ ನೇತೃತ್ವದಲ್ಲಿ ಸಮಾಜಕ್ಕೆ ಕೊಡುಗೆ ಸಲ್ಲಿಸುತ್ತಾ ಬಂದಿರುವುದು ಅವಿಸ್ಮರಣಿಯ ಎಂದರು.

ಈ ಸಂದರ್ಭದಲ್ಲಿ ರ‍್ಯಾಂಕ್ ಗಳಿಸಿದವರಿಗೆ, ಪಿ ಎಚ್ ಡಿ ಪಡೆದವರಿಗೆ ಸತ್ಕರಿಸಲಾಯಿತು.
ಚಿಕ್ಕೋಡಿಯ ಬಿ. ಕೆ. ಕಾಲೇಜಿನ ಪ್ರಾಚಾರ್ಯ ಪ್ರೊ. ಯು. ಆರ್. ರಾಜಪೂತ ಸ್ವಾಗತಿಸಿದರು.
ಕೆ ಎಲ್ ಇ ಶಾಲೆ ಚಿಕ್ಕೋಡಿಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕು. ಪೂಜಾ ಚೌಗಲೆ ಹಾಗೂ ತಂಡ ಸ್ವಾಗತಗೀತೆ ಹಾಡಿದರು. ಸಿ.ಬಿ.ಕೋರೆ ಪಾಲಿಟೆಕ್ನೀಕ್ ಪ್ರಾಚಾರ್ಯ ಪ್ರೊ. ದರ್ಶನ ಬಿಳ್ಳೂರ ಪರಿಚಯಿಸಿದರು. ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ  ಪ್ರೊ. ಸಿದ್ದೇಶ ಅಂಗಡಿ ವಂದಿಸಿದರು. ಗಂಗಾ ಅರಬಾವಿ ನಿರೂಪಿಸಿದರು.

ಪ್ರಾಚಾರ್ಯರಾದ ಪ್ರೊ. ಪಿ. ಪಿ. ಕೋಳಿ, ಪ್ರೊ. ವಿ.ಎಲ್. ಸೋಲಾಪುರೆ, ಪ್ರೊ.ವೆಂಕಟ ರೆಡ್ಡಿ, ಡಾ. ಅಮರ ಪಶುಪತಿಮಠ,  ಚೇತನ ಅಲವಾಡೆ, ಡಾ. ಕಿರಣ ಮುತ್ನಾಳೆ, ವಿಭಾಗ ಮುಖ್ಯಸ್ಥರು, ಉಪನ್ಯಾಸಕರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಸಿದ್ದರಾಮಯ್ಯ ಸ್ಪರ್ಧೆ ಕುರಿತು ಗೋವಿಂದ ಕಾರಜೋಳ ಹೇಳಿದ್ದೇನು?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button