*ಕೆಎಲ್ಎಸ್ ಜಿಐಟಿಯಲ್ಲಿ ಡಾ.ಪಂ. ಕೈವಲ್ಯಕುಮಾರ್ ಅವರಿಂದ ಶಾಸ್ತ್ರೀಯ ಗಾಯನ ಕಾರ್ಯಕ್ರಮ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯ ಕೆಎಲ್ಎಸ್ ಜಿಐಟಿಯು ಡಾ. ಕೈವಲ್ಯಕುಮಾರ್ ಅವರಿಂದ ಶಾಸ್ತ್ರೀಯ ಗಾಯನ “ಭಕ್ತಿ ಸುಗಂಧ”, ಕಾರ್ಯಕ್ರಮವನ್ನು 14 ಜುಲೈ 2023 ರಂದು ಮಧ್ಯಾಹ್ನ 3.30 ಕ್ಕೆ ಸಿಲ್ವರ್ ಜ್ಯೂಬಿಲಿ ಆಡಿಟೋರಿಯಂ, ಜಿಐಟಿ ಕ್ಯಾಂಪಸ್, ಉದ್ಯಮಬಾಗ್ ನಲ್ಲಿ ಆಯೋಜಿಸಿದೆ.
ಡಾ. ಕೈವಲ್ಯಕುಮಾರ್, ಭಾರತೀಯ ಶಾಸ್ತ್ರೀಯ ಸಂಗೀತದ ಕಿರಾನಾ ಘರಾನಾದಿಂದ ಬಂದ ಮೂರನೇ ತಲೆಮಾರಿನ ಗಾಯಕರಾಗಿದ್ದು , ಇವರು ಮೂಲತಃ ಕರ್ನಾಟಕದ ಧಾರವಾಡದವರು. ಅವರು ತಮ್ಮ ತಂದೆ ಪಂ. ಸಂಗಮೇಶ್ವರ ಗುರವರಿಂದ ಶಾಸ್ತ್ರೀಯ ಸಂಗೀತಕ್ಕೆ ದೀಕ್ಷೆ ಪಡೆದರು.
ಸುಮಧುರ ಮತ್ತು ಆಕರ್ಷಕ ಧ್ವನಿಯನ್ನು ಹೊಂದಿರುವ ಅವರು ಹೆಚ್ಚಿನ ಜನಮನ್ನಣೆಯನ್ನು ಸಾಧಿಸಿ , “ಸುರಮಣಿ “, “ಪಂ. ಜಸ್ರಾಜ್ ಗೌರವ್ ಪುರಸ್ಕಾರ್” ಮತ್ತು “ಸರ್ವ ಶ್ರೇಷ್ಠ ಕಲಾಕರ್” ಗಳಂತಹ ಪ್ರತಿಷ್ಠಿತ ಪ್ರಶಸ್ತಿಗಳೊಂದಿಗೆ, ಅನೇಕ ರಾಜ್ಯ ಹಾಗೂ ರಾಷ್ಟೀಯ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಅವರು ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನದಿಂದ ಉನ್ನತ ದರ್ಜೆಯನ್ನು ಪಡೆದ ಅತ್ಯಂತ ಕಿರಿಯ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕರಾಗಿದ್ದಾರೆ.
ಅವರು ಹಲವಾರು ಮ್ಯೂಸಿಕಲ್ ಆಲ್ಬಂಗಳನ್ನು ರಚಿಸಿದ್ದು, ಭಾರತ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ, ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್, ಕೆನಡಾ, ಸಿಂಗಾಪುರ್, ಆಸ್ಟ್ರೇಲಿಯಾ, ದುಬೈ, ಮಸ್ಕತ್ ಮತ್ತು ಕತಾರ್‌ನಲ್ಲಿ ಹಲವಾರು ಪ್ರತಿಷ್ಠಿತ ಸಂಗೀತ ಉತ್ಸವಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಇತ್ತೀಚೆಗೆ ಅವರು ಗೌರವ ಡಾಕ್ಟರೇಟ್ ಪಡೆದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ