Kannada NewsKarnataka NewsLatest

*ಅತ್ಯಾಚಾರದ ಬಗ್ಗೆ ಮಾಜಿ ಶಾಸಕನಿಂದ ವಿವಾದಾತ್ಮಕ ಹೇಳಿಕೆ; ಆಡಿಯೋ ವೈರಲ್*

ಪ್ರಗತಿವಾಹಿನಿ ಸುದ್ದಿ; ಕೊಪ್ಪಳ: ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಕುಟುಂಬ ನ್ಯಾಯ ಕೊಡಿಸುವಂತೆ ಮನವಿ ಮಾಡಲು ಮಾಜಿ ಶಾಸಕರ ಬಳಿ ಹೋದರೆ ಅಪರಾಧಿಯ ಪರವಾಗಿಯೇ ಮಾತನಾಡಿ ವಿವಾದಾತ್ಮಕ ಹೇಳಿಕೆ ನೀಡಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಅಲ್ಲದೇ ಮಾಜಿ ಶಾಸಕರ ಆಡಿಯೋ ಕೂಡ ವೈರಲ್ ಆಗಿದೆ.

ಕೊಪ್ಪಳ ಜಿಲ್ಲೆ ಕುಷ್ಟಗಿ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಮಾತನಾಡಿರುವ ವಿವಾದಾತ್ಮಕ ಸಂಭಾಷಣೆಯ ಆಡಿಯೋ ವೈರಲ್ ಆಗಿದ್ದು, ಚರ್ಚೆಗೆ ಕಾರಣವಾಗಿದೆ.

ಎಂ.ಗುಡದೂರು ಗ್ರಾಮದ ಕಾಂಗ್ರೆಸ್ ಮುಖಂಡ ಸಂಗನಗೌಡ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಸಂತ್ರಸ್ತೆ ಕೊಪ್ಪಳ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ವಿರುದ್ಧ ಕ್ರಮಕ್ಕೆ ಮುಂದಾಗಿಲ್ಲ. ಹೀಗಾಗಿ ಸಂತ್ರಸ್ತೆಯ ಮಾವ ನ್ಯಾಯಕ್ಕಾಗಿ ಎಸ್ ಪಿ ಗೆ ದೂರು ನೀಡಿದ್ದರು. ಅಲ್ಲದೇ ತಮಗೆ ನ್ಯಾಯ ಕೊಡಿಸುವಂತೆ ಅಮರೇಗೌಡ ಬೈಯ್ಯಾಪುರ ಬಳಿಯೂ ಮನವಿ ಮಡಿದ್ದರು.

ಆದರೆ ಮಾಜಿ ಶಾಸಕ ಅಮರೇಗೌಡ ಬೈಯ್ಯಾಪುರ, ಆರೋಪಿ ಪರವಾಗಿಯೇ ಮಾತನಾಡಿದ್ದು, ಎಸ್ ಪಿಗೆ ದೂರು ನೀಡಬಾರದಿತ್ತು. ದೂರು ನೀಡಿ ನಿಮ್ಮ ಮರ್ಯಾದೆ ನೀವೆ ಕಳೆದುಕೊಳ್ಳುತ್ತಿದ್ದೀರಾ. ಒಬ್ಬರಿಂದ ಹೇಗೆ ಅತ್ಯಾಚಾರ ಮಾಡಲು ಸಾಧ್ಯ? ಒಂದೇ ಕೈಯ್ಯಲ್ಲಿ ಚಪ್ಪಾಳೆ ತಟ್ಟಲು ಸಾಧ್ಯವಿಲ್ಲ ಹಾಗೇ ಜಗತ್ತಿನಲ್ಲಿ ಒಬ್ಬರಿಂದ ಅತ್ಯಾಚಾರ ಮಾಡಲು ಆಗಲ್ಲ ಎಂದಿದ್ದಾರೆ.

Home add -Advt

ಒಬ್ಬನನ್ನು ಕರೆದುಕೊಂಡು ಬಾ, ನಾನು ಓರ್ವ ಮಹಿಳೆಯನ್ನು ಕಳುಹಿಸುತ್ತೇನೆ. ಆ ವ್ಯಕ್ತಿ ಆಕೆಯನ್ನು ಅತ್ಯಾಚಾರ ಮಾಡಲಿ ನೋಡೋಣ. ಒಬ್ಬನಿಂದ ಅತ್ಯಾಚಾರ ಮಾಡಲು ಸಾಧ್ಯವಿಲ್ಲ. ಸೂಕ್ಷ್ಮ ವಿಚಾರ ಇದು. ಮರ್ಯಾದೆ ಪ್ರಶ್ನೆ ಇದೆ ಯೋಚಿಸು ಎಂದು ನ್ಯಾಯ ಕೇಳಲು ಹೋದ ಸಂತ್ರಸ್ತೆಯ ಮಾವನಿಗೆ ಬುದ್ಧಿ ಹೇಳಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button