ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಆಗಸ್ಟ್ 1 ಕೋರೆ ಮತ್ತು ಆಗಸ್ಟ್ 2ರಂದು ಸಂಕೇಶ್ವರ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಕಳೆದ ಜುಲೈ 31ರಂದು ಪ್ರಗತಿವಾಹಿನಿಯಲ್ಲಿ ಡಾ.ವಿಜಯ ಸಂಕೇಶ್ವರ ಮತ್ತು ಡಾ.ಪ್ರಭಾಕರ ಕೋರೆಯವರ ಸಮಾನ ಗುಣಗಳ ಕುರಿತು ಲೇಖನ ಪ್ರಕಟಿಸಲಾಗಿತ್ತು.
ಇದೀಗ ಪ್ರಭಾಕರ ಕೋರೆಯವರೂ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗುವ ಮೂಲಕ ದೇಶದ ಅತ್ಯುನ್ನದ ಪ್ರಶಸ್ತಿಯಲ್ಲೂ ಸಂಕೇಶ್ವರರಿಗೆ ಸರಿಸಮಾನರೆನಿಸಿದ್ದಾರೆ. ವಿಜಯ ಸಂಕೇಶ್ವರ ಅವರು 2020ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದರು. ಡಾ.ಕೋರೆಯವರು 2026ರಲ್ಲಿ ಪದ್ಮಶ್ರೀಗೆ ಭಾಜನರಾಗಿದ್ದಾರೆ. ಇಬ್ಬರಿಗೂ ಇನ್ನಷ್ಟು ಆಯುಷ್ಯ, ಆರೋಗ್ಯ ಲಭಿಸಿ ಮತ್ತಷ್ಟು ಸಾಧನೆ ಮಾಡುವ ಅವಕಾಶ ಲಭಿಸಲಿ.
ಅಂದು ಪ್ರಕಟಿಸಿದ್ದ ಲೇಖನವನ್ನು ಮತ್ತೊಮ್ಮೆ ಇಲ್ಲಿ ಪ್ರಕಟಿಸಲಾಗಿದೆ.
ಯಾವುದೇ ಸಂಸ್ಥೆಯನ್ನು ಕಟ್ಟಿ, ಬೆಳೆಸಿ ಮುನ್ನಡೆಸಲು ಬೇಕಾದ ಪ್ರಮುಖ ಗುಣ ದೂರದೃಷ್ಟಿ, ನಾಯಕತ್ವ ಮತ್ತು ನಿಷ್ಠುರವಾದಿತ್ವ. ನಾಯಕತ್ವ ಮತ್ತು ನಿಷ್ಠುರತೆ ಪರಸ್ಪರ ವಿರುದ್ಧಾರ್ಥಕ ಗುಣಗಳೆಂದು ಹಲವರು ಭಾವಿಸುತ್ತಾರೆ. ಆದರೆ ಅವೆರಡೂ ಪರಸ್ಪರ ಪೂರಕ ಗುಣಗಳು. ಉತ್ತಮ ನಾಯಕರಾಗಬೇಕೆಂದರೆ ನಿಷ್ಠುರವಾದಿಯೂ ಆಗಿರಬೇಕಾಗುತ್ತದೆ. ಎಲ್ಲರಿಗೂ ಒಳ್ಳೆಯವರಾಗಿ ಯಾವುದೇ ಸಂಸ್ಥೆಯನ್ನು ಕಟ್ಟಿ ಬೆಳೆಸುವುದು ಸಾಧ್ಯವಿಲ್ಲ. ಅನೇಕ ವೇಳೆ ನಿಷ್ಠುರವಾದ ನಿರ್ಣಯಗಳನ್ನು ತೆಗೆದುಕೊಳ್ಳಲೇಬೇಕಾಗುತ್ತದೆ.
ಕೆಎಲ್ಇ ಸೊಸೈಟಿ ಎನ್ನುವ ಸಂಸ್ಥೆಯನ್ನು ಆಲದ ಮರದಂತೆ ಬೃಹತ್ತಾಗಿ ಬೆಳೆಸಿದ ಬೆಳಗಾವಿಯ ಡಾ.ಪ್ರಭಾಕರ ಕೋರೆ ಮತ್ತು ವಿಆರ್ ಎಲ್ ಎನ್ನುವ ದ್ಯತ್ಯ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಹುಬ್ಬಳ್ಳಿಯ ಡಾ. ವಿಜಯ ಸಂಕೇಶ್ವರ ಇಬ್ಬರಲ್ಲೂ ಹಲವು ಸಾಮ್ಯತೆ ಅಥವಾ ಸಮಾನ ಗುಣಗಳಿವೆ. ದೂರದೃಷ್ಟಿ, ನಾಯಕತ್ವ ಗುಣದ ಜೊತೆಗೆ ಇಬ್ಬರೂ ನಿಷ್ಠುರವಾದಿಗಳು. ಅಷ್ಟೇ ಅಲ್ಲ, ಯಾವುದೇ ವ್ಯಕ್ತಿಗಳನ್ನು ಇಡಿಯಾಗಿ ದ್ವೇಷಿಸದ ಅಪರೂಪದ ಗುಣ ಇಬ್ಬರಲ್ಲೂ ಇದೆ. ಯಾವುದೇ ವ್ಯಕ್ತಿಯನ್ನು ನೋಡಿದ ತಕ್ಷಣ ಅವರಲ್ಲಿರುವ ನ್ಯೂನ್ಯತೆಯನ್ನು ಗುರುತಿಸುವ ಜೊತೆಗೆ, ಒಳ್ಳೆಯ ಗುಣವನ್ನು ಮೆಚ್ಚುವ ಅಪರೂಪದ ವ್ಯಕ್ತಿತ್ವ ಅವರದ್ದು. ಏಕಕಾಲದಲ್ಲಿ ಒಳ್ಳೆಯದನ್ನು ಹೊಗಳುವ ಮತ್ತು ಲೋಪವನ್ನು ಎತ್ತಿ ತೋರಿಸುವ ಸಾಮರ್ಥ್ಯ ಸಂಕೇಶ್ವರ ಮತ್ತು ಕೋರೆಯವರಲ್ಲಿದೆ.

ವಿಜಯ ಸಂಕೇಶ್ವರ ಅವರು ಸ್ವಂತ ತಂದೆಯೂ ಸೇರಿದಂತೆ ಬಂಧು- ಬಳಗದ ವಿರೋಧವನ್ನೂ ಲೆಕ್ಕಿಸದೆ ಬರಿಗೈಯಲ್ಲಿ ಮನೆಯಿಂದ ಹೊರಗೆ ಬಂದು ಜೀರೋದಿಂದ ಹೀರೋ ಆದವರು. ಒಬ್ಬ ವ್ಯಕ್ತಿ ಏನೆಲ್ಲ ಸಾಧಿಸಬಹುದು ಎನ್ನುವುದಕ್ಕೆ ನಮ್ಮ ಮಧ್ಯೆ ಜ್ವಲಂತ ಉದಾಹರಣೆಯಾಗಿ ನಿಂತವರು ಅವರು. ಆನೆ ನಡೆದಿದ್ದೇ ದಾರಿ ಎನ್ನುವಂತೆ ಧೈರ್ಯದಿಂದ ಮುನ್ನಡೆಯುತ್ತಲೇ ಇದ್ದಾರೆ. ಹಾಗಂತ ಅವರು ಮುಟ್ಟಿದ್ದೆಲ್ಲವೂ ಚಿನ್ನವಾಗಲಿಲ್ಲ. ಆದರೆ, ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆ ಅವರನ್ನು ಸೋಲದಂತೆ ನೋಡಿಕೊಂಡಿದೆ. ಕೆಲವೊಮ್ಮೆ ಎಡವಿದರೂ ಹಾಗೇ ಸಾವರಿಸಿಕೊಂಡು ಮುಂದೆ ಹೆಜ್ಜೆ ಹಾಕಿದರೇ ವಿನಃ ಎಡವಿ ಬೀಳಲಿಲ್ಲ.
ಉದ್ಯಮ ಆರಂಭಿಸಿದಾಗಿನಿಂದಲೂ ಸಾಕಷ್ಟು ಅವಮಾನಗಳನ್ನು ಸಹಿಸುತ್ತ, ಕಾಲು ಜಗ್ಗುವವರನ್ನು ನಿರ್ಲಕ್ಷಿಸುತ್ತ ಬೆಳೆದು ನಿಂತವರು ವಿಜಯ ಸಂಕೇಶ್ವರ. ತಮ್ಮ ವಿಶ್ವಾಸ ಕಳೆದುಕೊಂಡವರನ್ನು ಅಲ್ಲಿಯೇ ಬಿಟ್ಟು ಮುನ್ನಡೆದರೇ ವಿನಃ ಅವರನ್ನು ದ್ವೇಷಿಸುತ್ತ, ಹಗೆ ಸಾಧಿಸುತ್ತ ಸಮಯ ವ್ಯರ್ಥ ಮಾಡಲಿಲ್ಲ. ಯಾರ ಹಾದಿಯನ್ನೂ ಅನುಸರಿಸದೆ ತಮ್ಮ ಹಾದಿಯನ್ನು ತಾವೇ ಕಂಡುಕೊಳ್ಳುತ್ತ, ನಂಬರ್ ಒನ್ ಬದಲಾಗಿ ಓನ್ಲಿ ಒನ್ ಆಗಬೇಕೆನ್ನುವ ಗುರಿಯನ್ನಿಟ್ಟುಕೊಂಡು ಸಂಸ್ಥೆಯನ್ನು ಕಟ್ಟಿದರು. ಅದೇ ಅವರನ್ನು ಇಂದು ಎತ್ತರದ ಸ್ಥಾನದಲ್ಲಿ ತಂದು ನಿಲ್ಲಿಸಿದೆ.

ಡಾ.ಪ್ರಭಾಕರ ಕೊರೆ ಅವರು ತಮ್ಮ 36ನೇ ವಯಸ್ಸಿಗೆ (1984) ಕೆಎಲ್ಇ ಸಂಸ್ಥೆಯ ಚುಕ್ಕಾಣಿಯನ್ನು ಹಿಡಿದವರು. ಅಂದು 34 ಅಂಗ ಸಂಸ್ಥೆಗಳನ್ನು ಹೊಂದಿದ್ದ ಸಂಸ್ಥೆ, ಇಂದು 310 ಅಂಗಸಂಸ್ಥೆಗಳನ್ನು ಹೊಂದಿದ್ದಷ್ಟೇ ಅಲ್ಲದೆ, ಸಾಗರದಾಚೆಗೂ ಸಂಸ್ಥೆಯನ್ನು ದಾಟಿಸಿದ ಶ್ರೇಯಸ್ಸನ್ನು ಮುಡಿಗೇರಿಸಿಕೊಂಡಿದ್ದಾರೆ.
ಡಾ.ಕೋರೆ ಕೆಎಲ್ಇ ಸಂಸ್ಥೆಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದಲ್ಲದೆ, ಕೆಎಲ್ಇ ಎನ್ನುವ ಅಪರೂಪದ ಕುಟುಂಬವನ್ನೇ ಬೆಳೆಸಿದ್ದಾರೆ. ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಕಸ ಗುಡಿಸುವ ವ್ಯಕ್ತಿಯಿಂದ ಹಿಡಿದು ನಿರ್ದೇಶಕರವರೆಗೆ ಎಲ್ಲರಿಗೂ ಸಮಾನ ಗೌರವ ನೀಡುತ್ತಾರೆ. ಆದರೆ ಅವರ ಅಪರೂಪದ ಗುಣವೆಂದರೆ ಯಾರನ್ನೂ ಇಡಿಯಾಗಿ ಪ್ರೀತಿಸುವುದೂ ಇಲ್ಲ, ಇಡಿಯಾಗಿ ದ್ವೇಷಿಸುವುದೂ ಇಲ್ಲ. ನೇರಾ ನೇರ ತಪ್ಪುಗಳನ್ನು ಎತ್ತಿ ಹೇಳುವ ಜೊತೆಗೆ, ಎಲ್ಲರಲ್ಲೂ ಇರುವ ಒಳ್ಳೆಯ ಗುಣವನ್ನು ಗುರುತಿಸಿ, ಸಂಸ್ಥೆಯ ಶ್ರೇಯೋಭಿವೃದ್ಧಿಗಾಗಿ ಬಳಸಿಕೊಳ್ಳುತ್ತಾರೆ.
ಇನ್ನೊಂದು ವಿಶೇಷವೆಂದರೆ, ಅವರಿಗೆ ಸಿಕ್ಕಿದ ರಾಜಕೀಯ ಸ್ಥಾನಮಾನಗಳನ್ನು ಎಂದಿಗೂ ಸ್ವಾರ್ಥಕ್ಕಾಗಿ ಬಳಸಿಕೊಳ್ಳದೆ, ಅದರ ಮೂಲಕ ಸಂಸ್ಥೆಯನ್ನು ಹೇಗೆ ಇನ್ನಷ್ಟು ಎತ್ತರಕ್ಕೆ ಏರಿಸಬಹುದು ಎನ್ನುವುದನ್ನು ಯೋಚಿಸಿದರು. ಹಾಗಾಗಿಯೇ ಕೆಎಲ್ಇ ಸಂಸ್ಥೆಯನ್ನು ಕಟ್ಟಿದ ಸಪ್ತ ಋಷಿಗಳ ಸಾಲಿನಲ್ಲಿ ಅಷ್ಟಮ ಋಷಿಯಾಗಿ ಅವರು ಕಾಣಿಸುತ್ತಾರೆ.
ಆಗಸ್ಟ್ 1ರಂದು ಡಾ.ಪ್ರಭಾಕರ ಕೋರೆ ಮತ್ತು ಆಗಷ್ಟ್ 2ರಂದು ಡಾ.ವಿಜಯ ಸಂಕೇಶ್ವರ ಅವರ ಜನ್ಮದಿನ. ಇವರಿಬ್ಬರ ಕೈಯಲ್ಲಿ ಉತ್ತರ ಕರ್ನಾಟಕ ಸುರಕ್ಷಿತ ಮಾತ್ರವಲ್ಲ, ಅಭಿವೃದ್ಧಿಯ ಉತ್ತುಂಗಕ್ಕೇರಿದೆ. ಹಲವು ಸಮಾನ ಗುಣಗಳೊಂದಿಗೆ ಸಂಸ್ಥೆಗಳನ್ನು ಕಟ್ಟಿದ್ದಷ್ಟೇ ಅಲ್ಲದೆ, ಉತ್ತರ ಕರ್ನಾಟಕದ, ಕರ್ನಾಟಕ ರಾಜ್ಯದ ಕೀರ್ತಿ ಪತಾಕೆಯನ್ನು ರಾಷ್ಟ್ರಮಟ್ಟದಲ್ಲಿ ಮತ್ತು ವಿಶ್ವ ಮಟ್ಟದಲ್ಲಿ ಹಾರಿಸಿದ ಶ್ರೇಯಸ್ಸು ಈ ಇಬ್ಬರದ್ದು.




