ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆಗೆ ರಾಜ್ಯ ಸರ್ಕಾರ ಅನುದಾನ ಘೋಷಣೆ ಮಾಡಿದ್ದು, 10 ಸಾವಿರ ಕೋಟಿ ರೂ.ನಿಗದಿಪಡಿಸಲು ನಿರ್ಧರಿಸಲಾಗಿದೆ ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ವಿಧಾನಸಭೆ ಕಲಾಪದಲ್ಲಿ ಸಿಎಂ ಯಡಿಯೂರಪ್ಪ, ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೆ ಹಂತ ಹಾಗೂ ಮೂವತ್ತು ಹಳ್ಳಿಗಳ ಪುನರ್ವಸತಿ ಹಾಗೂ ಪುನರ್ ನಿರ್ಮಾಣಕ್ಕೆ 10 ಸಾವಿರ ಕೋಟಿ ರೂ.ನಿಗದಿಪಡಿಸಲು ನಿರ್ಧರಿಸಿರುವುದಾಗಿ ಘೋಷಿಸಿದ್ದಾರೆ.
ಮೂರು ವರ್ಷದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ. ಇಂದು ದೆಹಲಿಗೆ ಹೋಗುತ್ತಿದ್ದೇನೆ. ಕೇಂದ್ರ ಸರ್ಕಾರದ ಪ್ರಮುಖರ ಜತೆ ಮಾತುಕತೆ ನಡೆಸುತ್ತೇನೆ. ಹೇಗಾದರೂ ಸರಿಯೇ ಹೆಚ್ಚುವರಿ ಅನುದಾನ ತರುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಸಿಎಂ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸದನದಲ್ಲಿ ಆಕ್ಷೇಪ ವ್ಯಕ್ತಪಡಿಸಿ, ನಿನ್ನೆ ಬಜೆಟ್ ಮಂಡಿಸುವಾಗಲೇ ಅದನ್ನು ಸೇರ್ಪಡೆ ಮಾಡಬಹುದಿತ್ತು. ಇಲ್ಲ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವಾಗ ಹೇಳಬಹುದಿತ್ತು. ಆದರೂ ಈಗಲೇ ಹೇಳಿದ್ದಾರೆ. ಸಂತೋಷ. ಆದರೆ 10 ಸಾವಿರ ಕೋಟಿ ರೂ ಮೀಸಲಿಡುತ್ತೇವೆ ಎಂದಿದ್ದಾರೆ. ಆದರೆ ಹಣ ಎಲ್ಲಿದೆ? ಕೇವಲ ಭರವಸೆ ಆಗಬಾರದು ಎಂದು ಹೇಳಿದ್ದಾರೆ.
ರಾಜ್ಯ ಬಜೆಟ್ ನಲ್ಲಿ ಕೃಷ್ಣ ಮೇಲ್ದಂಡೆ ಯೋಜನೆ ಪ್ರಸ್ತಾಪ ಮಾಡದೇ ಇರುವುದು ಆ ಭಾಗದ ಜನತೆ ಹಾಗೂ ವಿಪಕ್ಷಗಳ ಟೀಕೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಮುಖ್ಯಮಂತ್ರಿಗಳು ಹಣಕಾಸು ಇಲಾಖೆಯ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಈ ಕುರಿತು ತೀರ್ಮಾನ ಮಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ