
ಪ್ರಗತಿವಾಹಿನಿ ಸುದ್ದಿ; ಉಡುಪಿ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಕುಂದಾಪುರ ಮೂಲದ ಯುವತಿ ಚಿಕಿತ್ಸೆ ಫಲಕಾರಿಯಾಗದೇ ಮಣಿಪಾಲ್ ಕೆ ಎಂ ಸಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಯುವತಿ ಸಾವಿನ ಹಿಂದೆ ಲವ್ ಜಿಹಾದ್ ಆರೋಪ ಕೇಳಿಬಂದಿದೆ.
ಮೂರು ದಿನಗಳ ಹಿಂದೆ ಕುಂದಾಪುರ ಉಪ್ಪಿನಕುದ್ರ ನಿವಾಸಿ ಶಿಲ್ಪಾ ಎಂಬ ಯುವತಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ತೀವ್ರ ಅಸ್ವಸ್ಥಗೊಂಡಿದ್ದ ಆಕೆಯನ್ನು ಮಣಿಪಾಲ್ ಕೆ ಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದು ಯುವತಿ ಕೊನೆಯುಸಿರೆಳೆದಿದ್ದಾಳೆ.
ಅದಾಗಲೇ ವಿವಾಹವಾಗಿದ್ದ ಅಜೀಜ್ (32) ಎಂಬಾತನ ಜತೆ ಯುವತಿ ಅಕ್ರಮ ಸಂಬಂಧ ಹೊಂದಿದ್ದಳು. ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಶಿಲ್ಪಾ ಸ್ನೇಹ ಸಂಪಾದಿಸಿದ್ದ ಅಜೀಜ್, ಆಕೆಯನ್ನು ನಂಬಿಸಿ ತನ್ನ ಫ್ಲಾಟ್ ಗೆ ಕರೆದೊಯ್ದು ದೈಹಿಕವಾಗಿ ಬಳಸಿಕೊಂಡಿದ್ದ ಎನ್ನಲಾಗಿದೆ.
ಶಿಲ್ಪಾಳ ಕೆಲ ಖಾಸಗಿ ಫೋಟೋಗಳನ್ನು ತೆಗೆದುಕೊಂಡಿದ್ದ ಅಜೀಜ್ ಆಕೆಯನ್ನು ಬ್ಲಾಕ್ ಮೇಲ್ ಮಾಡಿ ಪದೇ ಪದೇ ದೌರ್ಜನ್ಯವೆಸಗಿದ್ದ. ಪತಿಯ ಈ ಪೈಷಾಚಿಕ ಕೃತ್ಯಕ್ಕೆ ಪತ್ನಿ ಸಲ್ಮಾ ಕೂಡ ಸಾಥ್ ನೀಡಿದ್ದಳು. ಅಲ್ಲದೇ ಅಜೀಜ್ ತನ್ನನ್ನು ಮದುವೆಯಾಗಿ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದ ಎಂದು ಹಿಂದೂಪರ ಸಂಘಟನೆಗಳು ಆರೋಪಿಸಿವೆ.
ಇದೇ ಕಾರಣಕ್ಕೆ ಯುವತಿ ಶಿಲ್ಪಾ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶಿಲ್ಪಾ ಸಾವಿಗೆ ಲವ್ ಜಿಹಾದ್ ಕಾರಣ. ಶಿಲ್ಪಾ ಆತ್ಮಹತ್ಯೆಗೆ ಯತ್ನಿಸುತ್ತಿದ್ದಂತೆ ಅಜೀಜ್ ನಾಪತ್ತೆಯಾಗಿದ್ದು, ಅಜೀಜ್ ಹಾಗೂ ಆತನ ಪತ್ನಿ ಇಬ್ಬರನ್ನು ಬಂಧಿಸಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಿಂದೂಪರ ಸಂಘಟನೆಗಳು ಆಗ್ರಹಿಸಿವೆ.
ಬಾಲಕನ ಮೇಲೆ ಹರಿದ ನೀರಿನ ಟ್ಯಾಂಕರ್; ಸ್ಥಳದಲ್ಲೇ ಪ್ರಾಣಬಿಟ್ಟ 3 ವರ್ಷದ ಕಂದ