Kannada NewsLatestNational

*ಕುನೋ ಚಿರತೆ ಮರಿ ಹತ್ಯೆ ಪ್ರಕರಣ*: *ಆರು ಅರಣ್ಯಾಧಿಕಾರಿಗಳು ಸಸ್ಪೆಂಡ್*: *8 ಜನರ ವಿರುದ್ಧ FIR ದಾಖಲು*

ಪ್ರಗತಿವಾಹಿನಿ ಸುದ್ದಿ: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 19 ತಿಂಗಳ ಚಿರತೆ ಮರಿ ಗುಂಡೇಟಿನಿಂದ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ, ಕರ್ತವ್ಯ ಲೋಪ ಹಾಗೂ ನಿರ್ಲಕ್ಷ್ಯದ ಆರೋಪದ ಮೇಲೆ ಆರು ಅರಣ್ಯ ಇಲಾಖೆ ಅಧಿಕಾರಿ/ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ.

ಮಧ್ಯಪ್ರದೇಶದ ಮೊರೆನಾ ಮತ್ತು ಶೆಯೋಪುರ್ ಜಿಲ್ಲೆಗಳಲ್ಲಿ ನಿಯೋಜನೆಗೊಂಡಿದ್ದ ಇಬ್ಬರು ರೇಂಜರ್‌ಗಳು (ವಲಯ ಅರಣ್ಯಾಧಿಕಾರಿಗಳು), ಒಬ್ಬರು ಡೆಪ್ಯೂಟಿ ರೇಂಜರ್ ಮತ್ತು ಮೂವರು ಫಾರೆಸ್ಟ್ ಗಾರ್ಡ್‌ಗಳನ್ನು (ಅರಣ್ಯ ರಕ್ಷಕರು) ಅಮಾನತುಗೊಳಿಸಲಾಗಿದೆ. ಚೀತಾಗಳ ಕಾವಲು ಮತ್ತು ಟ್ರ್ಯಾಕಿಂಗ್‌ನಲ್ಲಿ ತೀವ್ರ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಇವರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ.

‘ನಿರ್ವಾ’ ಎಂಬ ಹೆಣ್ಣು ಚಿರತೆಗೆ ಜನಿಸಿದ್ದ 19 ತಿಂಗಳ ಗಂಡು ಚೀತಾ ಮರಿ ಅಕ್ಟೋಬರ್ 25 ರಂದು ಕುನೋ ಉದ್ಯಾನವನದ ಸಂರಕ್ಷಿತ ಪ್ರದೇಶದ ಹೊರಗಿರುವ ಶೆಯೋಪುರ್ ಅರಣ್ಯ ವಿಭಾಗದಲ್ಲಿ ತೀವ್ರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಗಾಯಗೊಂಡಿದ್ದ ಚಿರತೆಯನ್ನು ಜಬಲ್‌ಪುರದ ಪಶುವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ದಾಖಲಿಸಿ ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಈ ವೇಳೆ ಅದರ ದೇಹದಿಂದ 5 ಬಂದೂಕಿನ ಪೆಲ್ಲೆಟ್‌ಗಳನ್ನು (ಗುಂಡುಗಳು) ಹೊರತೆಗೆಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಕ್ಟೋಬರ್ 27 ರಂದು ಚಿರತೆ ಕೊನೆಯುಸಿರೆಳೆಯಿತು.

ಈ ಪ್ರಕರಣದಲ್ಲಿ ಇದೀಗ ಆರು ಅರಣ್ಯಾಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಎಂಟು ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

Related Articles

Back to top button