*ಧನ್ವೀರ್ ವಿರುದ್ಧ ಮತ್ತೊಂದು ಕೇಸ್‌ಗೆ ಸಿದ್ಧತೆ*: *ಸಿಸಿಟಿವಿ ದೃಶ್ಯ ನೀಡುವಂತೆ ತಿಮ್ಮಗೌಡಗೆ ಪೊಲೀಸರ ನೋಟಿಸ್*

ಪ್ರಗತಿವಾಹಿನಿ ಸುದ್ದಿ: ನಟ ಧನ್ವೀರ್ ಗೌಡ ಮತ್ತು ವಿಜಯಲಕ್ಷ್ಮಿ ನಡುವಿನ ವಿವಾದ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈಗಾಗಲೇ ಧನ್ವೀರ್ ವಿರುದ್ಧ ಹಲವು ದೂರುಗಳು ದಾಖಲಾಗಿದ್ದು, ಮತ್ತೊಂದು ಪ್ರಕರಣ ಎಫ್‌ಐಆರ್ ಆಗುವ ಸಾಧ್ಯತೆ ಎದುರಾಗಿದೆ. ಧನ್ವೀರ್ ತಂದೆ ತಿಮ್ಮಗೌಡ ನೀಡಿದ್ದ ದೂರಿನ ತನಿಖೆಯಲ್ಲೂ ಹೊಸ ಬೆಳವಣಿಗೆ ನಡೆದಿದೆ. ಮನೆಗೆ ನುಗ್ಗಿ ಗಲಾಟೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡುವಂತೆ ಪೊಲೀಸರು ಸೂಚಿಸಿದ್ದರೂ, ಅವುಗಳನ್ನು ಇನ್ನೂ ಸಲ್ಲಿಸಿಲ್ಲ ಎನ್ನಲಾಗಿದೆ. ಹೀಗಾಗಿ ಪೊಲೀಸರು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ವಿಜಯಲಕ್ಷ್ಮಿ, ನಾಗರಾಜ್ ಮತ್ತು ಇತರರು ತಮ್ಮ ಮನೆಗೆ ನುಗ್ಗಿ ಗಲಾಟೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ತಿಮ್ಮಗೌಡ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡಿದ್ದರು. ಬಳಿಕ ತಿಮ್ಮಗೌಡ ಅವರಿಗೆ ನೋಟಿಸ್ ನೀಡಿ, ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸುವಂತೆ ಸೂಚಿಸಿದ್ದರು. ಈ ಘಟನೆ ರಾಜಾಜಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆದರೆ, ತಿಮ್ಮಗೌಡ ಅವರು ಈವರೆಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರಿಗೆ ನೀಡಿಲ್ಲ ಎನ್ನಲಾಗಿದೆ. ಇದು ತನಿಖೆಯ ದೃಷ್ಟಿಯಿಂದ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಇದೇ ವೇಳೆ ಭೋಜರಾಜ್ ಎಂಬುವರು ಕೂಡ ಧನ್ವೀರ್ ವಿರುದ್ಧ ದೂರು ದಾಖಲಿಸಿದ್ದರು. ವಿಜಯಲಕ್ಷ್ಮಿ ಮತ್ತು ನಾಗರಾಜ್ ಅವರನ್ನು ಕರೆದುಕೊಂಡು ಹೋಗಲು ಮಾತ್ರ ಧನ್ವೀರ್ ಮನೆಗೆ ತೆರಳಿದ್ದೆವು. ಅಲ್ಲಿ ಯಾರೂ ಗಲಾಟೆ ಮಾಡಿಲ್ಲ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಜೊತೆಗೆ ಧನ್ವೀರ್ ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಕೂಡಲೇ ಪಡೆದು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದರು. ಧನ್ವೀರ್ ಸಿಸಿಟಿವಿ ದೃಶ್ಯಗಳನ್ನು ಅಳಿಸುವ ಸಾಧ್ಯತೆಯಿದೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದರು.
ಇದೀಗ ತಿಮ್ಮಗೌಡ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡಲು ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ, ಈ ಹಿಂದೆ ದಾಖಲಿಸಿದ್ದ ಎನ್‌ಸಿಆರ್ ಅನ್ನು ಎಫ್‌ಐಆರ್ ಆಗಿ ಪರಿವರ್ತಿಸಲು ರಾಜಾಜಿನಗರ ಪೊಲೀಸರು ನ್ಯಾಯಾಲಯದ ಅನುಮತಿ ಕೋರಿದ್ದಾರೆ. ನ್ಯಾಯಾಲಯದ ಅನುಮತಿ ದೊರೆತು ಎಫ್‌ಐಆರ್ ದಾಖಲಾದರೆ, ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಿದ್ದಾರೆ.
ಇನ್ನೊಂದೆಡೆ, ವಿಜಯಲಕ್ಷ್ಮಿ ಅವರೊಂದಿಗಿನ ವಿವಾದದಿಂದ ಧನ್ವೀರ್ ಗೌಡ ಸಂಕಷ್ಟ ಎದುರಿಸುತ್ತಿದ್ದಾರೆ. ದರ್ಶನ್ ಕೂಡ ಧನ್ವೀರ್ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ದರ್ಶನ್ ಅಥವಾ ಅವರ ಕುಟುಂಬದವರ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡದಂತೆ ನಿರ್ಬಂಧಕಾಜ್ಞೆ ಪಡೆದಿದ್ದಾರೆ. ವಿಜಯಲಕ್ಷ್ಮಿ ಆಪ್ತರು ನೀಡಿದ ದೂರುಗಳ ಆಧಾರದ ಮೇಲೆ ಧನ್ವೀರ್ ವಿರುದ್ಧ ಈಗಾಗಲೇ ಎರಡು ಎಫ್‌ಐಆರ್ ದಾಖಲಾಗಿವೆ. ಇನ್ನೂ ಕೆಲವು ದೂರುಗಳು ದಾಖಲಾಗುವ ಸಾಧ್ಯತೆಯಿದೆ.
ಒಂದು ಕಾಲದಲ್ಲಿ ದರ್ಶನ್ ಮತ್ತು ಧನ್ವೀರ್ ಆತ್ಮೀಯರಾಗಿದ್ದರು. ವಿಶೇಷವಾಗಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಳಿಕ ಇಬ್ಬರ ನಡುವಿನ ಆತ್ಮೀಯತೆ ಹೆಚ್ಚಾಗಿತ್ತು ಎನ್ನಲಾಗಿದೆ. ಆದರೆ, ದರ್ಶನ್ ಕುಟುಂಬ ಮತ್ತು ಧನ್ವೀರ್ ನಡುವಿನ ಹಣಕಾಸಿನ ವ್ಯವಹಾರವೇ ಈಗಿನ ವೈಮನಸ್ಯಕ್ಕೆ ಕಾರಣ ಎಂಬ ಮಾತು ಕೇಳಿಬರುತ್ತಿದೆ. ಸುಮಾರು 10 ಕೋಟಿ ರೂಪಾಯಿ ಹಣಕಾಸಿನ ವಿಚಾರವಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎನ್ನಲಾಗಿದೆ.



