ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಪ್ರತಿಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕಾರು ಚಾಲಕನ್ನು ಬಂಧಿಸಲಾಗಿದ್ದು, ಬಂಧಿತ ಆರೋಪಿ ಪೊಲೀಸ್ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾನೆ.
ಮಹಿಳಾ ಅಧಿಕಾರಿ ಹತ್ಯೆ ಪ್ರಕರಣ ಸಂಬಂಧ ಅವರ ಮಾಜಿ ಕಾರು ಚಾಲಕನಾಗಿದ್ದ ಆರೊಪಿ ಕಿರಣ್ ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ಕೊಲೆ ಮಾಡಿದ್ದರ ಹಿಂದಿನ ರಹಸ್ಯ ಬಾಯ್ಬಿಟ್ಟಿದ್ದಾನೆ.
ಕಿರಣ್ ತಾನು ಸರ್ಕಾರಿ ಉದ್ಯೋಗಿ ಎಂದು ಸುಳ್ಳು ಹೇಳಿ ಮದುವೆಯಾಗಿದ್ದ. ಮದುವೆ ಬಳಿಕವೂ ಪತ್ನಿಗೆ ತಾನು ಸರ್ಕಾರಿ ಉದ್ಯೋಗಿ ಎಂದು ಹೇಳಿ ಬಿಲ್ಡಪ್ ತೆಗೆದುಕೊಳ್ಳುತ್ತಿದ್ದನಂತೆ. ಈ ಹಿಂದೆ ಪ್ರತಿಮಾ ಅವರ ಕಾರು ಚಾಲಕನಾಗಿದ್ದ ಕಿರಣ್ ನನ್ನು ಕೆಲ ಕಾರಣದಿಂದ ಕೆಲಸದಿಂದ ತೆಗೆದು ಹಾಕಿದ್ದರಂತೆ. ಕೆಲಸ ಕಳೆದುಕೊಂಡಿದ್ದ ಕಿರಣ್ ಮನೆಯಲ್ಲಿಯೇ ಇದ್ದ. ಕೆಲ ದಿನಗಳ ಬಳಿಕ ಕಿರಣ್ ಪತ್ನಿಗೆ ಆತ ಸುಳ್ಳು ಹೇಳಿ ಮದುವೆಯಾಗಿದ್ದು, ಕೆಲಸವಿಲ್ಲದೇ ಇರುವ ಬಗ್ಗೆ ಗೊತ್ತಾಗಿದೆ. ಇದರಿಂದ ಬೇಸತ್ತ ಪತ್ನಿ ಕಿರಣ್ ನನ್ನು ಬಿಟ್ಟು ತವರು ಮನೆ ಸೇರಿದ್ದಳಂತೆ.
ಈ ಘಟನೆ ಬಳಿಕ ಕಿರಣ್, ಪ್ರತಿಮಾ ಅವರ ಬಳಿ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಕೇಳಿದ್ದನಂತೆ. ಆದರೆ ಪ್ರತಿಮಾ ಕೆಲಸ ಕೊಡಲು ನಿರಾಕರಿಸಿದ್ದರಂತೆ. ಇದರಿಂದ ನೊಂದು ಪ್ರತಿಮಾ ಅವರನ್ನು ಹತ್ಯೆಗೈದಿದ್ದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ ಎಂದು ತಿಳಿದುಬಂದಿದೆ.
ಸದ್ಯ ಆರೋಪಿ ಕಿರಣ್ ನನ್ನು ನ.15ವರೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದ್ದು ತನಿಖೆ ಮುಂದುವರೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ