*ಡಿಸಿಸಿ ಬ್ಯಾಂಕ್ ಚುನಾವಣೆ: ಮೇಲೆ ಕುಳಿತವನು ಆಡಿಸಿದಂತೆ ಆಟ ಆಡಬೇಕು ಎಂದ ಶಾಸಕ ಲಕ್ಷ್ಮಣ ಸವದಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಡಿಸಿಸಿ ಬ್ಯಾಂಕ ಚುನಾವಣಾ ಅಖಾಡ ರಂಗೇರಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಲಕ್ಷ್ಮಣ ಸವದಿ ಕಾದು ನೋಡೋಣ ಎಂದಿದ್ದಾರೆ. ನಮ್ಮ ಸಮಿತಿ ಸದಸ್ಯರ ಸಂಖ್ಯೆ ಹತ್ತಾಗುತ್ತೋ, ಹನ್ನೊಂದಾಗುತ್ತೋ ಹದಿನೈದಾಗುತ್ತೋ ಗೊತ್ತಿಲ್ಲ. ಮೇಲೆ ಕುಳಿತವನು ಆಟ ಆಡಿಸುತ್ತಾನೆ. ನಾವೆಲ್ಲರೂ ಗೊಂಬೆಗಳಿದ್ದಂತೆ. ಅವನು ಆಡಿಸಿದಂತೆ ಆಡಬೇಕು ಎಂದಿದ್ದಾರೆ.
ಅಥಣಿ ತಾಲೂಕಿನಿಂದ ನಿರ್ದೇಶಕ ಸ್ಥಾನಕ್ಕೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಕಾಗವಾಡ ತಾಲೂಕಿನಿಂದ ನಿರ್ದೇಶಕ ಸ್ಥಾನಕ್ಕೆ ರಾಜು ಕಾಗೆ ಸ್ಪರ್ಧಿಸಿದ್ದಾರೆ. ಇಂದು ಇಬ್ಬರು ನಾಯಕರು ಏಕಕಾಲಕ್ಕೆ ಆಗಮಿಸಿ ಬೃಹತ್ ಮೆರವಣಿಗೆ ಮೂಲಕ ಶಕ್ತಿ ಪ್ರದರ್ಶನ ಮಾಡಿದರು. ಬಳಿಕ ನಾಮಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಲಕ್ಷ್ಮಣ ಸವದಿ ನಾನು ಹಾಗೂ ರಾಜು ಕಾಗೆ ಒಂದೇ ಸಮಿತಿಯಲ್ಲಿದ್ದೇವೆ. ನಮ್ಮ ಸಮಿತಿಗೆ ಯಾರೇ ಬಂದರೂ ಸ್ವಾಗತ. ಹೋಗುವವರಿಗೂ ಧನ್ಯವಾದ ಎಂದರು. ಸಸಿ ನೆಡುವಾಗ ಒಂದೇ ಇರುತ್ತದೆ. ಬಳಿಕ ಎಲೆ, ಹೂವು, ಕಾಯಿ ಎಲ್ಲವೂ ಬರುತ್ತದೆ. ನೋಡೋಣ ನಮ್ಮ ಸಮಿತಿ ಸದಸ್ಯರ ಸಂಖ್ಯೆ ಎಷ್ಟಾಗುತ್ತದೆ ಎಂದು. ಮೇಲೆ ಕುಳಿತವನು ಆಡಿಸಿದ ಹಾಗೆ ನಾವು ಆಡಬೇಕು ಎಂದು ಮಾರ್ಮಿಕವಾಗಿ ನುಡಿದರು.