Belagavi NewsBelgaum NewsKannada NewsKarnataka NewsLatestPolitics

ಬಿಜೆಪಿಯತ್ತ ಲಕ್ಷ್ಮಣ ಸವದಿ : ಸತ್ಯವೋ? ಮಿಥ್ಯವೋ? ಈ ಸುದ್ದಿ ಓದಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನನ್ನ ಹೆಣ ಕೂಡ ಬಿಜೆಪಿ ಕಚೇರಿಯತ್ತ ಹೋಗುವುದಿಲ್ಲ ಎಂದು ಹೇಳುತ್ತ ಕಾಂಗ್ರೆಸ್ ಸೇರಿದ್ದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಈಗ ಬಿಜೆಪಿಗೆ ಮರಳಲು ಆಸಕ್ತರಾಗಿದ್ದಾರೆಯೇ? ಜಗದೀಶ ಶೆಟ್ಟರ್ ಬಿಜೆಪಿಗೆ ಮರಳಿದ ಕ್ಷಣದಿಂದ ಈ ಸುದ್ದಿ ಮಾಧ್ಯಮಗಳಲ್ಲಿ ಅತೀ ಹೆಚ್ಚು ಟಿಆರ್ ಪಿ ಗಳಿಸುತ್ತಿರುವ ಸುದ್ದಿಯಾಗಿ ಪರಿಣಮಿಸಿದೆ.

ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು, ರಾಜಕಾರಣಿಗಳು ಹೇಗೆ ಬೇಕಾದರೂ ಮಾತು ತಿರುಚುತ್ತಾರೆ, ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುವೂ ಅಲ್ಲ, ಶಾಶ್ವತ ಮಿತ್ರರೂ ಅಲ್ಲ ಎನ್ನುವ ಮಾತುಗಳಿವೆ. ಇದಕ್ಕೆ ತಾಜಾ ಉದಾಹರಣೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್. ಕೆಲವೇ ತಿಂಗಳ ಮೊದಲು ಅವರು ಆಡಿದ್ದ ಮಾತುಗಳಿಗೂ ಈಗ ಅವರು ನಡೆದುಕೊಂಡಿರುವ ರೀತಿಗೂ ಸಂಬಂಧವೇ ಇಲ್ಲ. ಅದನ್ನು ಅವರು ಹೇಗೆ ಬೇಕೋ ಹಾಗೆ ಸಮರ್ಥಿಸಿಕೊಳ್ಳುತ್ತಾರೆ. ಜನರು ಒಪ್ಪುತ್ತಾರೋ, ಬಿಡುತ್ತಾರೋ ಬೇರೆ ವಿಷಯ.

ಲಕ್ಷ್ಮಣ ಸವದಿ ಕೂಡ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಸಂದರ್ಭದಲ್ಲಿ ಏನೆಲ್ಲ ಮಾತುಗಳನ್ನು ಆಡಿದ್ದಾರೆ. ಅತ್ಯಂತ ಕಟುವಾದ ಶಬ್ಧಗಳಿಂದಲೇ ಬಿಜೆಪಿಯನ್ನು ದೂಷಿಸಿದ್ದಾರೆ. ಈಗ ಬಿಜೆಪಿಗೆ ವಾಪಸ್ಸಾಗುವುದಾದರೆ ತಮ್ಮ ನಿಲುವನ್ನು ಅಷ್ಟೇ ಬಲವಾಗಿ ಸಮರ್ಥಿಸಿಕೊಳ್ಳುವ ಸಾಮರ್ಥ್ಯ ಅವರಲ್ಲಿರಬಹುದು. ಬಿಜೆಪಿಯಲ್ಲಿ ಉಪಮುಖ್ಯಮಂತ್ರಿ ಹುದ್ದೆ ನೀಡಿದ್ದರೂ ಅದಕ್ಕೆ ತಕ್ಕ ರೀತಿಯಲ್ಲಿ ಗೌರವ ನೀಡಲಿಲ್ಲ ಎನ್ನುವ ಆರೋಪವನ್ನು ಅಂದು ಅವರು ಮಾಡಿದ್ದರು. ಬಿಜೆಪಿಯಲ್ಲಿ ಹೆಜ್ಜೆ ಹೆಜ್ಜೆಗೂ ಹೇಗೆಲ್ಲ ಅವಮಾನವಾಗಿತ್ತು ಎನ್ನುವುದನ್ನು ಬಿಡಿಸಿಟ್ಟಿದ್ದರು.

ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರಿ ಅಥಣಿ ಕ್ಷೇತ್ರದಿಂದ ಸ್ಪರ್ಧಿಸಿದ ನಂತರ ಅತ್ಯಧಿಕ ಮತಗಳ ಅಂತರದಿಂದ ಆಯ್ಕೆಯಾದರು. ವಿರೋಧಿಗಳೇ ಇಲ್ಲವೇನೋ ಎನ್ನುವ ರೀತಿಯಲ್ಲಿ ಬಿಂಬಿತರಾದರು. ಉಪಮುಖ್ಯಮಂತ್ರಿಗಳಾಗಿ ಕೆಲಸ ಮಾಡಿದವರು, ಅತ್ಯಂತ ಮಹತ್ವದ ಸಂದರ್ಭದಲ್ಲಿ ಕಾಂಗ್ರೆಸ್ ಗೆ ಬಂದು ಪಕ್ಷಕ್ಕೆ ಶಕ್ತಿ ತುಂಬಿದರು, ಹೆಚ್ಚಿನ ಮತಗಳನ್ನು ಪಡೆದು ಆಯ್ಕೆಯಾದರು, ಬೆಳಗಾವಿ ಜಿಲ್ಲೆಯ ರಾಜಕಾರಣಕ್ಕೆ ಹೊಸ ದಿಕ್ಕನ್ನೇ ನೀಡಿ, ಕಾಂಗ್ರೆಸ್ ಬಲಪಡಿಸಿದರು ಎನ್ನುವ ಕಾರಣಗಳಿಗಾಗಿ ಮಂತ್ರಿ ಸ್ಥಾನ ಗ್ಯಾರಂಟಿ ಎಂದೇ ಭಾವಿಸಲಾಗಿತ್ತು. ಅದು ನ್ಯಾಯೋಚಿತವೂ ಆಗುತ್ತಿತ್ತು. ಆದರೆ ಯಾವ ಲೆಕ್ಕಾಚಾರವೋ… ಅವರ ದುರಾದೃಷ್ಟವೋ ಸಚಿವ ಸ್ಥಾನದ ಭಾಗ್ಯ ಲಭಿಸಲೇ ಇಲ್ಲ. ಇದು ಅವರನ್ನು ನಿರಾಸೆ ಮಾಡಿದ್ದಲ್ಲದೆ, ಇರುಸು ಮುರಿಸನ್ನುಂಟು ಮಾಡಿದ್ದು ಅಲ್ಲಗಳೆಯುವಂತಿಲ್ಲ.

ಜಗದೀಶ ಶೆಟ್ಟರ್ ಬಿಜೆಪಿಗೆ ಮರಳಿದ ಕ್ಷಣದಿಂದಲೇ ಲಕ್ಷ್ಮಣ ಸವದಿ ಸಹ ಬಿಜೆಪಿಗೆ ಹೋಗಲಿದ್ದಾರೆ ಎನ್ನುವ ಸುದ್ದಿ ದಟ್ಟವಾಗಿ ಹರಡಿತು. ಸಚಿವ ಸ್ಥಾನ ನೀಡಲಿಲ್ಲ ಎನ್ನುವ ಬಲವಾದ ಕಾರಣ ಮತ್ತು ಅಸಮಾಧಾನ ಅವರು ಕಾಂಗ್ರೆಸ್ ಬಿಡುವುದಕ್ಕಿದೆ. ಆದರೆ ಪ್ರಶ್ನೆ ಬಂದಾಗಲೆಲ್ಲ ಅವರು ಬಲವಾಗಿಯೇ ನಿರಾಕರಿಸುತ್ತ ಬಂದಿದ್ದಾರೆ. ತಮ್ಮನ್ನು ಕಾಂಗ್ರೆಸ್ ಚಿಹ್ನೆಯ ಮೇಲೆ ಮತದಾರರು ಅತ್ಯಧಿಕ ಮತಗಳಿಂದ ಆಯ್ಕೆ ಮಾಡಿದ್ದಾರೆ. ನಾನು ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.

ಆದರೆ, ಅವರು ಬಿಜೆಪಿಗೆ ಮರಳಬಹುದು ಎನ್ನುವ ಸಂಶಯ ಬಲವಾಗಲು ಕಾರಣ, ಬಿಜೆಪಿ ನಾಯಕರು ಪೋನ್ ಮೂಲಕ ಸಂಪರ್ಕಿಸಿದಾಗಲೆಲ್ಲ, ಭೇಟಿಯಾದಾಗ ಮಾತಾಡೋಣ, ಫೋನ್ ನಲ್ಲಿ ಬೇಡ ಎಂದು ಹೇಳುತ್ತಿರುವುದು. ಭೇಟಿಯಾದಾಗ ಏನು ಮಾತನಾಡಿದರು? ಮನಸ್ಸಿನಲ್ಲಿ ಮಡುಗಟ್ಟಿದ ಏನೆಲ್ಲ ವಿಷಯಗಳನ್ನು ಹೊರಗೆಡವಿದರು ಎನ್ನುವುದು ಬೇರೆ ವಿಷಯ.

ಭೇಟಿ ಮಾಡಿ ಬಂದ ನಾಯಕರೆಲ್ಲ, ಲಕ್ಷ್ಮಣ ಸವದಿಗೆ ಬಿಜೆಪಿಗೆ ಮರಳಲು ಮನಸ್ಸಿದೆ, ಆದರೆ ಕೆಲವು ಅಸಮಾಧಾನಗಳಿವೆ, ಅವರದ್ದೇ ಆದ ಷರತ್ತುಗಳಿವೆ. ಅದೆಲ್ಲ ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಇತ್ಯರ್ಥವಾಗಲಿವೆ ಎಂದು ಹೇಳುತ್ತಿದ್ದಾರೆ. ಲಕ್ಷ್ಮಣ ಸವದಿಗೆ ಬಿಜೆಪಿಗೆ ಮರಳುವ ಇರಾದೆಯೇ ಇಲ್ಲದಿದ್ದಲ್ಲಿ, ಬನ್ನಿ ಮಾತನಾಡೋಣ ಎಂದು ಏಕೆ ಹೇಳುತ್ತಿದ್ದರು ಎನ್ನುವುದು ಬಿಜೆಪಿ ನಾಯಕರ ಪ್ರಶ್ನೆ. ಎಲ್ಲರೂ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿದ್ದಾರೆ.

ನನ್ನ ಮನಸ್ಸಿನಲ್ಲಿ ಏನಿದೆ ಎನ್ನುವುದು ನನಗೆ ಮತ್ತು ಬ್ರಹ್ಮನಿಗೆ ಮಾತ್ರ ಗೊತ್ತಿದೆ ಎಂದು ಸವದಿ ಕೂಡ ಹೇಳಿದ್ದಾರೆ. ನಾನು ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ, ಇದನ್ನೇ ಎಷ್ಟು ಬಾರಿ ಅಂತ ಹೇಳಲಿ ಎಂದೂ ಅವರು ಪ್ರಶ್ನಿಸುತ್ತಾರೆ.

ಆದರೆ ಜಗದೀಶ್ ಶೆಟ್ಟರ್ ಕೂಡ ಬಿಜೆಪಿ ಸೇರುವ 2 -3 ದಿನ ಮೊದಲು ಕೂಡ, ಯಾವುದೇ ಕಾರಣದಿಂದ ಕಾಂಗ್ರೆಸ್ ಬಿಡುವುದಿಲ್ಲ ಎಂದೇ ಹೇಳುತ್ತಿದ್ದರು.

ಇದೇ ವೇಳೆ, ಕಾಂಗ್ರೆಸ್ ನಾಯಕರ ಪ್ರಕಾರ ಲಕ್ಷ್ಮಣ ಸವದಿ ಈ ಹಂತದಲ್ಲಿ ಕಾಂಗ್ರೆಸ್ ತೊರೆಯುವುದಿಲ್ಲ. ಶೀಘ್ರದಲ್ಲೇ ನಡೆಯಬಹುದಾದ ಸಚಿವಸಂಪುಟ ವಿಸ್ತರಣೆ ವೇಳೆ ಲಕ್ಷ್ಮಣ ಸವದಿಗೆ ಮಂತ್ರಿಸ್ಥಾನ ಖಚಿತ. ಅಧಿಕಾರದಲ್ಲಿರುವ ಪಕ್ಷ ಬಿಟ್ಟು ಹೋಗುವಂತಹ ನಿರ್ಧಾರವನ್ನು ಅವರು ಮಾಡುವುದಿಲ್ಲ. ಈಗ ಅವರು ಕಾಂಗ್ರೆಸ್ ಬಿಟ್ಟರೆ ಅವರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುತ್ತಾರೆ.

ಈ ಕುರಿತು ಪ್ರಗತಿವಾಹಿನಿ ಜೊತೆ ಮಾತನಾಡಿದ ಸವದಿ, ಯಾವುದೇ ಕಾರಣದಿಂದ ಕಾಂಗ್ರೆಸ್ ಬಿಡುವುದಿಲ್ಲ, ಈ ಕುರಿತ ಎಲ್ಲ ಪ್ರಶ್ನೆಗಳಿಗೆ ನನ್ನದು ಒಂದೇ ಉತ್ತರ. ಉತ್ತರದಲ್ಲಾಗಲಿ, ನನ್ನ ನಿಲುವಿನಲ್ಲಾಗಲಿ ಬದಲಾವಣೆ ಇಲ್ಲ ಎಂದು ಖಚಿತವಾಗಿ ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button