ಲಕ್ಷ್ಮಣ ಸವದಿಗೆ ಉಪಮುಖ್ಯಮಂತ್ರಿ ಸ್ಥಾನ?
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು-
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದಲ್ಲಿ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಲಕ್ಷ್ಮಣ ಸವದಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದು ಬಹುತೇಕ ಖಚಿತವಾಗಿದೆ.
ಸೋಮವಾರ ಈ ಕುರಿತು ಆದೇಶ ಹೊರಬೀಳುವ ಸಾಧ್ಯತೆ ಇದೆ. ಬಿಜೆಪಿ ಸರಕಾರದಲ್ಲಿ ಮೂವರು ಉಪಮುಖ್ಯಮಂತ್ರಿಯಾಗುವ ಸಾಧ್ಯತೆ ಇದ್ದು, ಅವರಲ್ಲಿ ಲಕ್ಷ್ಮಣ ಸವದಿ ಕೂಡ ಒಬ್ಬರು.
ಮಾಜಿ ಶಾಸಕರಾಗಿರುವ ಲಕ್ಷ್ಮಣ ಸವದಿಯನ್ನು ಸಚಿವರನ್ನಾಗಿಸಿದ್ದಕ್ಕೆ ತೀವ್ರ ವಿವಾದ ಉಂಟಾಗಿತ್ತು. ಬೇಕಾದಷ್ಟು ಶಾಸಕರಿರುವಾಗ ಮಾಜಿ ಶಾಸಕರನ್ನೇಕೆ ಮಂತ್ರಿ ಮಾಡಬೇಕಿತ್ತು ಎಂದು ಬಿಜೆಪಿ ವಲಯದಲ್ಲಿ ಭಾರಿ ಚರ್ಚೆ ನಡೆದಿತ್ತು. ಉಮೇಶ ಕತ್ತಿ ಸೇರಿದಂತೆ ಅನೇಕರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.
ಆದರೆ ಇದಕ್ಕೆಲ್ಲ ಸೊಪ್ಪು ಹಾಕದ ಬಿಜೆಪಿ ಹೈಕಮಾಂಡ್ ಸವದಿಗೆ ಉಪಮುಖ್ಯಮಂತ್ರಿ ಸ್ಥಾನವನ್ನೂ ನೀಡುವ ಮೂಲಕ ಮತ್ತೊಂದು ಪ್ರಮೋಶನ್ ನೀಡುವ ತೀರ್ಮಾನಕ್ಕೆ ಬಂದಿದೆ.
ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಬಿಟ್ಟರೆ ನಾಯಕತ್ವ ಇಲ್ಲ ಎನ್ನುವ ಅಭಿಪ್ರಾಯ ಬಲವಾಗಿರುವ ಸಂದರ್ಭದಲ್ಲಿ ಲಕ್ಷ್ಮಣ ಸವದಿ ಅವರನ್ನು ಪರ್ಯಾಯವಾಗಿ ಬೆಳೆಸಲು ಹೈಕಮಾಂಡ್ ಮುಂದಾದಂತಿದೆ.
ಲಕ್ಷ್ಮಣ ಸವದಿ ಮೂಲತಃ ಜನತಾಪರಿವಾರದಿಂದ ಬಂದವರು. ಈ ಹಿಂದೆ 2008ರಲ್ಲಿ ಬಿಜೆಪಿ ಸರಕಾರದಲ್ಲಿ ಸಚಿವರಾಗಿದ್ದರು. ಆದರೆ ವಿಧಾನಸಭೆಯಲ್ಲಿ ಬ್ಲೂಫಿಲ್ಮ್ ನೋಡಿದ ಆರೋಪದ ಹಿನ್ನೆಲೆಯಲ್ಲಿ ರಾಜಿನಾಮೆ ನೀಡಬೇಕಾಯಿತು.
2013ರಲ್ಲಿ ಅಥಣಿ ಕ್ಷೇತ್ರದಿಂದ ಮರು ಆಯ್ಕೆಯಾಗಿದ್ದರು. ಆದರೆ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮಹೇಶ್ ಕುಮಟಳ್ಳಿ ವಿರುದ್ದ ಪರಾಭವ ಹೊಂದಿದ್ದರು.
ಇದನ್ನೂ ಓದಿ – ಕರ್ನಾಟಕದ ಸರಕಾರ ಬಿಜೆಪಿ ಹೈಕಮಾಂಡ್ ಗೆ ಬೇಡದ ಕೂಸೆ?
ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲಿ ಮಹೇಶ್ ಕುಮಟಳ್ಳಿ ಶಾಸಕಸ್ಥಾನಕ್ಕೆ ರಾಜಿನಾಮೆ ನೀಡಿ, ಸಮ್ಮಿಶ್ರ ಸರಕಾರ ಬೀಳಲು ಕಾರಣರಾಗಿದ್ದರು. ನಂತರದಲ್ಲಿ ಅವರನ್ನು ಅನರ್ಹಗೊಳಿಸಲಾಗಿತ್ತು.
ಯಡಿಯೂರಪ್ಪ ಸರಕಾರದಲ್ಲಿ ಲಕ್ಷ್ಮಣ ಸವದಿ ಅವರನ್ನು ಸಚಿವರನ್ನಾಗಿಸಿ ಎಲ್ಲರಿಗೂ ಅಚ್ಛರಿ ಮೂಡಿಸಲಾಗಿತ್ತು. ಇದು ಪಕ್ಷದಲ್ಲಿ ಆಂತರಿಕ ಕಲಹಕ್ಕೂ ಕಾರಣವಾಗಿತ್ತು.
ವಿವಾದ ವಿಕೋಪಕ್ಕೆ ಹೋದರೆ ಸವದಿಯವರನ್ನು ಸಚಿವ ಸ್ಥಾನದಿಂದ ಕೈಬಿಡಬಹುದು ಎನ್ನುವ ಮಾತೂ ಕೇಳಿಬಂದಿತ್ತು.
ಆದರೆ ಮತ್ತೊಂದು ಅಚ್ಛರಿಯ ಬೆಳವಣಿಗೆಯಲ್ಲಿ ಸವದಿಗೆ ಉಪಮುಖ್ಯಮಂತ್ರಿ ಸ್ಥಾನದ ಬಡ್ತಿ ನೀಡಲು ಹೈಕಮಾಂಡ್ ಮುಂದಾಗಿದೆ.
ಇವರ ಜೊತೆಗೆ ಗೋವಿಂದ ಕಾರಜೋಳ ಮತ್ತು ಅಶ್ವಥ್ ನಾರಾಯಣ ಸಹ ಉಪಮುಖ್ಯಮಂತ್ರಿ ಗಳಾಗಲಿದ್ದಾರೆ.
ಇದನ್ನೆಲ್ಲ ಗಮನಿಸಿದರೆ ಹೈಕಮಾಂಡ್ ಉದ್ದೇಶಪೂರ್ವಕವಾಗಿಯೇ ಯಡಿಯೂರಪ್ಪನವರನ್ನು ಇಕ್ಕಿಟ್ಟಿಗೆ ಸಿಲುಕಿಸಲು ಮುಂದಾದಂತಿದೆ.
ಸವದಿ ಅಥಣಿ ಕ್ಷೇತ್ರದಿಂದ ನಡೆಯಲಿರುವ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಬಹುದು. ಆಗ ಅನರ್ಹ ಶಾಸಕ ಮಹೇಶ ಕುಮಟಳ್ಳಿ ಕುರಿತು ಹೈಕಮಾಂಡ್ ಏನು ತೀರ್ಮಾನ ಕೈಗೊಳ್ಳಲಿದೆ ಕಾದು ನೋಡಬೇಕಿದೆ. ಇಬ್ಬರಲ್ಲಿ ಒಬ್ಬರನ್ನು ವಿಧಾನಪರಿಷತ್ತಿಗೆ ಆಯ್ಕೆ ಮಾಡಿದರೂ ಮಾಡಬಹುದು.
ಇದನ್ನೂ ಓದಿ – ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾ ಆ ಒಂದು ಪ್ರಶ್ನೆ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ