*ಮನೆಯಲ್ಲಿ ದುರ್ಘಟನೆ ಸಂಭವಿಸಬಹುದು ಹುಷಾರಾಗಿರಿ ಎಂದು ಭವಿಷ್ಯ ನುಡಿದಿದ್ದರು: ಚನ್ನರಾಜ ಹಟ್ಟಿಹೊಳಿ*
ಪ್ರಗತಿವಾಹಿನಿ ಸುದ್ದಿ: ಮನೆಯಲ್ಲಿ ದುರ್ಘಟನೆ ಸಂಭವಿಸಬಹುದು ಸ್ವಲ್ಪ ಹುಷಾರಾಗಿರಿ ಎಂದು ಬೆಳಗಾವಿಯಲ್ಲಿ ನಮಗೆ ಬೇಕಾದವರೊಬ್ಬರು ಭವಿಷ್ಯ ನುಡಿದಿದ್ದರು ಎಂದು ಎಂಎಲ್ ಸಿ ಚನ್ನರಾಜ ಹಟ್ಟಿಹೊಳಿ ಕಾರು ಅಪಘಾತದ ಬಗ್ಗೆ ವಿವರಿಸುತ್ತಾ ತಿಳಿಸಿದ್ದಾರೆ.
ಕಾರು ಅಪಘಾತದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗಂಭೀರವಾಗಿ ಗಾಯಗೊಂಡಿದ್ದು, ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಂಎಲ್ ಸಿ, ಸಹೋದರ ಚನ್ನರಾಜ ಹಟ್ಟಿಹೊಳಿ ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ಆಗಮಿಸಿದ ಚನ್ನರಾಜಹಟ್ಟಿಹೊಳಿ, ಸಹೋದರಿ ಲಕ್ಷ್ಮೀ ಹೆಬ್ಬಳ್ಕರ್ ಆರೋಗ್ಯ ವಿಚಾರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ಕ ಲಕ್ಷ್ಮೀ ಹೆಬ್ಬಾಳ್ಕರ್ ಚೇತರಿಸಿಕೊಳ್ಳುತ್ತಿದ್ದಾರೆ. ಹೆಚ್ಚು ಮಾತನಾಡಲು ಸಾಧ್ಯವಾಗುತ್ತಿಲ್ಲ. ಆದರೂ ಅವರು ಧೈರ್ಯವಾಗಿದ್ದಾರೆ. ಆತಂಕಪಡುವ ಅಗತ್ಯವಿಲ್ಲ. ಯಾವುದೋ ಕಂಟಕ ಇಷ್ಟರಲ್ಲಿಯೇ ಕಳೆದಿದೆ ಎಂದರು.
ಇಂದು ಸಂಕ್ರಾಂತಿ ಹಬ್ಬವಿರುವುದರಿಂದ ಮನೆಯವರೆಲ್ಲ ಸೇರಿ ಮನೆ ದೇವರಿಗೆ ಹೋಗಬೇಕೆಂದು ಕಾರ್ಯಕ್ರಮ ಹಾಕಿಕೊಂಡಿದ್ದೆವು. ಹಾಗಾಗಿ ನಿನ್ನೆ ಸಿಎಲ್ ಪಿ ಸಭೆ ಬಳಿಕ ರಾತ್ರಿ ಬೆಂಗಳೂರಿನಿಂದ ಬೆಳಗಾವಿಗೆ ಹೊರಟಿದ್ದೆವು. ಬೆಳಗಾವಿ ತಲುಪಲು ಇನ್ನೇನು 15 ನಿಮಿಷವಿದೆ ಎನ್ನುವಾಗ ಕಾರು ಅಪಘಾತ ಸಂಭವಿಸಿದೆ. ರಸ್ತೆಯಲ್ಲಿ ಎರಡು ನಾಯಿಗಳು ಒಂದರ ಹಿಂದೆ ಒಂದು ಬಂದಿದ್ದು, ಅವುಗಳನ್ನು ತಪ್ಪಿಸಲು ಹೋಗಿ ಕಾರು ಮರಕ್ಕೆ ಡಿಕ್ಕಿಯಾಗಿದೆ ಎಂದು ತಿಳಿಸಿದರು.
ಮನೆಯಲ್ಲಿ ದುರ್ಘಟನೆ ಸಂಭವಿಸಬಹುದು, ಸಂಕ್ರಾಂತಿವರೆಗೆ ಹುಷಾರಾಗಿರಿ ಎಂದು ನಮಗೆ ಬೇಕಾದವರೊಬ್ಬರು ಈ ಹಿಂದೆಯೇ ಭವಿಷ್ಯ ನುಡಿದಿದ್ದರು.ಸಂಕ್ರಾಂತಿಯಂದೇ ಅಪಘಾತ ಸಂಭವಿಸಿದೆ. ದೇವರ ದಯೆಯಿಂದ ಎಲ್ಲರೂ ಬಚಾವಾಗಿದ್ದೇವೆ. ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ