ಸುಳೇಬಾವಿ ಮಹಾಲಕ್ಷ್ಮೀ, ರಾಜಹಂಸಗಡ ಛತ್ರಪತಿ ಶಿವಾಜಿ ಮಹಾರಾಜರ ದರ್ಶನ ಪಡೆದ ಲಕ್ಷ್ಮೀ ಹೆಬ್ಬಾಳಕರ್
ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ – ಲಕ್ಷ್ಮೀ ಹೆಬ್ಬಾಳಕರ್ ಭರವಸೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಾಂಗ್ರೆಸ್ ಪಕ್ಷ ಭರವಸೆ ನೀಡಿದಂತೆ ಗ್ಯಾರಂಟಿ ಯೋಜನೆಗಳನ್ನು ಮೊದಲು ಜಾರಿಗೆ ತರುವ ಮೂಲಕ ವಿಶೇಷವಾಗಿ ಮಹಿಳೆಯರಿಗೆ ನೆಮ್ಮದಿಯ ಜೀವನ ಕಲ್ಪಿಸಿಕೊಡುವುದಾಗಿ ನೂತನ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭರವಸೆ ನೀಡಿದ್ದಾರೆ.
ಸಚಿವೆಯಾಗಿ ಬೆಳಗಾವಿಗೆ ಮೊದಲ ಭಾರಿಗೆ ಆಗಮಿಸಿದ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಅವರ ಗೃಹ ಕಚೇರಿಯಲ್ಲಿ ಗ್ರಾಮೀಣ ಕ್ಷೇತ್ರದ ವಿವಿಧ ಮಹಿಳಾ ಸಂಘಟನೆಗಳ ವತಿಯಿಂದ ಭಾನುವಾರ ಸನ್ಮಾನಿಸಲಾಯಿತು. ಈ ವೇಳೆ ಮಾತನಾಡಿದ ಅವರು, ಉಚಿತ ಬಸ್ ಪ್ರಯಾಣ, ತಿಂಗಳಿಗೆ 2 ಸಾವಿರ ರೂ., ವಿದ್ಯುತ್ ಬಿಲ್ ಮನ್ನಾ ಮೊದಲಾದ ಯೋಜನೆಗಳಿಂದ ಮಹಿಳೆಯರಿಗೆ ನಮ್ಮದಿಯ ಜೀವನ ಲಭಿಸಲಿದೆ. ಅದನ್ನು ಮೊದಲ ಆದ್ಯತೆಯ ಮೇಲೆ ಜಾರಿಗೊಳಿಸಲಾಗುವುದು. ನಂತರದಲ್ಲಿ ಜಿಲ್ಲೆಗೆ ಮತ್ತು ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರುತ್ತೇನೆ ಎಂದು ಅವರು ಭರವಸೆ ನೀಡಿದರು.
ನಾನು ಇಡೀ ಗ್ರಾಮೀಣ ಕ್ಷೇತ್ರದ ಮನೆ ಮಗಳು. ಇಡೀ ಕ್ಷೇತ್ರದ ಜನರ ಆಶಿರ್ವಾದದಿಂದಾಗಿ ನಾನು ಮಂತ್ರಿಯಾಗಿದ್ದೇನೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸಕ್ಕೆ ನಾನು ಸದಾ ಋಣಿಯಾಗಿರುತ್ತೇನೆ ಎಂದು ಹೆಬ್ಬಾಳ್ಕರ್ ತಿಳಿಸಿದರು.
ಇದಕ್ಕೂ ಮೊದಲು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಕಾರ್ಯಕರ್ತರು ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಅಲ್ಲಿಂದ ಸುಳೇಬಾವಿಗೆ ತೆರಳಿ ಮಹಾಲಕ್ಷ್ಮೀಯ ದರ್ಶನ, ಆಶಿರ್ವಾದಪಡೆದರು. ನಂತರ ಹಿಂಡಲಗಾ ಗಣಪತಿ ದರ್ಶನ ಪಡೆದು, ರಾಜಹಂಸಗಡಕ್ಕೆ ತೆರಳಿ ಛತ್ರಪತಿ ಶಿವಾಜಿ ಮಹಾರಾಜರ ಪಾದಕ್ಕೆರಗಿ ನಮಸ್ಕರಿಸಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸೇರಿದಂತೆ ಹಲವಾರು ಮುಖಂಡರು ಲಕ್ಷ್ಮೀ ಹೆಬ್ಬಾಳಕರ್ ಅವರ ಜೊತೆಗಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ