
ಪ್ರಗತಿವಾಹಿನಿ ಸುದ್ದಿ: ಸ್ವಾತಂತ್ರ್ಯ ಹೋರಾಟಗಾರರು, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಮಾಜಿ ಅಧ್ಯಕ್ಷರು ಹಾಗೂ ಮಾಜಿ ಸಚಿವರೂ ಆದ ಭೀಮಣ್ಣ ಖಂಡ್ರೆ ಅವರ ನಿಧನದ ಹಿನ್ನೆಲೆಯಲ್ಲಿ, ಭಾಲ್ಕಿ ನಗರದ ಶಾಂತಿಧಾಮಕ್ಕೆ ಭೇಟಿ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು, ಪಾರ್ಥಿವ ಶರೀರದ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು.

ಹೈದರಾಬಾದ್ ನಿಜಾಮರ ಆಳ್ವಿಕೆಯ ವಿರುದ್ಧದ ವಿಮೋಚನಾ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ ಖಂಡ್ರೆ ಅವರು, ಗಡಿನಾಡಿನಲ್ಲಿ ಶಿಕ್ಷಣ ಕ್ರಾಂತಿ ಮಾಡಿದ ಮಹಾನ್ ಚೇತನ. ತಮ್ಮ ಶಿಕ್ಷಣ ಸಂಸ್ಥೆಯ ಮೂಲಕ ಸಾವಿರಾರು ಗ್ರಾಮೀಣ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದವರು. ಶಾಸಕರಾಗಿ ಮತ್ತು ಸಚಿವರಾಗಿ ಬೀದರ್ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅನನ್ಯ. ವೀರಶೈವ -ಲಿಂಗಾಯತ ಸಮಾಜವನ್ನು ಸಂಘಟಿಸುವಲ್ಲಿ ಹಾಗೂ ಸಮಾಜದ ಹಿತ ಕಾಪಾಡುವುದರಲ್ಲಿ ಅವರ ಮಾರ್ಗದರ್ಶನ ಸದಾ ಸ್ಮರಣೀಯ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಹಲವಾರು ಸಚಿವರು, ಹಾಲಿ, ಮಾಜಿ ಶಾಸಕರು, ಗಣ್ಯರು ಉಪಸ್ಥಿತರಿದ್ದರು.


