*ಡಾ. ಅಂಬೇಡ್ಕರ್ ಕೇವಲ ಒಬ್ಬ ನಾಯಕ ಅಲ್ಲ, ಅವರು ಒಂದು ಶಕ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಮಹಿಳೆಯರ ಸಬಲೀಕರಣ, ಮಕ್ಕಳ ಶಿಕ್ಷಣ, ಎಲ್ಲರಿಗೂ ಗುಣಮಟ್ಟದ ಬದುಕು ಇವು ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಉದ್ದೇಶವಾಗಿತ್ತು. ಅವರು ಕೇವಲ ಒಬ್ಬ ನಾಯಕ ಅಲ್ಲ, ಅವರು ಒಂದು ಶಕ್ತಿ, ಅವರು ಒಂದು ಚಳವಳಿ. ಪ್ರತಿಯೊಬ್ಬ ಭಾರತೀಯನ ಆಶಾಕಿರಣ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಶನಿವಾರ, ಬೆಳವಟ್ಟಿ ಗ್ರಾಮದಲ್ಲಿ ಮಹಾ ಮಾನವತಾವಾದಿ, ಸಂವಿಧಾನ ಶಿಲ್ಪಿ, ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್ ಅವರ ನೂತನ ಮೂರ್ತಿಯನ್ನು ಅನಾವರಣಗೊಳಿಸಿ ಅವರು ಮಾತನಾಡುತ್ತಿದ್ದರು.

ಇಂದು ಉದ್ಘಾಟಿಸಿದ್ದು ಕೇವಲ ಡಾ.ಬಾಬಾಸಾಹೇಬ ಅಂಬೇಡ್ಕರ್ ಮೂರ್ತಿಯಲ್ಲ, ಅದೊಂದು ಶಕ್ತಿ, ಸರ್ವ ಭಾಷೆ, ಸರ್ವ ಜಾತಿ ಎಲ್ಲರಿಗೂ ಸಮಾನ ಅವಕಾಶ, ಸಮಾನ ಹಕ್ಕು ನೀಡಿದ, ವಿಶ್ವದಲ್ಲೇ ಶ್ರೇಷ್ಟ ಸಂವಿಧಾನ ನೀಡಿದ್ದು ವಿಶ್ವ ರತ್ನ ಅಂಬೇಡ್ಕರ್ ಅವರು. ಆಗಿನ ಸಂದರ್ಭ ಹೇಗಿತ್ತು ಎನ್ನುವುದನ್ನು ನಾವೆಲ್ಲ ತಿಳಿದಿದ್ದೇವೆ. ಅಂತಹ ಸಂದರ್ಭದಲ್ಲೇ, ಪ್ರಜಾಪ್ರಭುತ್ವದ ಭಗವದ್ಗೀತೆ, ಭಾರತೀಯ ಪ್ರಜಾಪ್ರಭುತ್ವದ ಶಕ್ತಿ ಸಂವಿಧಾನವನ್ನು ನೀಡಿದ್ದಾರೆ. ಮಹಿಳೆಯರಿಗೆ ಅಧಿಕಾರದ ಅವಕಾಶ ನೀಡಿದ್ದು ಅವರು ನೀಡಿದ ಸಂವಿಧಾನ. ನಾವೆಲ್ಲ ಅವರ ಜೀವನ ಆದರ್ಶಗಳನ್ನು ಪಾಲಿಸಬೇಕು ಎಂದು ಹೇಳಿದರು.
ಅಂಬೇಡ್ಕರ್ ಅವರು ಅಂದಿನ ಪರಿಸ್ಥಿತಿಯಲ್ಲಿ ಅನುಭವಿಸಿದ ಕಷ್ಟ, ಆ ಕಷ್ಟದ ನಡುವೆಯೂ ಸಾಧಿಸಿದ ಸಾಧನೆ, ವಿಶ್ವದ ಶ್ರೇಷ್ಠ ಸಂವಿಧಾನದ ರಚನೆ ಇವೆಲ್ಲ ನಮಗೆ ಆದರ್ಶವಾಗಬೇಕು. 1920ರ ದಶಕದಲ್ಲೇ,ಸಮಾಜದಲ್ಲಿ ಅಸಮಾನತೆ,ಅಸ್ಪೃಶ್ಯತೆ ತಾಂಡವವಾಡುತ್ತಿದ್ದ ಅಂದಿನ ದಿನಗಳಲ್ಲಿ ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯ ಮತ್ತು ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್ ನಿಂದ, ಎರಡೆರಡು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ಮಹಾನ್ ಚೇತನ ಅವರು.ಶಿಕ್ಷಣ, ಸಂಘಟನೆ ಮತ್ತು ಹೋರಾಟ ಅವರ ಘೋಷವಾಖ್ಯವಾಗಿತ್ತು. ಇದು ಕೇವಲ ಒಂದು ಘೋಷವಾಕ್ಯ ಅಲ್ಲ, ಇದು ಬದುಕಿನ ಮಾರ್ಗದರ್ಶನ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಈ ಪುತ್ಥಳಿ ಪ್ರತಿದಿನ ನಮಗೆ ನಾವು ಸಮಾನತೆಯ ಸಮಾಜ ನಿರ್ಮಿಸಬೇಕೆಂದು, ನಾವು ಅಂಬೇಡ್ಕರ್ ಅವರ ಕನಸುಗಳನ್ನು ಸಾಕಾರಗೊಳಿಸಬೇಕೆಂದು ನೆನಪಿಸಬೇಕು. ನನ್ನ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ, ಪ್ರತಿ ಗ್ರಾಮದಲ್ಲೂ ಅಭಿವೃದ್ಧಿ ಜೊತೆಗೆ ಸಾಮಾಜಿಕ ನ್ಯಾಯ ಮತ್ತು ಸಮಾನತೆ ತರಬೇಕೆಂಬುದು ನನ್ನ ಬದ್ಧತೆ. ಇವೆಲ್ಲವೂ ಅಂಬೇಡ್ಕರ್ ಅವರ ಕನಸಿನ ಭಾರತ ನಿರ್ಮಾಣದ ಭಾಗ. ಜಾತಿ, ಧರ್ಮ, ಭೇದಭಾವಗಳನ್ನು ಮೀರಿ ಒಗ್ಗಟ್ಟಿನ ಸಮಾಜ ನಿರ್ಮಿಸೋಣ, ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡೋಣ, ನಮ್ಮ ಯುವಕರಿಗೆ ಉತ್ತಮ ಭವಿಷ್ಯ ನಿರ್ಮಿಸೋಣ, ಅದೇ ಅಂಬೇಡ್ಕರ್ ಅವರಿಗೆ ನಿಜವಾದ ಗೌರವ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯುವರಾಜ ಕದಂ, ಬಾಳು ದೇಸೂರಕರ, ಮಲ್ಲೇಶ ಚೌಗಲೆ, ಮನೋಹರ ಬೆಳಗಾಂವ್ಕರ್, ಮಹೇಶ ಕೊಲಕಾರ, ವಾಯ್.ಪಿ.ನಾಯಿಕ್, ಡಿ.ಎನ್.ದೇಸಾಯಿ, ನಾರಾಯಣ ನಲವಡೆ, ಮಧು ನಲವಡೆ, ಸಂತೋಷ ಕಾಂಬಳೆ, ದಸ್ತಗೀರ್ ಮಲಿಕಾರ, ಸುಧಾಕರ ಭೌದ್, ಜಯವಂತ ಬಾಳೆಕುಂದ್ರಿ, ಮಧುಕರ ಜಾಧವ್, ಬಿ.ಬಿ. ದೇಸಾಯಿ, ಭುಜಂಗ ಗಾಡೇಕರರೇಖಾ ನಾಯಿಕ, ಗೌತಮ ಪಾಟೀಲ, ಸಾತೇರಿ ಚೌಗುಲೆ ಮೊದಲಾದವರು ಉಪಸ್ಥಿತರಿದ್ದರು.



