*ಮಾನವ ಸರಪಳಿ ಮೂಲಕ ಪ್ರಜಾಪ್ರಭುತ್ವದ ಆಶಯ ಪಸರಿಸುವ ಕಾರ್ಯ ಸಾಕಾರ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಬೆಳಗಾವಿಯಲ್ಲಿ ವಿಶ್ವ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಸಚಿವರು ಭಾಗಿ
ಪ್ರಗತಿವಾಹಿನಿ ಸುದ್ದಿ: ವಿಶ್ವ ಪ್ರಜಾಪ್ರಭುತ್ವ ದಿನದ ಅಂಗವಾಗಿ ರಾಜ್ಯದಲ್ಲಿ ಬೀದರ್ ನಿಂದ ಚಾಮರಾಜನಗರವರೆಗೆ ಅತಿ ಉದ್ದದ ಮಾನವ ಸರಪಳಿ ನಿರ್ಮಿಸುವ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಪಸರಿಸುವ ಕಾರ್ಯ ಯಶಸ್ವಿಯಾಗಿ ಸಾಕಾರಗೊಂಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಜಿಲ್ಲಾಡಳಿತ ಸೇರಿದಂತೆ ವಿವಿಧ ಇಲಾಖೆಗಳ ಆಶ್ರಯದಲ್ಲಿ ‘ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ’ ಅಂಗವಾಗಿ ಹಮ್ಮಿಕೊಂಡಿದ್ದ “ಸಂವಿಧಾನ ಜಾಗೃತಿ ಜಾಥಾ” ಸ್ತಭ್ಧಚಿತ್ರ ಮೆರವಣಿಗೆ ಹಾಗೂ ಐಕ್ಯತಾ ಸಮಾವೇಶದಲ್ಲಿ ಪಾಲ್ಗೊಂಡು ಸಚಿವರು ಮಾತನಾಡಿದರು.
ರಾಜ್ಯದಲ್ಲಿ ಸರ್ಕಾರ ಜನರಲ್ಲಿ ಮಾನವೀಯ ಮೌಲ್ಯಗಳನ್ನು ಸಾರುವ, ವಿವಿಧ ಮನಸ್ಸುಗಳ ಬೆಸೆಯುವ ಕಾರ್ಯ ಅತ್ಯಂತ ಅರ್ಥಪೂರ್ಣವಾಗಿದೆ. ಮಾನವ ಸರಪಳಿಯನ್ನು 25 ಲಕ್ಷ ಜನರು ನಿರ್ಮಿಸಿರುವುದು ಹೆಮ್ಮೆ ಎನಿಸುತ್ತದೆ. ಇದರಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ್, ಸಿಖ್, ಜೈನರು ಸೇರಿದಂತೆ ಎಲ್ಲ ಧರ್ಮಿಯರು ಸೇರಿ ಮಾನವ ಸರಪಳಿಯನ್ನು ಮಾಡುವುದರ ಮೂಲಕ ಸಂವಿಧಾನವನ್ನು ಎತ್ತಿ ಹಿಡಿಯುವ ಕೆಲಸ ಇಂದು ಸಾಕಾರಗೊಂಡಿದೆ ಎಂದು ಸಚಿವರು ಹೇಳಿದರು.

ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ
ಸರ್ಕಾರಗಳ ಕಾರ್ಯಕ್ರಮಗಳು ಸಮರ್ಪಕವಾಗಿ ಪ್ರಾಮಾಣಿಕವಾಗಿ ಅನುಷ್ಠಾನಗೊಳ್ಳಬೇಕು; ಯಾವುದೇ ಒಂದು ಜನಪರ ಕಾರ್ಯಕ್ರಮವಿರಲಿ, ಅದು ಯಶಸ್ಸಿಯಾಗಬೇಕಾದರೆ ಸರ್ಕಾರಿ ಅಧಿಕಾರಿಗಳು ಮತ್ತು ಸಾರ್ವಜನಿಕರೂ ಒಟ್ಟಿಗೆ ಕೈ ಜೋಡಿಸಿದಾಗ ಮಾತ್ರ ಸಾಧ್ಯ. ಬರೀ ಸರ್ಕಾರಿ ಅಧಿಕಾರಿಗಳು, ಮಂತ್ರಿಗಳು ಹೇಳಿದರೆ ಆಗುವುದಿಲ್ಲ, ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ ಎಂದು ಹೇಳಿದರು.
ದೇಶದಲ್ಲಿ ವಿವಿಧೆತೆಯಲ್ಲಿ ಏಕತೆ
ಸಂವಿಧಾನದ ಮೌಲ್ಯಗಳು, ಪ್ರಜಾಪ್ರಭುತ್ವದ ಆಶಯಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. ನಿಜವಾದ ಅರ್ಥದಲ್ಲಿ ನಮ್ಮೆಲ್ಲರ ಜವಾಬ್ದಾರಿ ಏನೆಂದರೆ, ಇಡೀ ವಿಶ್ವದಲ್ಲೇ ನಮ್ಮ ಭಾರತ ದೇಶ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶ ಎಂದೇಳುತ್ತವೆ. ಅಷ್ಟೇ ಏಕೆ, ನಮ್ಮ ದೇಶದಲ್ಲಿ ಇರುವಂತಹ ಧರ್ಮಗಳು, ಭಾಷೆ, ಜಾತಿ, ಧರ್ಮಗಳು, ಇನ್ನು ನಮ್ಮ ದೇಶದಲ್ಲಿರುವ ಅನೇಕ ಸಂಸ್ಕೃತಿ, ಆಚಾರ-ವಿಚಾರಗಳು, ಆಹಾರ ಪದ್ಧತಿ ಬೇರಲ್ಲೂ ಕಾಣುವುದಕ್ಕೆ ಸಾಧ್ಯವಿಲ್ಲ ಎಂದು ಸಚಿವರು ಪ್ರತಿಪಾದಿಸಿದರು.
ಸಂವಿಧಾನವೇ ನಮ್ಮ ಧರ್ಮ
ನಮ್ಮೆಲ್ಲರಿಗೂ ವಂದೇ ಮಾತರಂ ಎನ್ನುವುದಕ್ಕೆ ಹೆಮ್ಮೆ ಅನಿಸುತ್ತದೆ; ನಾವೆಲ್ಲರೂ ಒಂದೇ ಎನ್ನುವುದಕ್ಕೆ ಕಾರಣವಾದುದು ಅದು ನಮ್ಮ ಸಂವಿಧಾನ ಎಂದು ಹೇಳಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು, ಪ್ರಜಾಪ್ರಭುತ್ವ ಎಂದರೇನು, ಪ್ರಜಾಪ್ರಭುತ್ವದ ಮೌಲ್ಯಗಳೇನು ಎನ್ನುವುದನ್ನು ಪ್ರತಿಯೊಬ್ಬರು ತಿಳಿಯಬೇಕಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಾಕಿಕೊಟ್ಟ ಸಂವಿಧಾನವನ್ನು ನಾವೆಲ್ಲರೂ ಕೂಡ ಮನಸಾರೆ ಒಪ್ಪಿ ಅಳವಡಿಸಿಕೊಳ್ಳುವುದು ನಮ್ಮೆಲ್ಲರ ಧರ್ಮ. ಇದೇ ನಮ್ಮ ದೇಶ ಭಕ್ತಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಜಿಲ್ಲೆಯ ಶಾಸಕರುಗಳಾದ ಆಸೀಫ್ ಸೇಠ್, ವಿಠ್ಠಲ ಹಲಗೇಕರ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ್, ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನಾಂಗ, ಡಿಸಿಪಿ ರೋಹನ್, ದಿನೇಶಕುಮಾರ್ ಮೀನಾ, ಯುವರಾಜ ಕದಂ, ಮಲ್ಲೇಶ ಚೌಗುಲೆ, ಮಹಾದೇವ ತಳವಾರ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಆಫ್ರಿನ್ ಬಳ್ಳಾರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ನಮ್ಮ ದೇಶ-ನಮ್ಮ ಗ್ರಾಮೀಣ ಕ್ಷೇತ್ರ ಅದ್ಭುತ
ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿಯವರು ಬೆಳಗಾವಿ ಸುವರ್ಣಸೌಧದ ಮುಂದೆ ಕುಳಿತರೇ ಇಡೀ ನಿಮ್ಮ ಬೆಳಗಾವಿ ಗ್ರಾಮೀಣ ಕ್ಷೇತ್ರವೇ ಕಾಣುತ್ತದೆ ಎನ್ನುತ್ತಿದ್ದಾರೆ. ಹೌದು, ಇದು ನಮಗೆ ಹೆಮ್ಮೆ ಅನಿಸುತ್ತದೆ. ನಾನು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿಯೆಂದು ಕರೆಸಿಕೊಳ್ಳುವುದಕ್ಕೆ ಬಹಳ ಹರ್ಷವಾಗುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಇಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವುದಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮಾರ್ಗದರ್ಶನ ಮಾಡುತ್ತಿದ್ದಾರೆ. ಧೈರ್ಯವನ್ನು ಕೊಡುವುದಕ್ಕೆ ಕಿತ್ತೂರು ರಾಣಿ ನಿಂತುಕೊಂಡಿದ್ದಾಳೆ. ಲಾಯಲಿಟಿ ತೋರಿಸುವುದಕ್ಕೆ ನನಗೆ ಸಂಗೊಳ್ಳಿ ರಾಯಣ್ಣ ನಿಂತುಕೊಂಡಿದ್ದಾನೆ. ನನಗೆ ಆಶೀರ್ವಾದ ಮಾಡುವುದಕ್ಕೆ ರಾಜಹಂಸಘಡದ ಮೇಲೆ ಶಿವಾಜಿ ಮಹಾರಾಜ್ ನಿಂತಿದ್ದಾರೆ. ಇದು ನನ್ನ ದೇಶ, ನಮ್ಮ ಕ್ಷೇತ್ರ ಅದ್ಭುತ ಎನಿಸುತ್ತದೆ ಎಂದು ಸಚಿವರು ಸಂತಸಪಟ್ಟರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ