*ಹಿಂದಿದ್ದವರು ಕೆಲಸ ಮಾಡದ್ದರಿಂದ ನನಗೆ ಆ ಭಾಗ್ಯ ಸಿಕ್ಕಿದೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಕೊಂಡಸಕೊಪ್ಪದಲ್ಲಿ ದುರ್ಗಾದೇವಿ ದೇವಸ್ಥಾನ ಉದ್ಘಾಟನೆ ವೇಳೆ ಸಚಿವರ ಮಾತು

ಪ್ರಗತಿವಾಹಿನಿ ಸುದ್ದಿ: ದೇವಸ್ಥಾನಗಳು ನಮ್ಮ ಸಂಸ್ಕೃತಿಯ ಭಾಗವಾಗಿದ್ದು, ಭಕ್ತಿ -ಭಾವನೆಯಿಂದ ನಡೆದುಕೊಂಡರೆ ಮನಸ್ಸು ಪರಿಶುದ್ಧವಾಗುತ್ತದೆ. ದೇವಸ್ಥಾನಗಳಿಂದ ಊರಿಗೆ ಅಭಿವೃದ್ಧಿ, ಸಮೃದ್ಧಿ, ಶಾಂತಿ ಲಭಿಸುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಕೊಂಡಸಕೊಪ್ಪ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ದುರ್ಗಾದೇವಿ ಮಂದಿರದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಊರು ಉದ್ಧಾರವಾಗಿ, ಕೆಟ್ಟ ಛಾಯೆ ತಾಗಬಾರದು ಎಂಬ ಉದ್ದೇಶದಿಂದ ದೇವಸ್ಥಾನಗಳನ್ನು ನಿರ್ಮಾಣ ಮಾಡಿ ವಾಸ್ತು ಶಾಂತಿ ಮಾಡಲಾಗುತ್ತದೆ. ಕೊಂಡಸಕೊಪ್ಪ ಗ್ರಾಮದಲ್ಲಿ 4 ಗುಡಿಗಳನ್ನು ನಿರ್ಮಾಣ ಮಾಡಲಾಗಿದ್ದು, ಗ್ರಾಮೀಣ ಕ್ಷೇತ್ರದಲ್ಲಿ ಕಳೆದ 7 ವರ್ಷದಲ್ಲಿ 150ಕ್ಕೂ ಹೆಚ್ಚು ಗುಡಿಗಳನ್ನು ಜೀರ್ಣೋದ್ಧಾರ ಮಾಡುವ ಭಾಗ್ಯ ನನಗೆ ಸಿಕ್ಕಿದೆ. ಈ ಹಿಂದೆ ಇದ್ದವರ ಮೇಲೆ ನಾನು ಆರೋಪ ಮಾಡಲು ಹೋಗುವುದಿಲ್ಲ. ಆದರೆ ಅವರು ಅಭಿವೃದ್ದಿ ಕೆಲಸ ಮಾಡದ್ದರಿಂದ ನನಗೆ ಇಂತಹ ಅವಕಾಶ ಸಿಕ್ಕಿದೆ. ಎಲ್ಲರಿಗೂ ಈ ಭಾಗ್ಯ ಸಿಗುವುದಿಲ್ಲ ಎಂದರು.

ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ನಾನು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ. ನಾನಾಗಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಲಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಾಗಲಿ ಕೊಟ್ಟ ಮಾತನ್ನು ಎಂದೂ ತಪ್ಪುವುದಿಲ್ಲ. ಒಮ್ಮೆ ಮಾತು ಕೊಟ್ಟರೆ ಮಾಡಿಯೇ ತೀರುತ್ತೇವೆ ಎಂದು ಸಚಿವರು ಹೇಳಿದರು.




