Kannada NewsKarnataka NewsLatestPolitics

*ಸ್ವಾರ್ಥ‌ರಹಿತ ರಾಜಕಾರಣ ಮುಖ್ಯ: ಲಕ್ಷ್ಮೀ ಹೆಬ್ಬಾಳಕರ್*

ಸಮುದಾಯ ಭವನ ಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಸಚಿವೆ ಹೇಳಿಕೆ

ಪ್ರಗತಿವಾಹಿನಿ ಸುದ್ದಿ: ಜನರ ಪ್ರೀತಿ, ವಿಶ್ವಾಸ ನನಗೆ ಮುಖ್ಯ. ನಾನು ಎಂದೂ ದ್ವೇಷ ರಾಜಕೀಯ ಮಾಡುವುದಿಲ್ಲ. ನನಗೆ ರಾಜಕೀಯ ಪುನರ್ಜನ್ಮ ನೀಡಿದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರ ಋಣ ತೀರಿಸಲು ಸಾಧ್ಯವಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಸತತ ಎರಡು ಚುನಾವಣೆಯಲ್ಲಿ ಸೋತರೂ ನನಗೆ ಧೈರ್ಯ ತುಂಬಿದ ಕ್ಷೇತ್ರದ ಜನರಿಗೆ ನಾನು ಜೀವನ ಪರ್ಯಂತ ಋಣಿಯಾಗಿರುವೆ ಎಂದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಾರಿಹಾಳ ಗ್ರಾಮದಲ್ಲಿ ಗುರುವಾರ ಸಂಜೆ ಮುತಗಾ, ಮೊದಗಾ, ತುಮ್ಮರಗುದ್ದಿ, ಕರಡಿಗುದ್ದಿ ಹಾಗೂ ಮಾರಿಹಾಳ ಈ ಎಲ್ಲ ಗ್ರಾಮಗಳಲ್ಲಿ ಸಮುದಾಯ ಭವನ ನಿರ್ಮಾಣದ ಕಾಮಗಾರಿಗಳಿಗೆ ಚಾಲನೆ ನೀಡಿ‌ ಮಾತನಾಡಿದರು.

ರಾಮ ರಾಜ್ಯದ ಪರಿಕಲ್ಪನೆಯ ಸರ್ಕಾರ
ನಾನು ಅಪ್ಪಟ ರಾಮಭಕ್ತಳು. ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಕೂಡ ರಾಮ ರಾಜ್ಯ ಪರಿಕಲ್ಪನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ನಮ್ಮ ಸರ್ಕಾರ ಪ್ರತಿ ತಿಂಗಳು ಜನರ ಗ್ಯಾರಂಟಿ ಯೋಜನೆಗಳಿಗಾಗಿ 5 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ‌. ಇದು ನಿಜವಾದ ರಾಮ ರಾಜ್ಯದ ಪರಿಕಲ್ಪನೆ ಎಂದು‌‌ ಹೇಳಿದರು. ಗ್ಯಾರಂಟಿ ಯೋಜನೆಗಳಿಂದ ಜನರು ಖುಷಿಯಾಗಿದ್ದಾರೆ. ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೇ ನಮ್ಮ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಮೂಲಕ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಹಣ ತಲುಪುತ್ತಿದೆ ಎಂದು ಸಚಿವರು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ‌‌ ಅವರ ಆಶೀರ್ವಾದ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಇಂದು ಕ್ಷೇತ್ರದ ಮನೆಮಗಳಾಗಿ ಕಾರ್ಯನಿರ್ವಹಿಸುತ್ತಿರುವೆ. ಬೆಳಗಾವಿ ಗ್ರಾಮೀಣ ಕ್ಷೇತ್ರ ಸಿಕ್ಕಿದ್ದು, ನನ್ನ ಪೂರ್ವ ಜನ್ಮದ ಪುಣ್ಯ ಎಂದು ‌ಸಚಿವರು ಹೇಳಿದರು.

ಧರ್ಮರಾಯನ ಧರ್ಮ, ಅರ್ಜುನನ ಗುರಿ, ಕೃಷ್ಣನ ಚತುರತೆ, ವಿಧುರನ ಬುದ್ಧಿ, ಭೀಮನ ಬಲ, ರಾಮನ ಉದಾರತೆ, ಶಿವಾಜೀ ಮಹರಾಜರ ಧೈರ್ಯ.ಈ ಗುಣಗಳು ಇದ್ದಾಗ ಮಾತ್ರ ಒಳ್ಳೆಯ ನಾಯಕರಾಗಲು ಸಾಧ್ಯ. ನಾಯಕತ್ವ ಗುಣದ ಜೊತೆಗೆ ವಿನಮ್ರತೆಯೂ ಇರಬೇಕು. ಆ ವಿನಮ್ರತೆ ಇದ್ದಾಗಷ್ಟೆ ರಾಜಕೀಯ ನಾಯಕರಿಗೆ ಸಾರ್ಥಕತೆ ಇರುತ್ತದೆ ಎಂದು‌‌ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ನಾನೆಂದು ಜಾತಿ ರಾಜಕೀಯ ಮಾಡುವುದಿಲ್ಲ. ನಾನು ಹುಟ್ಟಿದ್ದು ಲಿಂಗಾಯತ ಸಮಾಜವಾದರೂ ನನಗೆ ಪುನರ್ಜನ್ಮ ಕೊಟ್ಟಿದ್ದು ಕ್ಷೇತ್ರದ ಮತದಾರರು. ಸ್ವಾರ್ಥ ರಹಿತ ರಾಜಕೀಯ ಮಾಡುವುದೇ ನನ್ನ ಗುರಿ ಎಂದರು‌.

ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷರಾದ ಶಂಕರಗೌಡ ಪಾಟೀಲ, ಗ್ರಾಮ ಪಂಚಾಯತ್ ಅಧ್ಯಕ್ಷೆ ಗಿರಿಜಾ ಪಾಟೀಲ, ಉಪಾಧ್ಯಕ್ಷ ಆಸೀಫ್ ಮುಲ್ಲಾ, ರಾಮಚಂದ್ರ ಚವ್ಹಾಣ, ಮಹಮ್ಮದ್ ಗೌಸ ಭಾಗವಾನ್, ಕಲ್ಲಪ್ಪ ಸೀತಿಮನಿ, ನಾರಾಯಣ ಸೊಗಲಿ, ಸಂಜಯ್ ಚಾಟೆ, ಬಸವರಾಜ ಮ್ಯಾಗೋಟಿ, ಪಿಡಿಓ ರಾಣಿ ಪೂಜಾರ, ಲಕ್ಷ್ಮೀನಾರಾಯಣ ಕಲ್ಲೂರ್, ನಿರ್ಮಿತ್ರ ಕೇಂದ್ರ‌ ಪ್ರೊಜೆಕ್ಟ್ ಡೈರೆಕ್ಷರ್ ಶೇಖರಗೌಡ ಕುರಡಗಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Related Articles

Back to top button