*ಶ್ರಮಜೀವಿಗಳಿಗೆ ಆಶ್ರಯವಾಗಿದ್ದ ನರೇಗಾಗೆ ಬಿಜೆಪಿ ಕೊಡಲಿ ಪೆಟ್ಟು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆರೋಪ*

ಪ್ರಗತಿವಾಹಿನಿ ಸುದ್ದಿ: ಶ್ರಮಜೀವಿಗಳಿಗೆ ಆಶ್ರಯವಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಕೇಂದ್ರ ಸರ್ಕಾರ ಕೊಡಲಿ ಪೆಟ್ಟು ಹಾಕಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಆರೋಪಿಸಿದರು.
ಶಿವಮೊಗ್ಗದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಯೋಜನೆಯ ಸ್ವರೂಪ ಬದಲಿಸುವ ವೇಳೆ ಒಕ್ಕೂಟದ ವ್ಯವಸ್ಥೆಯಲ್ಲಿ ರಾಜ್ಯಗಳ ಜೊತೆ ಚರ್ಚೆ ನಡೆಸಬೇಕಿತ್ತು ಎಂದರು.
ಸಂವಿಧಾನಬದ್ಧ ಹಕ್ಕನ್ನು ನರೇಗಾದಲ್ಲಿ ನೀಡಲಾಗಿತ್ತು. ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮನರೇಗಾ ಯೋಜನೆ ತೆಗೆದು ಜಿಬಿ ಜಿ ರಾಮ್ ಜಿ ಯೋಜನೆ ತರಲಾಗಿದೆ. ಉದ್ಯೋಗ ಖಾತ್ರಿಯಲ್ಲಿ ಗ್ರಾಮ ಪಂಚಾಯತಿಯವರು ತೆಗೆದುಕೊಳ್ಳುವ ನಿರ್ಣಯಗಳನ್ನು ಇದೀಗ ದೆಹಲಿಯಲ್ಲಿ ನಿರ್ಣಯ ಮಾಡಲಾಗುತ್ತಿದೆ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ಉದ್ಯೋಗ ಖಾತ್ರಿಯಲ್ಲಿ ಆರು ಕೋಟಿ ಕುಟುಂಬದ ಪರವಾಗಿ ರಾಷ್ಟ್ರ ವ್ಯಾಪಿ ಆಂದೋಲನ, ಪ್ರತಿಭಟನೆ ಮಾಡುತ್ತಿದ್ದೇವೆ. ಹಣ ದುರುಪಯೋಗ ಆಗುತ್ತಿದ್ದರೆ ತಪ್ಪಿಸುವುದಾಗಿ ಹೇಳಿದ್ದು ತುಂಬಾ ಸಂತೋಷ, ಆದರೆ ಹಣ ದುರುಪಯೋಗ ತಿಳಿದುಕೊಳ್ಳಲು 12 ವರ್ಷ ಬೇಕಾಯಿತೇ ಎಂದು ಪ್ರಶ್ನಿಸಿದ ಸಚಿವರು, ಬಿಜಿಪಿಗರಿಗೆ ನಾಚಿಕೆ ಆಗಬೇಕು ಎಂದರು.
ಇನ್ನು ಬೆಳಗಾವಿ ಗಡಿ ಭಾಗ ಚೋರ್ಲ ಘಾಟ್ ನಲ್ಲಿ 2000 ರೂ ನೋಟ್ ಕಂತೆಯ 400 ಕೋಟಿ ಸಿಕ್ಕಿದೆ ಎನ್ನಲಾಗುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಬೆಳಗಾವಿ ಪೊಲೀಸರು ಚೆನ್ನಾಗಿ ತನಿಖೆ ಮಾಡುತ್ತಿದ್ದಾರೆ. ಮಹಾರಾಷ್ಟ್ರದಿಂದ ನಿರೀಕ್ಷಿತ ಸಹಕಾರ ಸಿಗುತ್ತಿಲ್ಲ. ಹಣ ಯಾರದ್ದು ಎಂದು ತಿಳಿಯಬೇಕು, ಗುಜರಾತ್ ನಿಂದ ಬಂದಿದೆ ಎನ್ನಲಾಗುತ್ತಿದೆ. ಕುಂಬಳಕಾಯಿ ಕಳ್ಳ ಎಂದರೆ ಬಿಜಎಪಿಯವರು ಹೆಗಲುಮುಟ್ಟಿ ಯಾಕೆ ನೋಡಿಕೊಳ್ಳುತ್ತಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಶ್ನಿಸಿದರು.
ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕತೆ ಇಲ್ಲ. ಅದಾನಿ, ಅಂಬಾನಿಗೆ ದೇಶ ಬರೆದುಕೊಟ್ಟಿದ್ದಾರೆ. ಅವರ 23,000 ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಕರ್ನಾಟಕದಲ್ಲಿ 40% ಭ್ರಷ್ಟಾಚಾರ ನಡೆಸಿದವರು, ಮುಖ್ಯಮಂತ್ರಿ ಜೈಲಿಗೆ ಹೋಗಿ ಬಂದಿದ್ದಾರೆ ಇವರಿಗೆ ನೈತಿಕತೆ ಇದೆಯಾ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಿಜೆಪಿ ವಿರುದ್ಧ ಕಿಡಿಕಾರಿದರು.


