*ಭಾರೀ ಪ್ರಮಾಣದಲ್ಲಿ ಅಭಿವೃದ್ಧಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಸನ್ಮಾನಿಸಿದ ಗ್ರಾಮಸ್ಥರು*

ಪ್ರಗತಿವಾಹಿನಿ ಸುದ್ದಿ: ಗ್ರಾಮಕ್ಕೆ ಭಾರೀ ಪ್ರಮಾಣದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಂಜೂರು ಮಾಡಿಸಿರುವ ಹಿನ್ನೆಲೆಯಲ್ಲಿ ಕಂಗ್ರಾಳಿ ಬಿಕೆ ಗ್ರಾಮಸ್ಥರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಸೋಮವಾರ ಸನ್ಮಾನಿಸುವ ಮೂಲಕ ಕೃತಜ್ಞತೆ ಸಲ್ಲಿಸಿದರು.
ಕಂಗ್ರಾಳಿ ಬಿ.ಕೆ ಗ್ರಾಮದಲ್ಲಿ ಸುಮಾರು 9 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರು ಸೋಮವಾರ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರ ವತಿಯಿಂದ ಪ್ರೀತಿ -ಪೂರ್ವಕ ಸನ್ಮಾನ ಆಯೋಜಿಸಲಾಗಿತ್ತು. ಕಳೆದ 5-6 ವರ್ಷಗಳಿಂದ ಕ್ಷೇತ್ರದಲ್ಲಿ 22 ಕೋಟಿ ರೂ.ಗಳಿಗಿಂತ ಹೆಚ್ಚು ವೆಚ್ಚದ ಕಾಮಗಾರಿಗಳನ್ನು ಸಚಿವರು ಮಾಡಿಸಿದ್ದಾರೆ.

ಗ್ರಾಮದ ವಿವಿಧ ಗಲ್ಲಿಗಳ ಸಿಸಿ ರಸ್ತೆ, ಚರಂಡಿಗಳ ನಿರ್ಮಾಣ, ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ನಿರ್ಮಾಣ, ಲಕ್ಷ್ಮೀ ದೇವಸ್ಥಾನ ಗದ್ದುಗೆ ನಿರ್ಮಾಣ, ಫೇವರ್ಸ್ ಅಳವಡಿಕೆಯ ಕಾಮಗಾರಿ, ಅಂಗನವಾಡಿ ಕಟ್ಟಡಗಳ ನಿರ್ಮಾಣ, ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಹಾಗೂ ಇನ್ನಿತರ ಹೆಚ್ಚಿನ ಅಭಿವೃದ್ಧಿ ಕಾಮಗಾರಿಳಿಗೆ ಸಚಿವರು ಚಾಲನೆ ನೀಡಿದರು.

ಈ ವೇಳೆ ಕಾಡಾ ಅಧ್ಯಕ್ಷರಾದ ಯುವರಾಜ ಕದಂ, ಪಂಚಾಯತ್ ಅಧ್ಯಕ್ಷರಾದ ರೋಹಿಣಿ ನಾಥಬುವಾ, ಉಪಾಧ್ಯಕ್ಷರಾದ ದೀಪಾ ನಾಥಬುವಾ, ಜಯರಾಮ ಪಾಟೀಲ, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್, ಮಾರುತಿ ಪಾಟೀಲ, ಸದೆಪ್ಪ ರಾಜಕಟ್ಟಿ, ಅನಿಲ ಪಾವಸೆ, ದತ್ತಾ ಪಾಟೀಲ, ಉಮೇಶ ಪಾಟೀಲ, ದಾದಾಸಾಹೇಬ್ ಬದರಗಡೆ, ಮಲ್ಲೇಶಿ ಬುಡ್ರೆನೂರ್, ನವನಾಥ್ ಪೂಜಾರಿ, ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು.



