*ಸರ್ಕಾರದ ಯೋಜನೆಗಳು ಪುಸ್ತಕಕ್ಕೆ ಸೀಮಿತವಾಗದೇ, ರೈತರಿಗೆ ತಲುಪುವಂತಾಬೇಕು : ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಸರ್ಕಾರದ ಯೋಜನೆಗಳು ಕೇವಲ ಪುಸ್ತಕಕ್ಕೆ ಸೀಮಿತವಾಗದೇ ರೈತರ ಮನೆ ಬಾಗಿಲಿಗೆ ಮುಟ್ಟಬೇಕು. ರೈತ ಸಂತೋಷವಾಗಿದ್ದರೆ, ಇಡೀ ದೇಶವೇ ಸಮೃದ್ಧಿಯಾಗಿರುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಳಗಾವಿಯ ಮಹಾಂತೇಶ ನಗರದ ಸ್ಪೇಷಾಲಿಟಿ ಪಶುವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ ಶನಿವಾರ ನಡೆದ ವಿಶ್ವ ಪಶುವೈದ್ಯಕೀಯ ದಿನಾಚರಣೆ ಹಾಗೂ ಪಶುಗಳ ಕಾಲು ಬಾಯಿ ರೋಗದ 9ನೇ ಸುತ್ತಿನ ಲಸಿಕಾ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ರೈತ ಬೆಳೆದರೆ ಗ್ರಾಮ ಬೆಳೆದಂತೆ, ಗ್ರಾಮ ಬೆಳೆದರೆ ಜಿಲ್ಲೆ ಬೆಳೆದಂತೆ, ಜಿಲ್ಲೆ ಬೆಳೆದರೆ ರಾಜ್ಯ, ದೇಶ ಬೆಳೆದಂತೆ ಎಂದರು.

ತಾನು ಸಾಕಿದ ಪಶುಗಳು ಆರೋಗ್ಯವಾಗಿದ್ದರೆ, ರೈತ ಸಂತೋಷವಾಗಿರುತ್ತಾನೆ. ರೈತ ಯಾವಾಗಲೂ ಸಂತೋಷವಾಗಿದ್ದರಷ್ಟೇ ದೇಶ ಸಮೃದ್ಧಿಯಾಗಿರುತ್ತದೆ. ಸರ್ಕಾರದ ಯೋಜನೆಗಳನ್ನು ರೈತರ ಮನೆ ಬಾಗಿಲಿಗೆ ಮುಟ್ಟಿಸುವ ಸಲುವಾಗಿಯೇ ಪಶು ಸಖಿಯರನ್ನು ನೇಮಿಸಿಕೊಳ್ಳಲಾಗಿದೆ ಎಂದು ಸಚಿವರು ಹೇಳಿದರು.

ಪಶುಸಂಗೋಪನಾ ಇಲಾಖೆ ಹಾಗೂ ಹೈನುಗಾರಿಕೆ ಜೊತೆ ಮಹಿಳೆಯರಿಗೆ ಹತ್ತಿರದ ಸಂಬಂಧವಿದೆ. ಹೈನುಗಾರಿಕೆಯಿಂದ ಅದೆಷ್ಟೋ ಮಹಿಳೆಯರು ಹಾಲು ಉತ್ಪಾದನೆ ಮಾಡುವ ಮೂಲಕ ಜೀವನ ಕಂಡುಕೊಂಡಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ರೈತರಿಗೆ ಆಶ್ರಯದಾತ ಆಗಿರುವುದೇ ಮೇಕೆ, ಕುರಿ, ಹಸು, ಧನ, ಕರುಗಳು. ಇವುಗಳಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಲಸಿಕೆ ನೀಡುವ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಸಚಿವರು ಹಾರೈಸಿದರು.


