LatestUncategorized

*ಉದ್ಯಾನ ನಗರದ ಗತ ವೈಭವವನ್ನು ಮರುಕಳಿಸಲು ಕ್ರಮ: ಸಿಎಂ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರು ಉದ್ಯಾನ ನಗರ ಎಂದು ಈಗಾಗಲೇ ಪ್ರಸಿದ್ಧಿಯಾಗಿದೆ. ಅಭಿವೃದ್ಧಿಯಲ್ಲಿ ಈ ಹೆಸರು ಹಿಂದೆ ಸರಿದಿದ್ದು, ಮತ್ತೊಮ್ಮೆ ಉದ್ಯಾನ ನಗರದ ಗತ ವೈಭವವನ್ನು ಮರುಕಳಿಸುವಂತೆ ಸರ್ಕಾರ ಕ್ರಮ ವಹಿಸಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನಕಲಾ ಸಂಘದ ವತಿಯಿಂದ ಲಾಲ್‍ಬಾಗ್ ಗಾಜಿನ ಮನೆಯಲ್ಲಿ ಆಯೋಜಿಸಿರುವ
ಬೆಂಗಳೂರು ನಗರದ ಇತಿಹಾಸ ವಿಷಯಾಧಾರಿತದ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ – 2023 ಉದ್ಘಾಟಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಉದ್ಯಾನನಗರ ಹೆಸರು ಖಾಯಂ:
ಬೆಂಗಳೂರಿನ ಲಾಲ್ ಬಾಗ್ , ಕಬ್ಬನ್ ಪಾರ್ಕ್ ಸೇರಿದಂತೆ ಪ್ರಮುಖ ಉದ್ಯಾನಗಳನ್ನು ಉತ್ತಮವಾಗಿಟ್ಟುಕೊಂಡು ಬಿಬಿಎಂಪಿ ನಿರ್ವಹಿಸುವ ಹೊಸ ಉದ್ಯಾನವನ ಗಳಲ್ಲಿ ಹೆಚ್ಚಿನ ಸಸ್ಯ ಸಂಪತ್ತನ್ನು ಬೆಳೆಸುವುದು ಹಾಗೂ ಹೊರವಲಯದಲ್ಲಿ ಹೊಸ ಉದ್ಯಾನ ಗಳನ್ನು ನಿರ್ಮಿಸುವ ಮೂಲಕ ಉದ್ಯಾನ ನಗರ ಹೆಸರನ್ನು ಖಾಯಂ ಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

ರಾಜ್ಯದಲ್ಲಿ ಹಸಿರು ಪದರ ವಿಸ್ತರಣೆಯಾಗಬೇಕು:

213 ನೇ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿದ್ದು, ಫಲಪುಷ್ಪ ಪ್ರದರ್ಶನ ಅತ್ಯಂತ ಜನಪ್ರಿಯವಾಗಿದ್ದು, ಪ್ರತಿ ವರ್ಷ ಲಕ್ಷಾಂತರ ಜನ ಭೇಟಿ ನೀಡುತ್ತಾರೆ. ಈ ಬಾರಿ 10- 15 ಲಕ್ಷ ಜನ ಬರುವ ನಿರೀಕ್ಷೆ ಇದೆ. ಅದಕ್ಕಾಗಿ ತೋಟಗಾರಿಕಾ ಇಲಾಖೆ ವ್ಯವಸ್ಥೆ ಗಳನ್ನು ಮಾಡಿಕೊಂಡಿದೆ. ಫಲಪುಷ್ಪ ಎಲ್ಲರಿಗೂ ಬಹಳ ಪ್ರಿಯವಾಗಿರುವಂಥದ್ದು, ಇಲ್ಲಿ ಪ್ರದರ್ಶನದ ಮುಖಾಂತರ ರಾಜ್ಯದ ಸಸ್ಯಸಂಪತ್ತು ಎಷ್ಟು ದೊಡ್ಡದಿದೆ, ವಿಭಿನ್ನ, ವಿಸ್ತಾರವಾಗಿದೆ ಎಂದು ಪ್ರದರ್ಶನವಾಗುತ್ತದೆ. ಸಸ್ಯಸಂಪತ್ತನ್ನು ಹೆಚ್ಚಿಗೆ ಮಾಡುವುದು ನಮ್ಮ ಉದ್ದೇಶ. ರಾಜ್ಯದಲ್ಲಿ ಹಸಿರು ಪದರ ವಿಸ್ತರಣೆಯಾಗಬೇಕು. ಅದಕ್ಕಾಗಿ ಹಸಿರು ಆಯವ್ಯಯವನ್ನು ರೂಪಿಸಲಾಗಿದೆ. 100 ಕೋಟಿ ರೂ.ಗಳನ್ನು ಹಸಿರು ವಿಸ್ತರಣೆಗಾಗಿ ಮೀಸಲಿರಿಸಿದೆ. ಅದರ ಅನುಷ್ಠಾನ ವೂ ಆಗುತ್ತಿದೆ. ಗುಡ್ಡಗಾಡು ಪ್ರದೇಶಗಳ ಸಂಪೂರ್ಣ ಹಸಿರು ಮಾಡಿ ಪರಿಸರ ಸಮತೋಲನ ಕಾಯ್ದುಕೊಳ್ಳಲು.ರಾಜ್ಯದಲ್ಲಿ ಪ್ರಥಮ ಬಾರಿಗೆ ದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಜೊತೆಗೆ ತೋಟಗಾರಿಕೆ ವಿಸ್ತರಣೆಯೂ ಆಗಬೇಕು.ಲಾಲ್ ಬಾಗ್ ನಿಂದ ಹಿಡಿದು ರಾಜ್ಯದೆಲ್ಲೆಡೆ ತೋಟಗಾರಿಕೆ ಇದೆ. ಇವುಗಳ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮ ರೂಪಿಸುತ್ತಿದ್ದು, ಬಜೆಟ್ ನಲ್ಲಿ ಅನುದಾನ ನೀಡಬೇಕೆನ್ನುವ ಚಿಂತನೆಯೂ ಇದೆ. ತೋಟಗಾರಿಕೆಯಿಂದ ಹಸಿರು ಹೆಚ್ಚುವುದರ ಜೊತೆಗೆ ಅಲ್ಲಿ ಉತ್ಪಾದನೆ, ಉತ್ಪನ್ನ ಹೆಚ್ಚಾಗುತ್ತದೆ ಹಾಗೂ ಪೌಷ್ಟಿಕ ಆಹಾರವನ್ನು ಒದಗಿಸಲು ಸಾಧ್ಯವಿದೆ. ದೊಡ್ಡ ಪ್ರಮಾಣದಲ್ಲಿ ತೋಟಗಾರಿಕೆಯನ್ನು ವಿಸ್ತರಿಸಿ, ಫಾರ್ಮ್ ಗಳನ್ನು ಬೆಳೆಸುವ ಕೆಲಸವನ್ನು ಸರ್ಕಾರ ಮಾಡುತ್ತದೆ ಎಂದರು.

ಜನ ಫಲಪುಷ್ಪಗಳನ್ನು ಬೆಳೆಸಲು ಪ್ರಯತ್ನಿಸಬೇಕು:
ಜನ ಫಲಪುಷ್ಪ ಪ್ರದರ್ಶನದ ಲಾಭ ಪಡೆಯಲಿ ಹಾಗೂ ತಮ್ಮದೇ ರೀತಿಯಲ್ಲಿ ಫಲಪುಷ್ಪಗಳನ್ನು ಬೆಳೆಸಲು ತಮ್ಮ ಪ್ರಯತ್ನ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ತೋಟಗಾರಿಕಾ ಸಚಿವ ಮುನಿರತ್ನ, ವಿಧಾನ ಪರಿಷತ್ ಸದಸ್ಯ ಟಿ. ಎ. ಶರವಣ ಮೊದಲಾದವರು ಉಪಸ್ಥಿತರಿದ್ದರು.

*ಹಾವೇರಿ BJP ಪಾಳಯದಲ್ಲಿ ಸಂಚಲನ ಮೂಡಿಸಿದ ಡಿ.ಕೆ.ಶಿವಕುಮಾರ್ ಹೇಳಿಕೆ*

https://pragati.taskdun.com/d-k-shivakumarhaveribjp-mlascongress/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button