ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸರ್ಕಾರದ ವಸತಿ ಯೋಜನೆಯಡಿ ಫಲಾನುಭವಿಗಳು ಪಡೆದಂತಹ ಮನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು. ಅದನ್ನು ಮಾರಾಟ ಮಾಡಬೇಡಿ ಎಂದು ವಸತಿ ಸಚಿವ ವಿ.ಸೋಮಣ್ಣ ಕಿವಿಮಾತು ಹೇಳಿದರು.
ನಿಪ್ಪಾಣಿಯ ಶಿಂಧೆ ನಗರದಲ್ಲಿ ರಾಜೀವ ಗಾಂಧಿ ವಸತಿ ನಿಗಮದ ವತಿಯಿಂದ ಪಿಎಂಎವೈ-ಎಎಚ್ ಪಿ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ಬುಧವಾರ(ನ.11) ಶಂಕುಸ್ಥಾಪನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಪಿಎಂಎವೈ-ಎಎಚ್ ಪಿ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಈ ವಸತಿಗಳನ್ನು 1 ವರ್ಷದಲ್ಲಿ ನಿರ್ಮಾಣ ಮಾಡುವ ಗುರಿಯನ್ನು ಹೊಂದಿದ್ದು, ಶೀಘ್ರವೇ ಫಲಾನುಭವಿಗಳಿಗೆ ವಿತರಿಸಲಾಗುವುದು.
ಮನೆ ಹೊಂದಿಲ್ಲದಂತಹ ಬಡ ಜನರು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಎಲ್ಲರಿಗೂ ಸೂರನ್ನು ಸರ್ಕಾರದ ವತಿಯಿಂದ ನೀಡಲಾಗುವುದು ಎಂದು ಭರವಸೆ ನೀಡಿದರು.
ಕೋವಿಡ್-19 ಸಂಧರ್ಭದಲ್ಲಿ ಸರ್ಕಾರದಲ್ಲಿ ಅನುದಾನದ ಕೊರತೆಯನ್ನದೇ ಇಂತಹ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ.
ರಾಜ್ಯದಲ್ಲಿಯೇ ನಿಪ್ಪಾಣಿ ನಗರದಲ್ಲಿ ಅತ್ಯಂತ ಸುಸಜ್ಜಿತ ಈ ಪ್ರದೇಶದಲ್ಲಿ ವಸತಿಗೃಹ ನಿರ್ಮಾಣಕ್ಕೆ ಸ್ಥಳ ನಿಗದಿ ಪಡಿಸಿದಂತಹ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಧನ್ಯವಾದಗಳನ್ನು ತಿಳಿಸಿದರು.
ಅದೇ ರೀತಿ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಎಲ್ಲರೂ ಕೋವಿಡ್-19 ನಿಯಮಗಳನ್ನು ಪಾಲಿಸಿದ್ದಕ್ಕೆ ವಸತಿ ಸಚಿವ ವಿ.ಸೋಮಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.
ಸರ್ಕಾರವು ಪಟ್ಟಣದ ಪ್ರದೇಶದಲ್ಲಿ ಈ ಯೋಜನೆಯಡಿ 47,000 ಮನೆಗಳ ನಿರ್ಮಾಣದ ಗುರಿ ಹೊಂದಿದ್ದು.ಇನ್ನೂ ಹೆಚ್ಚಿನ ವಸತಿಗಳ ನಿರ್ಮಾಣಕ್ಕೆ ಬಡ ಜನರಿಗೆ ನೀಡಲು ಸರ್ಕಾರದ ಸಿದ್ದವಿದೆ ಎಂದು ತಿಳಿಸಿದರು.
*10 ಕೋಟಿ ಹೆಚ್ಚಿನ ಅನುದಾನದ ಭರವಸೆ:
ಅದೇ ರೀತಿ ನಿಪ್ಪಾಣಿ ನಗರದಲ್ಲಿ ನಿರ್ಮಾಣವಾಗುತ್ತಿರುವ ಈ ವಸತಿಗಳಿಗೆ ಸುಸಜ್ಜಿತ ಉದ್ಯಾನ ಹಾಗೂ ಹೆಚ್ಚಿನ ಅಭಿವೃದ್ಧಿಗಾಗಿ 10 ಕೋಟಿ ಅನುದಾನವನ್ನು ಬಿಡುಗಡೆ ಮಾಡುವ ಭರವಸೆ ನೀಡಿದರು.
ರಾಜೀವ ಗಾಂಧಿ ವಸತಿ ನಿಗಮದ ನಿರ್ದೇಶಕರಾದ ಮಹಾದೇವ ಪ್ರಸಾದ ಅವರು ಮಾತನಾಡಿ ಜಿ+2 ಮನೆಗಳನ್ನು ಪ್ರಧಾನ ಮಂತ್ರಿ ಕನಸಾದ ಎಲ್ಲರಿಗೂ ಒಂದೇ ಸೂರಿನಡಿ ಮನೆ ಯೋಜನೆಯಡಿ 22 .24 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ನಿಪ್ಪಾಣಿ ನಗರದಲ್ಲಿ 2000 ನೇ ಇಸ್ವಿಯಿಂದ ನನೆಗುದಿಗೆ ಬಿದ್ದಿದ್ದ ಈ ಯೋಜನೆಯ ಕಾಮಗಾರಿಯನ್ನು ಕಾರ್ಯರೂಪಕ್ಕೆ ತಂದಂತಹ ವಸತಿ ಸಚಿವರಿಗೆ ನಿಪ್ಪಾಣಿ ಮತ ಕ್ಷೇತ್ರದ ಜನರ ಪರವಾಗಿ ಅವರಿಗೆ ಧನ್ಯವಾದ ತಿಳಿಸಿದರು.
ನಿಪ್ಪಾಣಿ ನಗರದಲ್ಲಿ ವಸತಿ ಯೋಜನೆಯಡಿಯಲ್ಲಿ ನಿರ್ಮಿಸಲಾಗುತ್ತಿರುವ ಮನೆಗಳ ಜೊತೆಗೆ ಅದೇ ಪ್ರದೇಶದಲ್ಲಿ ಮಹಿಳೆಯರಿಗಾಗಿ ಉದ್ಯೋಗಗಳನ್ನು ನೀಡುವ ವ್ಯವಸ್ಥೆಯನ್ನು ಸಹ ಮಾಡಲಾಗುವುದೆಂದು ತಿಳಿಸಿದರು.
ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆ, ಜಿಲ್ಲಾಧಿಕಾರಿ ಎಂ.ಜಿ.ಹೀರೆಮಠ, ಚಿಕ್ಕೋಡಿ ಉಪವಿಭಾಗಧಿಕಾರಿ ಯುಕೇಶ ಕುಮಾರ, ನಿಪ್ಪಾಣಿ ನಗರಸಭೆ ಪಾಲಿಕೆಯ ಆಯುಕ್ತ ಮಹಾವೀರ ಬೋರನ್ನವರ,ನಗರಸಭೆ ಅಧ್ಯಕ್ಷರಾದ ಜಯವಂತ ಬಾಟಲೆ,ಉಪಾಧ್ಯಕ್ಷೆ ನೀತಾ ಬಾಗಡೆ, ನಗರಸಭೆ ಅಧಿಕಾರಿ ಹಾಗೂ ಗಣ್ಯರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ