Latest

ಹೊಸತನದ ಮಡಿಲಲ್ಲಿ ಭಾಷೆ ಸದೃಢವಾಗಬೇಕು, ನಮ್ಮತನ ಭಾಷೆಯ ಮೂಲಕ ಬೆಳಕಿಗೆ ಬರಬೇಕು

ಲೇಖನ: ರವಿ ಕರಣಂ

ಸದಭಿರುಚಿಯ ಸಾಹಿತ್ಯದ ಅವಶ್ಯಕತೆ ಸದ್ಯಕ್ಕೆ ಬೇಕಾಗಿದೆ. ಬರಹಗಾರರ ಸಂಖ್ಯೆ ಕ್ಷೀಣಿಸುತ್ತಿದ್ದು, ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಇದೇನೂ ಒಳ್ಳೆಯ ಲಕ್ಷಣವಲ್ಲ. ಹೊಸ ಹೊಸ ವಿಚಾರಗಳು, ಚಿಂತನೆಗಳು, ವಿಮರ್ಶೆಗಳು, ಕಲ್ಪನೆಗಳಾದಿಯಾಗಿ ಭಾಷಾ ಸಮೃದ್ಧಿಗೆ ಬುನಾದಿ ಹಾಕಬಲ್ಲವು. ಇಂದಿನ ನವ ಪೀಳಿಗೆಗೆ ಬರೆಯುವ ತುಡಿತ ಕಡಿಮೆಯಾಗುತ್ತಿದ್ದು, ಯಾಂತ್ರಿಕೃತ ಜೀವನದ ಶೈಲಿಯಲ್ಲಿ ಬದುಕು ನೀರಸದ ಸುಳಿಗೆ ಸಿಕ್ಕು, ಪರಿಪೂರ್ಣ ಭಾಷೆಯ ಸಾಹಿತ್ಯ ನೆಪಥ್ಯಕ್ಕೆ ಸರಿಯುತ್ತಿದೆ. ಇದು ಹೀಗೆಯೇ ಮುಂದುವರೆದಲ್ಲಿ ಭಾಷೆಯ ಸಮೃದ್ಧ ಬಳಕೆ, ಬೆಳವಣಿಗೆ, ವಿಸ್ತರಣೆ, ಅದರ ಗ್ರಂಥಸ್ಥ ರೂಪ ಕ್ರಮೇಣ ಕಣ್ಮರೆಯಾಗಿ, ಕಡೆಗೆ ಇಂದು ಸಂಸ್ಕೃತ ಭಾಷೆಗೆ ಬಂದೊದಗಿದ ಸ್ಥಿತಿ ಕನ್ನಡಕ್ಕೂ ಬರಬಹುದು.

ಹಾಗೇನೂ ಆಗಲಿಕ್ಕಿಲ್ಲ. ಇದು ಕೇವಲ ಭ್ರಮೆ ಎಂದು ನಿಮಗನಿಸಿಬಿಡಬಹುದು. ಅದು ಸಹಜವೇ. ಆದರೆ ನಮ್ಮ ತನದ ಮೇಲೆ ಆದಂತಹ ಆಕ್ರಮಣಗಳು, ಅರಿವಿಗೆ ಬಾರದಂಥವುಗಳೆಂಬುದು ಗೊತ್ತಿರಬೇಕು. ಬೇರೆ ಯಾವ ರಾಜ್ಯಗಳಲ್ಲೂ ಕಂಡು ಬಾರದಿರುವುದನ್ನು ಸೂಕ್ಷ್ಮವಾಗಿ ಗಮನಿಸಿ. ಬೇರೆ ಬೇರೆ ರಾಜ್ಯಗಳಲ್ಲಿ ಅನ್ಯ ಪ್ರದೇಶಗಳ ಜನರನ್ನು ಸುಲಭವಾಗಿ ತಮ್ಮವರೆಂದು ಸ್ವೀಕರಿಸುವುದು ತುಂಬ ವಿರಳ. ಅಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗುವುದೂ ಕಷ್ಟ. ಆದರೆ ಕನ್ನಡ ನೆಲದಲ್ಲಿ ಸಲೀಸಾಗಿ ಬೆರೆತು ಹೋಗುವ, ಬೆರೆಸಿಕೊಳ್ಳುವ ಪ್ರಕ್ರಿಯೆ ಸರಳವಾಗಿದೆ. ಹೀಗಾಗಿ ಈ ನೆಲದ ಮೇಲೆ ವಿವಿಧ ಬಗೆಯ ಭಾಷೆ,ಸಂಸ್ಕೃತಿಗಳು, ಆಚಾರ-ವಿಚಾರಗಳು ರಾರಾಜಿಸಲು ಅವಕಾಶವಾಗಿ ಬಿಟ್ಟಿದೆ. ಅಲ್ಲಿಂದ ಪರಕೀಯತೆಯ ಪಾರಮ್ಯ ಮುಗಿಲು ಮುಟ್ಟುತ್ತಿದೆ.

ಇದು ಭಾರತ. ಪ್ರಜಾಪ್ರಭುತ್ವ ರಾಷ್ಟ್ರ. ಯಾರು ಎಲ್ಲಿ ಬೇಕಾದರೂ ವಾಸಿಸಬಹುದು. ಮುಕ್ತವಾಗಿ ಓಡಾಡಬಹುದು. ಕೆಲಸ ಕಾರ್ಯಗಳನ್ನು ಮಾಡಬಹುದು. ವಿವಿಧತೆಯಲ್ಲಿ ಐಕ್ಯತೆ ಎಂದು ಹೇಳಿಕೊಳ್ಳುವುದಿದೆ. ಅದರ ಹಿಂದೆಯೇ ಹೆಚ್ಚು ಮಾತನಾಡುವ ಭಾಷೆ ಹಿಂದಿ. ಹಾಗಾಗಿ ಹಿಂದಿಯನ್ನು ರಾಷ್ಟ್ರವ್ಯಾಪಿ ವಿಸ್ತರಿಸಲು ಒಳ ಸಂಚು ನಡೆದಿದೆ. “ಒಂದು ದೇಶ- ಒಂದು ಭಾಷೆ”, “ಒಂದು ದೇಶ -ಒಂದು ಶಿಕ್ಷಣ ಪದ್ದತಿ”, “ಒಂದು ದೇಶ -ಒಂದು ಚುನಾವಣೆ”, ಒಂದು ದೇಶ- ಒಂದು ಧರ್ಮ” ಈ ರೀತಿಯ ಮಾನಸಿಕತೆಯನ್ನು ಹುಟ್ಟು ಹಾಕುವ ಕೆಲ ಪಟ್ಟ ಭದ್ರ ಹಿತಾಸಕ್ತಿಯ ಪರಿಣಾಮವಾಗಿ, ಯು ಎಸ್ ಎಸ್ ಆರ್ ಹದಿನಾಲ್ಕು ರಾಷ್ಟ್ರಗಳಾಗಿ ಒಡೆದು ಹೋದಂತೆ, ಭಾರತ ಇಪ್ಪತ್ತೆಂಟು ದೇಶಗಳಾಗಿ ಒಡೆದು ಹೋಗುವುದರಲ್ಲಿ ಸಂದೇಹವೇ ಇಲ್ಲ. ಯಾವತ್ತೂ ಒಂದು ನೆಲದ ಭಾವನೆಗಳ ಜೊತೆಗೆ ಆಟವಾಡಿ ಗೆದ್ದದ್ದು, ಜಾಗತಿಕ ಇತಿಹಾಸದಲ್ಲಿ ಒಂದೂ ಉದಾಹರಣೆಗಳಿಲ್ಲ. ಒಂದೊಂದು ನೆಲದ ಸ್ವಾರಸ್ಯಕತೆಯ ಗುಣಗಳಿಗೆ ತಡೆಯೊಡ್ಡುವ ಕಾರ್ಯಕ್ಕೆ ಯಾರೂ ಕೈ ಹಾಕಬಾರದು. ಇದ್ದುದ್ದನ್ನು ಇದ್ದಂತೆಯೇ ಬಿಡಬೇಕು. ಕೆಡವಲು ಹೋದರೆ ಬೀಳುವುದು ವ್ಯವಸ್ಥೆಯಲ್ಲ. ಕೈಗಳೆಂಬುದು ಸತ್ಯ.

ಹೇಳ ಹೊರಟ ವಿಚಾರವಿಷ್ಟು. ಬರೆವಣಿಗೆಯ ಮೆರವಣಿಗೆಯಲ್ಲಿ ಭಾಷೆಯ ಕೊಡು ತೆಗೆದುಕೊಳ್ಳುವ ಬದಲು, ತೆಗೆದುಕೊಳ್ಳುವುದಷ್ಟೇ ಕನ್ನಡಿಗರಿಗೆ ಅಭ್ಯಾಸವಾಗುತ್ತಿದೆ. ಕೊಡುವ ಗುಣ ಮರೆತು ಹೋಯಿತೇ? ಇಷ್ಟು ಸರಳವಾಗಿ ಅನ್ಯ ನೆಲದ ಭಾಷೆಯನ್ನು ಸೊಗಸಾಗಿ ಚಿತ್ರಿಸಿಕೊಡುವ ನಮ್ಮವರಿಗೆ ಅದೇಕೆ ನೆಲದೊಳಗಣ ಕಣಜ ಕಾಣಲಿಲ್ಲವೆಂಬುದೇ ಚಿಂತೆ !.

ಸಾಹಿತ್ಯದ ಸೊಗಡು ಎಷ್ಟು ಚೆಂದವಿತ್ತು ! ಆಡು ನುಡಿಗಳಿಂದಲೇ ಕಟ್ಟಿದ ವಚನ ಸಾಹಿತ್ಯ, ಭಕ್ತಿಯ ರಸಧಾರೆ ಹರಿಸಿದ ದಾಸ ಸಾಹಿತ್ಯ, ನವೋದಯ,ನವ್ಯ ಸಾಹಿತ್ಯ ಪ್ರಕಾರಗಳು ಕನ್ನಡ ಡಿಂಡಿಮ ಬಾರಿಸಿದ್ದು ಸುಳ್ಳಲ್ಲ. ನಂತರದಲ್ಲಿ ಬೆಳೆದ ಮಾತ್ಸರ್ಯದ ಭಾವ ಬಿತ್ತುವ, ದ್ವೇಷಪೂರಿತ, ಅಸಹಿಷ್ಣುತೆಯ ಪ್ರತೀಕದ, ಲಿಂಗ ತಾರತಮ್ಯದ ಸಾಹಿತ್ಯ ಪ್ರಕಾರಗಳೂ ಕೂಡಾ ಭಾಷೆಯ ಸೇವೆಗೈದಿವೆ ಎಂದೇ ಹೇಳಬೇಕು. ಇಂದು ಕೀಳಭಿರುಚಿಯ ಪದಗಳಿಂದಲೇ ವಿಜೃಂಭಿಸುವ ಸಿನಿಮಾ ಸಾಹಿತ್ಯವನ್ನೇ ನಿಜ ಸಾಹಿತ್ಯವೆಂದು ನಂಬಿ ಬಿಡುವ ನಮ್ಮ ಎಳೆ ಹುಡುಗರಿಗೆ, ಮೂಲ ಸತ್ವ ಶಾಲಿ ಸಾಹಿತ್ಯದ ಪರಿಚಯವಿಲ್ಲ. ಪಠ್ಯ ಪುಸ್ತಕಗಳಲ್ಲಿ ಕಂಡ ಮುಖಗಳಷ್ಟೇ! ಅವು ಗಾಢ ಪರಿಣಾಮ ಬೀರದ ಸಾಧಾರಣ ಸಾಹಿತ್ಯವಷ್ಟೇ. ಜೀವನಪರ್ಯಂತ ನೆನಪಿಡುವ ಸಾಲುಗಳಿರದ ಸಾಹಿತ್ಯ ! ಅವುಗಳಿಂದ ಕಲಿಯುವುದು ಏನೇನೂ ಇಲ್ಲ.

ಆ ದೃಷ್ಟಿಯಿಂದ ಎಲ್ಲೋ ತೆರೆಮರೆಯಲ್ಲಿರುವ ಅದೆಷ್ಟೋ ಬರೆಹಗಾರರಿಗೆ ಒಂದು ವೇದಿಕೆಯನ್ನು ಸಾಹಿತ್ಯ ಪರಿಷತ್ತು, ಪ್ರಾಧಿಕಾರಗಳು, ಸರ್ಕಾರದ ಇಲಾಖೆಗಳು ಕಲ್ಪಿಸಿಕೊಡಬೇಕು. ಕಮ್ಮಟಗಳ ಅವಶ್ಯಕತೆ ಇದೆ. ಚಿಂಥನ-ಮಂಥನಗಳು ನಡೆಯಬೇಕಿದೆ. ಭಾಷೆ ಕಟ್ಟುವ ಕಾರ್ಯಗಳ ಯೋಜನೆಗಳು ರೂಪಗೊಳ್ಳಬೇಕಿದೆ. ಪುಸ್ತಕಗಳ ಪ್ರಕಟಣೆಗಳಿಗೆ ಆದ್ಯತೆ ಕೊಡಬೇಕಿದೆ. ತರುಣ-ತರುಣಿಯರಲ್ಲಿ ಸಾಹಿತ್ಯದೊಲವನ್ನು ಮೂಡಿಸುವ ಕ್ರಿಯಾ ಯೋಜನೆಗಳನ್ನು ಕಾರ್ಯರೂಪಕ್ಕಿಳಿಸುವ ಅವಶ್ಯಕತೆಯಿದೆ. ಎಲ್ಲೋ ಒಂದು ಕಡೆ ಸಫಲತೆ ದೊರೆಯುತ್ತದೆ ಎಂಬುದೊಂದು ನಿರೀಕ್ಷೆ.

ನಮ್ಮವರಿಗೆ ಇಂದು ಪತ್ರ ಲೇಖನದ ಅರಿವಿಲ್ಲ. ಇನ್ನು ಸಾಹಿತ್ಯ ಕೃತಿ ರಚನೆ ಸಾಧ್ಯವೇ? ಎನಿಸಿ ಬಿಡುತ್ತದೆ. ಪತ್ರ ಬರೆಯುವ ಕಲೆ ಇಂದು ಮಾಯವಾಗಿದೆ. ಬದಲಾಗಿ ಇ-ಅಂಚೆಯ ಮೂಲಕ ಮೊಬೈಲ್ ಕೀ ಪ್ಯಾಡ್ ಮೂಲಕ ಬರೆಯಲಾಗುತ್ತದೆ. ಹೀಗಾಗಿ ಅಂದವಾದ ಶುದ್ದ ಬರೆಹ ನಾಪತ್ತೆಯಾಗಿದೆ. ನಮ್ಮ ಕೈಗಳೀಗ ಮೊದಲಿನಂತೆ ವೇಗವಾಗಿ ಬರೆಯಲಾಗುತ್ತಿಲ್ಲ. ಹೋಗಲಿ ಬಿಡಿ. ಕನ್ನಡ ಕೀ ಪ್ಯಾಡ್ ಮೂಲಕವಾದರೂ ಬರೆಯುತ್ತಾರಲ್ಲ ಅದೇ ಪುಣ್ಯ! ಆ ಮೂಲಕವಾದರೂ ಸಾಹಿತ್ಯ ಕೃಷಿ ಸಾಗಬೇಕು. ಡಿಜಿಟಲ್ ಜಗತ್ತಿನಲ್ಲಿ ಭಾಷೆಗಂತೂ ವೇದಿಕೆಯಿದೆಯಲ್ಲ. ಅದೇ ಹೆಮ್ಮೆಯ ಸಂಗತಿ. ಕನ್ನಡದ ಮಾತುಗಳನ್ನು ಆಂಗ್ಲ ವರ್ಣಗಳಿಂದ ಬರೆಯುವುದಿತ್ತು. ಈಗಂತೂ ಅತ್ಯಂತ ಸುಲಭವಾಗಿ ಮಾಡಿದ ವಿಜ್ಞಾನ ಲೋಕಕ್ಕೆ ನಮಿಸಬೇಕು.

ಇಂದಿನ ಪೀಳಿಗೆಗೆ ಬರೆವಣಿಗೆಯ ರುಚಿಯನ್ನು ಹಚ್ಚಬೇಕು. ಅವರಲ್ಲಿನ ಭಾವನೆಗಳು ನದಿಯಾಗಿ ಹರಿಯುವಂತೆ ಮಾಡಬೇಕು. ಸ್ಪಷ್ಟ ರೂಪ ಕೊಡುವ ಮೂಲಕ, ಭಾಷೆಯ ಹರಿವಿಗೆ ಅವಕಾಶ ಮಾಡಿಕೊಡಲೇ ಬೇಕು. ಎಷ್ಟು ಸುಂದರವಾಗಿ, ಅರ್ಥಗರ್ಭಿತವಾಗಿ ಬರೆಯಬಲ್ಲ ಯುವ ಸಮೂಹಕ್ಕೆ ಪ್ರೋತ್ಸಾಹ ನೀಡುವ ಸುಸಂದರ್ಭ ಬಂದಿದೆ. ಹಿಂದಿನಿಂದ ಬಂದ ಕವಿ ಪರಂಪರೆಯನ್ನು ಇನ್ನೂ ಕಾಯ್ದುಕೊಳ್ಳಲು ಆದ್ಯತೆ ಕೊಡಬೇಕು. ಹೊಸ ಸಾಹಿತ್ಯ ಪ್ರಕಾರಗಳು ಮೈದಳೆಯಬೇಕು. ಅದು ಉತ್ಕೃಷ್ಟ ದರ್ಜೆಯದ್ದಾಗಿಯೂ, ಸಮಾಜದ ಶುದ್ದತೆಯ ಕಾಪಾಡುವ ಉದ್ದೇಶ ಹೊಂದಿದ್ದಾಗಿಯೂ ಇರುವಂತೆ ನೋಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಭಾಷೆಯ ಕಾರ್ಯ ಮುಂದುವರೆಯಬೇಕು. ಹೊಸತನದ ಮಡಿಲಲ್ಲಿ ಭಾಷೆಯು ಸದೃಢವಾಗಬೇಕು. ನಮ್ಮತನವು ಭಾಷೆಯ ಮೂಲಕ ಬೆಳಕಿಗೆ ಬರಬೇಕು.

https://pragati.taskdun.com/i-will-serve-the-people-as-long-as-there-is-blessing-of-public-cm-bommai/

https://pragati.taskdun.com/this-young-mans-stomach-had-56-blades/

https://pragati.taskdun.com/an-unknown-vehicle-killed-the-biker/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button