*ಗೃಹಜ್ಯೋತಿ ಫಲಾನುಭವಿಗಳಿಗೆ ಕೊನೆ ಅವಕಾಶ*: *ದಾಖಲೆ ಪರಿಶೀಲನೆ ಮಾಡಿಸದಿದ್ದರೆ ಉಚಿತ ವಿದ್ಯುತ್ಗೆ ಕತ್ತರಿ!*

ಪ್ರಗತಿವಾಹಿನಿ ಸುದ್ದಿ: ಪ್ರತಿ ತಿಂಗಳು ಉಚಿತ ವಿದ್ಯುತ್ ಪಡೆಯುತ್ತಿರುವ ಗೃಹಜ್ಯೋತಿ ಫಲಾನುಭವಿಗಳಿಗೆ ಸರ್ಕಾರದಿಂದ ಮಹತ್ವದ ಸೂಚನೆ ಹೊರಬಿದ್ದಿದೆ. ಬೆಸ್ಕಾಂ ಸಿಬ್ಬಂದಿ ಮೂರು ಬಾರಿ ಮನೆಗೆ ಭೇಟಿ ನೀಡಿದರೂ ದಾಖಲೆ ಪರಿಶೀಲನೆ ಪೂರ್ಣಗೊಳಿಸದವರಿಗೆ ಇದೀಗ ಅಂತಿಮ ಅವಕಾಶ ನೀಡಲಾಗಿದೆ. ಅಕ್ಟೋಬರ್ 30ರೊಳಗೆ ಅಗತ್ಯ ದಾಖಲೆ ಸಲ್ಲಿಸಿ ಮಾಹಿತಿ ಪರಿಶೀಲನೆ ಮಾಡಿಸಿಕೊಳ್ಳದಿದ್ದರೆ ಯೋಜನೆಯ ಸೌಲಭ್ಯದಿಂದ ಹೊರಗುಳಿಯುವ ಆತಂಕ ಎದುರಾಗಿದೆ. ವಿಶೇಷವೆಂದರೆ, ಬೆಸ್ಕಾಂ ವ್ಯಾಪ್ತಿಯ ಸುಮಾರು 69 ಲಕ್ಷ ಫಲಾನುಭವಿಗಳ ಪೈಕಿ 16 ಲಕ್ಷ ಮಂದಿಯ ಮಾಹಿತಿ ಇನ್ನೂ ಬಾಕಿ ಉಳಿದಿದೆ.
ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮಾಹಿತಿಯನ್ನು ಮರುಪರಿಶೀಲಿಸಲು ಬೆಸ್ಕಾಂ ಮನೆಮನೆಗೆ ತೆರಳಿ ಪರಿಶೀಲನೆ ನಡೆಸುತ್ತಿದೆ. ಮೀಟರ್ ರೀಡರ್ಗಳು ಮೂರು ಬಾರಿ ಮನೆಗೆ ಭೇಟಿ ನೀಡಿದರೂ ಹಲವು ಫಲಾನುಭವಿಗಳು ಲಭ್ಯವಾಗಿಲ್ಲ. ಹೀಗಾಗಿ, ಪರಿಶೀಲನೆ ಪೂರ್ಣಗೊಳಿಸದವರು ತಮ್ಮ ವ್ಯಾಪ್ತಿಯ ಬೆಸ್ಕಾಂ ಉಪವಿಭಾಗ ಕಚೇರಿಗೆ ತೆರಳಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಸಂಬಂಧಿತ ಅರ್ಜಿ ಭರ್ತಿ ಮಾಡಿ ತಮ್ಮ ಮಾಹಿತಿಯನ್ನು ದೃಢೀಕರಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಈ ಪ್ರಕ್ರಿಯೆಗೆ ಅಕ್ಟೋಬರ್ 30 ಕೊನೆಯ ದಿನಾಂಕವಾಗಿದೆ. ಗಡುವಿನೊಳಗೆ ಪರಿಶೀಲನೆ ಪೂರ್ಣಗೊಳಿಸದ ಫಲಾನುಭವಿಗಳ ಹೆಸರುಗಳನ್ನು ಅಂತಿಮ ವರದಿಯಲ್ಲಿ ಸೇರಿಸುವ ಸಾಧ್ಯತೆಯಿದೆ. ಬಳಿಕ ಸರ್ಕಾರ ಕೈಗೊಳ್ಳುವ ನಿರ್ಧಾರದ ಆಧಾರದಲ್ಲಿ ಸೌಲಭ್ಯ ಮುಂದುವರಿಯುವ ಬಗ್ಗೆ ಸ್ಪಷ್ಟತೆ ಸಿಗಲಿದೆ. ಹೀಗಾಗಿ, ಉಚಿತ ವಿದ್ಯುತ್ ಸೌಲಭ್ಯ ಕಳೆದುಕೊಳ್ಳುವ ಆತಂಕ ತಪ್ಪಿಸಲು ಬಾಕಿ ಇರುವವರು ಕೂಡಲೇ ದಾಖಲೆ ಪರಿಶೀಲನೆ ಮಾಡಿಸಿಕೊಳ್ಳಬೇಕಿದೆ.
ಆದಾಯ ತೆರಿಗೆ ಪಾವತಿಸುವವರು ಮತ್ತು ಹೊರರಾಜ್ಯದ ಮತದಾರರು ಸೇರಿದಂತೆ ಕೆಲವು ಫಲಾನುಭವಿಗಳು ಮಾಹಿತಿ ನೀಡಲು ಹಿಂದೇಟು ಹಾಕುತ್ತಿರುವುದು ಪರಿಶೀಲನೆ ಬಾಕಿ ಉಳಿಯಲು ಕಾರಣವಾಗಿದೆ ಎಂದು ತಿಳಿದುಬಂದಿದೆ. ಅಪಾರ್ಟ್ಮೆಂಟ್ಗಳಲ್ಲಿ ವಾಸಿಸುವ ಕೆಲವು ಫಲಾನುಭವಿಗಳಿಂದಲೂ ಅಗತ್ಯ ಸಹಕಾರ ಸಿಕ್ಕಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಈಗಾಗಲೇ ಸುಮಾರು ಶೇ.98ರಷ್ಟು ಮರುಪರಿಶೀಲನೆ ಪೂರ್ಣಗೊಂಡಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್ ತಿಳಿಸಿದ್ದಾರೆ. ಅಕ್ಟೋಬರ್ ಅಂತ್ಯದ ಬಳಿಕ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಮುಂದಿನ ಕ್ರಮದ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.
ಹೀಗಾಗಿ, ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿರುವವರು ತಮ್ಮ ದಾಖಲೆ ಪರಿಶೀಲನೆ ಪೂರ್ಣಗೊಂಡಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಬೆಸ್ಕಾಂ ಸಿಬ್ಬಂದಿ ಮನೆಗೆ ಬಂದಾಗ ಲಭ್ಯವಿಲ್ಲದಿದ್ದರೆ, ಅಕ್ಟೋಬರ್ 30ರೊಳಗೆ ಸಂಬಂಧಿತ ಉಪವಿಭಾಗ ಕಚೇರಿಗೆ ತೆರಳಿ ಮಾಹಿತಿ ಪರಿಶೀಲನೆ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




