Kannada NewsKarnataka NewsLatest

ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಿಂದ ಕಾನೂನು ವಿದ್ಯಾರ್ಥಿಗಳು ಪ್ರೇರಣೆ ಪಡೆಯಬೇಕು

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಶನಿವಾರ ಜಿಮಖಾನಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ನಡೆಯಿತು.

ಉತ್ತರ ವಲಯ ಪೋಲಿಸ್ ಆರಕ್ಷಕ ಮಹಾನಿರೀಕ್ಷಕ ರಾಘವೇಂದ್ರ ಸುಹಾಸ್ ಅವರು ಉದ್ಘಾಟನೆ ನೆರವೇರಿಸಿದರು.

ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಯುವ ವಕೀಲರ ಮೇಲೆ ದೇಶವನ್ನು ಕಟ್ಟುವ ಮಹತ್ತರವಾದ ಜವಾಬ್ದಾರಿ ಇದೆ. ಅದಕ್ಕೆ ಬೇಕಾದ ವ್ಯಕ್ತಿತ್ವ ರೂಪಿಸಿಕೊಳ್ಳುವಲ್ಲಿ ವಿದ್ಯಾರ್ಥಿ ಜೀವನದಿಂದಲೇ ರೂಪಿಸಿಕೊಳ್ಳಲು ಪ್ರಾರಂಭಿಸಬೇಕು ಎಂದರು.

“ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಿಂದ ಕಾನೂನು ವಿದ್ಯಾರ್ಥಿಗಳು ಪ್ರೇರಣೆ ಪಡೆಯಬೇಕು. ಆ ಇಡೀ ಸಂಗ್ರಾಮವು ಕೆಲವು ಪ್ರಾಮಾಣಿಕ ಹಾಗೂ ಕಟಿಬದ್ಧ ವಕೀಲರಿಂದ ಆರಂಭವಾಯಿತು ಎನ್ನುವುದನ್ನು ಮರೆಯಬಾರದು,’’ ಎಂದು ಅವರು ಹೇಳಿದರು.

ಮಹಾತ್ಮಾ ಗಾಂಧಿ ಹಾಗೂ ಇನ್ನುಳಿದ ಖ್ಯಾತ ವಕೀಲರು ಆರಂಭಿಸಿದ ಈ ಚಳುವಳಿ ಇಡೀ ದೇಶಕ್ಕೆ ಹಬ್ಬಿತು. ಮಹಾತ್ಮಾ ಗಾಂಧಿಯವರು ದಕ್ಷಿಣ ಆಫ್ರಿಕಾದ ರೇಲ್ವೆ ನಿಲ್ದಾಣದಲ್ಲಿ ಅನುಭವಿಸಿದ ಅವಮಾನ ಅವರು ಭಾರತದ ಸ್ವಾತಂತ್ರ್ಯ ಸಂಗ್ರಾಮವನ್ನು ಮುನ್ನಡೆಸಿದ ಚೇತನಕ್ಕೆ ಸ್ಪೂರ್ತಿಯಾಯಿತು.

ಸ್ವಾತಂತ್ರ್ಯದ ನಂತರ ಹೊಸ ಪ್ರಜಾಪ್ರಭುತ್ವವಾದ ಭಾರತವನ್ನು ವಿವಿಧ ಮಗ್ಗುಲುಗಳ ಅಭಿವೃದ್ಧಿ ಪಡಿಸಲು ಡಾ. ಬಿ. ಆರ್ ಅಂಬೇಡ್ಕರ್ ರಂತಹ ದೃಷ್ಟಾರರು ಕಾರಣರಾದರು. ಇವರೆಲ್ಲರೂ ಖ್ಯಾತ ವಕೀಲರು ಎಂಬುದನ್ನು ನಾವು ಮರೆಯಬಾರದು.

ನಂತರದ ದಶಕಗಳಲ್ಲಿ, ಭಾರತೀಯ ಕಾನೂನು ವಿಕಾಸ ಹೊಂದಿದೆ ಹಾಗೂ ಪ್ರಬುದ್ಧವಾಗಿದೆ. ನಮ್ಮ ಆಧುನಿಕ ಇತಿಹಾಸದಲ್ಲಿ ನಾವು ಎದುರಿಸಿದ ಅನೇಕ ಸವಾಲುಗಳಿಂದ ನಾವು ಸಲೀಸಾಗಿ ಹೊರ ಬರಲು ನಮಗೆ ಸಾಧ್ಯವಾಗಿದೆ.

ಅನೇಕ ಜನಪರ ವಕೀಲರಿಂದಾಗಿ ನಾವು ತುರ್ತು ಪರಿಸ್ಥಿತಿ, ಮಾನವ ಹಕ್ಕು ಗಳ ಹನನ, ಪರಿಸರ ನಾಶ, ಅಂತರರಾಷ್ಟ್ರೀಯ ಕಾನೂನು, ಹಕ್ಕು ಸ್ವಾಮ್ಯ ಕಾಯಿದೆ ಇತ್ಯಾದಿ ವಿಷಯಗಳನ್ನು ನಿಭಾಯಿಸುವಂತಾಗಿದೆ. ಇವೆಲ್ಲವುಗಳಿಂದ ವಿದ್ಯಾರ್ಥಿಗಳು ಪ್ರೇರಣೆ ಪಡೆಯಬೇಕು ಎಂದು ಅವರು ಹೇಳಿದರು.

ಸುಹಾಸ ಅವರು ವಿದ್ಯಾರ್ಥಿಗಳಿಗೆ ಉನ್ನತ ಗುರಿ ಇಟ್ಟುಕೊಂಡು ಅಭ್ಯಾಸ ಮಾಡುವಂತೆ ಪ್ರೇರೇಪಿಸಿದರು. ಸರ್ವೋಚ್ಚ ನ್ಯಾಯಾಲದಲ್ಲಿ ನ್ಯಾಯಮೂರ್ತಿಗಳೂ ಹಾಗೂ ವಕೀಲರಾಗುವಂತೆ, ದೇಶವನ್ನು ಮುನ್ನಡೆಸುವ ನಾಯಕರಾಗುವಂತೆಯೂ ನೀವು ಶ್ರಮ ಪಡಬೇಕು. ಸಣ್ಣ ಸಣ್ಣ ಗುರಿಗಳಿಗೆ ಸಂತ್ರಪ್ತಿ ಪಡಬಾರದು ಎಂದು ಅವರು ಹೇಳಿದರು.

ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ಎಸ್. ವಿ ಗಣಾಚಾರಿ  ಅಧ್ಯಕ್ಷೀಯ ಭಾಷಣ ಮಾಡಿದರು. ವಿದ್ಯಾರ್ಥಿಗಳು ಕೇವಲ ಓದು ಬರಹಕ್ಕೆ ಸೀಮಿತವಾಗದೇ ತಮ್ಮ ಸಂಪೂರ್ಣ ವ್ಯಕ್ತಿತ್ವ ವಿಕಾಸಕ್ಕೆ ಒತ್ತು ಕೊಡಬೇಕೆಂದು ಅವರು ಹೇಳಿದರು. ಜಿಮಖಾನಾ ಚಟುವಟಿಕೆಗಳಿಂದ ಅವರ ದೇಹ ಹಾಗೂ ಮೆದುಳಿಗೆ ಕಸರತ್ತು ದೊರಕುವುದಾಗಿಯೂ, ಇದು ಇಂದಿನ ಒತ್ತಡದ ದಿನಗಳಲ್ಲಿ ಆಹ್ಲಾದಕಾರಕವಾಗಿರುವುದಾಗಿಯೂ ಅವರು ತಿಳಿಸಿದರು.

ಪ್ರಾಂಶುಪಾಲ ಡಾ. ಎ. ಎಚ್ ಹವಾಲ್ದಾರ್ ಕಾಲೇಜಿನ ಇತಿಹಾಸವನ್ನು ಪರಿಚಯಿಸಿದರು, ಜಿಮಖಾನಾ ಸಮಿತಿ ಅಧ್ಯಕ್ಷ ಪ್ರಹ್ಲಾದ ಯಜುರ್ವೇದಿ ಸ್ವಾಗತಿಸಿದರು, ಮಹಿಳಾ ಪ್ರತಿನಿಧಿ ಅನುಜಾ ಬೆಳಗಾವಕರ್ ಆಭಾರ ಪ್ರಕಟಿಸಿದರು. ಪೂಜಾ ಬಡಕುಂದರಿ ಕಾರ್ಯಕ್ರಮ ನಿರೂಪಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button