*2.94 ಲಕ್ಷ ಹುದ್ದೆಗಳು ಖಾಲಿ: ನಿರುದ್ಯೋಗ ಕುದಿಯುವ ಜ್ವಾಲಾಮುಖಿಯಿದ್ದಂತೆ: ತಕ್ಷಣ ನೇಮಕಾತಿ ಆರಂಭಿಸದಿದ್ದರೆ ಸರ್ಕಾರ ಬೆಲೆ ತೆರಬೇಕಾಗುತ್ತದೆ: HDK ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ: ಧಾರವಾಡದಲ್ಲಿ ಅಸಂಖ್ಯಾತ ಉದ್ಯೋಗಾಕಾಂಕ್ಷಿಗಳು ಬೀದಿಗೆ ಇಳಿದಿರುವುದನ್ನು ರಾಜ್ಯ ಸರಕಾರ ಲಘುವಾಗಿ ಪರಿಗಣಿಸಬಾರದು. ಸರಕಾರಿ ಹುದ್ದೆಗಳನ್ನು ಕಾಲ ಕಾಲಕ್ಕೆ ತುಂಬದೇ ನಿರ್ಲಕ್ಷಿಸಿದ ಪರಿಣಾಮವೇ ಯುವಜನರು ಪ್ರತಿಭಟನೆ ದಾರಿ ತುಳಿಯಲು ಕಾರಣ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗುಡುಗಿದ್ದಾರೆ.
ಯುವಜನರಿಗೆ ನನ್ನ ಮನವಿ ಇಷ್ಟೇ; ನಿಮ್ಮ ಪ್ರತಿಭಟನೆ ಶಾಂತಿಯುತವಾಗಿರಲಿ, ನಿಮ್ಮೊಂದಿಗೆ ನಾನಿದ್ದೇನೆ ಎಂದು ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ರಾಜ್ಯದಲ್ಲಿ 2.94 ಲಕ್ಷ ಸರಕಾರಿ ಹುದ್ದೆಗಳು ಖಾಲಿ ಬಿದ್ದಿವೆ. ಸಂಪುಟ ದರ್ಜೆ ಹುದ್ದೆಗಳು ಮಾತ್ರ ಸೂಪರ್ʼಫಾಸ್ಟ್ ಆಗಿ ಭರ್ತಿ ಆಗುತ್ತಿವೆ. ಕಾಂಗ್ರೆಸ್ ಸರಕಾರದ ಆದ್ಯತೆ ಯಾವ ರೀತಿಯಲ್ಲಿದೆ ಎಂಬುದು ಅರ್ಥವಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಆರ್.ವಿ. ದೇಶಪಾಂಡೆ ಅವರ ಅಧ್ಯಕ್ಷತೆಯ ಕರ್ನಾಟಕ ಆಡಳಿತ ಸುಧಾರಣೆ ಆಯೋಗದ ವರದಿಯಂತೆ ರಾಜ್ಯದಲ್ಲಿ 7 ಲಕ್ಷ ನಿರುದ್ಯೋಗಿಗಳಿದ್ದಾರೆ. ಇವರೆಲ್ಲರೂ ಸರಕಾರಿ ಹುದ್ದೆಗಳ ನಿರೀಕ್ಷೆಯಲ್ಲಿದ್ದು, ಖಾಲಿ ಹುದ್ದೆಗಳನ್ನು ಸರಕಾರ ಹಂತ ಹಂತವಾಗಿ ಭರ್ತಿ ಮಾಡಬೇಕಿತ್ತು. ಕುರ್ಚಿ ತಿಕ್ಕಾಟದಲ್ಲಿ ಅಮೂಲ್ಯವಾದ 3 ವರ್ಷಗಳನ್ನು ಪೋಲು ಮಾಡಿದೆ. ಯುವಜನರತ್ತ ಗಮನ ಹರಿಸಲು ಈ ಸರಕಾರಕ್ಕೆ ಟೈಮಿಲ್ಲ!
ನಿರುದ್ಯೋಗ ಎನ್ನುವುದು ಸರಳ ಸಮಸ್ಯೆ ಅಲ್ಲ. ಅದು ಸದಾ ಕುದಿಯುವ ಜ್ವಾಲಾಮುಖಿ ಎಂಬುದನ್ನು ಸರಕಾರ ಮರೆಯಬಾರದು. ಈ ಹೊತ್ತಿಗೇ ಆಡಳಿಗಾರರು ಎಚ್ಚೆತ್ತು ಬಜೆಟ್‌ನಲ್ಲಿ ಪ್ರತ್ಯೇಕ ಹಣ ಇರಿಸಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಬೇಕಿತ್ತು. ಅತಿ ಹೆಚ್ಚು ಹುದ್ದೆಗಳು ಶಿಕ್ಷಣ, ಆರೋಗ್ಯ, ಪೊಲೀಸ್ ಇಲಾಖೆಗಳಲ್ಲಿ ಖಾಲಿ ಇವೆ. ಬೆಂಗಳೂರು ನಗರದ 18 ಆಯಕಟ್ಟಿನ ಪೊಲೀಸ್ ಠಾಣೆಗಳಲ್ಲಿ ಇನ್ʼಸ್ಪೆಕ್ಟರ್ʼಗಳೇ ಇಲ್ಲ! ವರ್ಗಾವಣೆ ದಂಧೆಯಲ್ಲಿ ಸರಕಾರ ಮುಳುಗಿದ್ದರ ಪರಿಣಾಮವಿದು. ಇದೆಲ್ಲವೂ ಆಡಳಿತದ ಮೇಲೆ ನೇರವಾಗಿ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಕೂಡಲೇ ಖಾಲಿ ಹುದ್ದೆಗಳ ಭರ್ತಿ ಮಾಡುವ ನಿಟ್ಟಿನಲ್ಲಿ ಸರಕಾರ ತುರ್ತು ಕ್ರಮ ವಹಿಸಬೇಕು. ವಿಧಾನಸೌಧದ 3ನೇ ಮಹಿಡಿಯಿಂದ ಕೆಳಗಿಳಿದು ಬಂದು ಯುವಜನರ ದನಿ ಆಲಿಸಬೇಕು. ಇಲ್ಲವಾದರೆ, ಇವರ ಆಕ್ರೋಶಕ್ಕೆ ಕಾಂಗ್ರೆಸ್ ಸರಕಾರ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.



