ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 1.25 ಕೋಟಿ ರೂ. ವೆಚ್ಚದಲ್ಲಿ ನೂತನ ಉದ್ಯಾನವನಗಳ (ಗಾರ್ಡನ್ಸ್) ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಭಾನುವಾರ ಚಾಲನೆಯನ್ನು ನೀಡಿದರು.
ಕ್ಷೇತ್ರದ ಜನತೆ ಹಲವಾರು ವರ್ಷಗಳಿಂದ ಉದ್ಯಾನಗಳ ಅಭಿವೃದ್ಧಿಯ ಬೇಡಿಕೆ ಇಟ್ಟಿದ್ದರು. ಅವರ ಹಲವಾರು ವರ್ಷಗಳ ಕನಸುಗಳು ಹಂತ ಹಂತವಾಗಿ ಈಡೇರುತ್ತಿದ್ದು, ವಿವಿಧ ಯೋಜನೆಗಳ ಅಡಿಯಲ್ಲಿ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿಯತ್ತ ಕೊಂಡೊಯ್ಯಲಾಗುತ್ತಿದೆ.
ಇಂದು ಸಮರ್ಥ ಕಾಲೋನಿ, ಸಾಯಿನಂದನ್ ರೆಸಿಡೆನ್ಸಿ, ಡ್ರೈವರ್ಸ್ ಕಾಲೋನಿ, ಲಿಂಗರಾಜ ಕಾಲೋನಿ ಪ್ರದೇಶಗಳಲ್ಲಿ ನೂತನವಾಗಿ ಉದ್ಯಾನವನ (ಗಾರ್ಡನ್) ಹಾಗೂ ಕಾಂಪೌಂಡ್ ವಾಲ್ ಗಳ ನಿರ್ಮಾಣ ಮತ್ತು ಸಹ್ಯಾದ್ರಿ ನಗರ ಉದ್ಯಾನವನದಲ್ಲಿ ಸುಮಾರು ಇಪ್ಪತೈದು ಲಕ್ಷ ರೂ. ವೆಚ್ಚದಲ್ಲಿ ಹೊಸದಾಗಿ ಅಂಬೇಡ್ಕರ್ ಭವನ ನಿರ್ಮಿಸುವ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ನಿರಂತರ ಪ್ರಯತ್ನ ಮತ್ತು ಅಭಿವೃದ್ಧಿ ಯೋಜನೆಗಳ ಕುರಿತು ಕ್ಷೇತ್ರದ ಜನರು ತೀವ್ರ ಹರ್ಷ ವ್ಯಕ್ತಪಡಿಸಿ, ಇಂತಹ ಶಾಸಕರಿದ್ದರೆ ಇಡೀ ರಾಜ್ಯ ನಂದನವನವಾಗುವುದರಲ್ಲಿ ಆಶ್ಚರ್ಯವಿಲ್ಲ ಎಂದರು.
ಕಾಮಗಾರಿಗಳ ಚಾಲನೆಯ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ