ಅಧಿವೇಶನಕ್ಕೆ ಅಡ್ಡಿಯಾಗೋ ಕೊರೋನಾ ಕಾರ್ಯಕಾರಿಣಿಗಿಲ್ವ? -ಲಕ್ಷ್ಮಿ ಹೆಬ್ಬಾಳಕರ್ ಪ್ರಶ್ನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಳದ ಅಧಿವೇಶನ ನಡೆಸುವುದಕ್ಕೆ ಕೊರೋನಾ ಅಡ್ಡಿಯಾಗಿದೆ ಎಂದು ಹೇಳುವ ಬಿಜೆಪಿ ಸರಕಾರಕ್ಕೆ ಬೆಳಗಾವಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಸುವುದಕ್ಕೆ ಕೊರೋನಾ ಅಡ್ಡಿಯಾಗುವುದಿಲ್ಲವೇ?
ಕೆಪಿಸಿಸಿ ರಾಜ್ಯ ವಕ್ತಾರರೂ ಆಗಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಪ್ರಶ್ನೆ ಇದು. ಬೆಳಗಾವಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಅವರು ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಬೆಳಗಾವಿಯ ಸುವರ್ಣವಿಧಾನಸೌಧದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಪಹಾಸ್ಯದ ಸಂದೇಶ ಬರುತ್ತಿದೆ. ಅಂತಹ ಸ್ಥಿತಿಗೆ ಹೋಗಲು ಅವಕಾಶ ನೀಡಬಾರದು. ಕಳೆದ ವರ್ಷವೂ ಇಲ್ಲಿ ಅಧಿವೇಶನ ನಡೆಸಿಲ್ಲ, ಈ ಬಾರಿಯೂ ನಡೆಸುತ್ತಿಲ್ಲ. ಇದು ಸರಿಯಾದ ಕ್ರಮವಲ್ಲಿ ಎಂದು ಅವರು ಹೇಳಿದರು.
2 ಬಾರಿ ರಾಜ್ಯದಲ್ಲಿ ಪ್ರವಾಹ ಬಂದು ಅಪಾರ ನಷ್ಟವಾದರೂ ಸರಕಾರ ಪರಿಹಾರ ಒದಗಿಸಿಲ್ಲ. ಕೇಂದ್ರ ಸರಕಾರವೂ ರಾಜ್ಯದ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಕೊಡಬೇಕಾದ ಜಿಎಸ್ಟಿ ಹಣವನ್ನು ಕೂಡ ನೀಡುತ್ತಿಲ್ಲ ಎಂದು ಆರೋಪಿಸಿದರು.
ಪ್ರವಾಹ ಪರಿಹಾರಕ್ಕೆ ಕೊರೋನಾ ಕಾರಣ ನೀಡಿ ಹಣದ ಕೊರತೆ ಎಂದು ಹೇಳುವ ಸರಕಾರ ಬೇರೆಯದಕ್ಕೆಲ್ಲ ಅನಗತ್ಯ ಖರ್ಚು ಮಾಡುತ್ತಿದೆ. ಸರಕಾರದ ದೃಷ್ಟಿ ಕೇವಲ ಚುನಾವಣೆಯ ಕಡೆಗೆ ಮಾತ್ರ ಇದೆ. ಜನರ ಹಿತವನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಅವರು ಹೇಳಿದರು.
ಪ್ರವಾಹದಿಂದಾಗಿ ನೂರಾರು ಕೆರೆ, ರಸ್ತೆ, ಸೇತುವೆ ಎಲ್ಲ ಹಾಳಾಗಿದೆ. ಉತ್ತರ ಕರ್ನಾಟಕದಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಆದರೆ ರಾಜ್ಯ ಸರಕಾರ ಈ ಬಗ್ಗೆ ಗಮನವನ್ನೇ ಹರಿಸುತ್ತಿಲ್ಲ. ನನ್ನ ಕ್ಷೇತ್ರದಲ್ಲೂ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ತಡೆಯಾಗಿದೆ. ಆದರೆ ನಾನು ಹೋರಾಟದಿಂದಲೇ ಬಂದವಳು. ಹೋರಾಟ ಮಾಡಿ ಹಣ ತರುತ್ತೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರವಾಗಿ ತಿಳಿಸಿದರು.
ಕೊರೋನಾದಿಂದ ಸಂಕಷ್ಟಕ್ಕೀಡಾದವರಿಗೆ ನೆರವು ನೀಡುವುದಾಗಿ ಘೋಷಣೆ ಮಾಡಿರುವ ಸರಕಾರ ಯಾರಿಗೂ ನೆರವಾಗಿಲ್ಲ. ಎಲ್ಲವೂ ಘೋಷಣೆಯಷ್ಟೆ ಆಗಿದೆ. ಈ ಎಲ್ಲ ಸಮಸ್ಯೆಗಳನ್ನು ಚರ್ಚಿಸಲು ಬೆಳಗಾವಿಯಲ್ಲಿ ಅಧಿವೇಶನ ನಡೆಸಬೇಕಿತ್ತು. ಆದರೆ ಕೇವಲ ಸರಕಾರ ಸಂಪುಟ ವಿಸ್ತರಣೆಯಲ್ಲೇ ವಿವಾದದಲ್ಲೇ ಕಾಲಕಳೆಯುತ್ತಿದೆ ಎಂದು ಹೆಬ್ಬಾಳಕರ್ ತಿಳಿಸಿದರು.
ಕಾಂಗ್ರೆಸ್ ಎಂದೂ ಜನರ ಹಿತ ಮರೆತಿಲ್ಲ. ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಹೋರಾಟ ಮಾಡುತ್ತಲೇ ಬಂದಿದೆ. ನಮ್ಮದು ಸಾಮೂಹಿಕ ಹೋರಾಟ. ಸರಕಾರ ಇರಲಿ, ಬಿಡಲಿ, ನಾವು ಜನಪರ ಕಾರ್ಯವನ್ನು ಮರೆಯುವುದಿಲ್ಲ ಎಂದೂ ಅವರು ತಿಳಿಸಿದರು.
ಸಾಂಬ್ರಾ ಜಿಲ್ಲಾ ಪಂಚಾಯಿತಿ ಸದಸ್ಯ ಕೃಷ್ಣಾ ಆನಗೋಳಕರ್ ಬಿಜೆಪಿ ಸೇರಿರುವ ಕುರಿತು ಪ್ರಶ್ನಿಸಿದಾಗ, ಅವರು ಎಂದಿಗೂ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿಲ್ಲ. ಕಳೆದ ಚುನಾವಣೆಯಲ್ಲೂ ನನ್ನ ವಿರುದ್ಧವೇ ಕೆಲಸ ಮಾಡಿದ್ದರು ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ