Kannada NewsLatest

ತಂದೆ-ತಾಯಿಗೆ ಚೂರಿ ಹಾಕಿದವರು ನಿಮ್ಮನ್ನು ಬಿಡುತ್ತಾರಾ?

ತಂದೆ-ತಾಯಿಗೆ ಚೂರಿ ಹಾಕಿದವರು ನಿಮ್ಮನ್ನು ಬಿಡುತ್ತಾರಾ?

ಭಾವಸ್ಪರ್ಶಿ ಭಾಷಣ ಮಾಡಿದ ಬೆಳಗಾವಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –

ನಮ್ಮ ಪಕ್ಷ ಎಂದರೆ ತಂದೆ-ತಾಯಿ ಇದ್ದಂತೆ. ಅಂತಹ ತಾಯಿಗೇ ದ್ರೋಹ ಬಗೆದು ಹೋದವರು  ನಿಮ್ಮ ಜೊತೆ ಇರುತ್ತಾರೆ ಎಂದು ನಂಬಿದ್ದೀರಾ? ನಿಮಗೆ ನ್ಯಾಯ ಒದಗಿಸುತ್ತಾರಾ?

-ಇದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ವಿಧಾನಸಭೆಯಲ್ಲಿ ಇಂದು ಬಿಜೆಪಿ ನಾಯಕರನ್ನು ತಿವಿದ ರೀತಿ.

ಸುಮಾರು 15 ನಿಮಿಷ ಭಾವಸ್ಪರ್ಶಿ ಭಾಷಣ ಮಾಡಿದ ಅವರು, ತಾವು ರಾಜಕೀಯದಲ್ಲಿ ಬೆಳೆದು ಬಂದ ರೀತಿ, ಶಾಸಕಿಯಾಗಲು ಪಟ್ಟ ಶ್ರಮ, ಬರುವಾಗ ಕಟ್ಟಿಕೊಂಡಿದ್ದ ಕನಸುಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

Photo -YouTube.com

ಇವತ್ತು ನಮಗೆ ಆಗಿದ್ದು ಇನ್ನು 6 ತಿಂಗಳಲ್ಲಿ ನಿಮಗೆ ಆಗಲಿದೆ. ಎಡಗಾಲಿನಿಂದ ಪಕ್ಷಕ್ಕೆ ಒದ್ದು ಹೋದವರು ನಿಮ್ಮ ಪಕ್ಷದಲ್ಲಿ ಇರುತ್ತಾರಾ? ನಿಮ್ಮ ಪಕ್ಷವನ್ನು ಹಲವಾರು ಜನ ರಕ್ತ ಹರಿಸಿ ಕಟ್ಟಿದ್ದಾರೆ. ಈಗ 15 ಜನರನ್ನು ಕರೆದುಕೊಂಡು ಮಂತ್ರಿ ಮಾಡುತ್ತೇನೆನ್ನುತ್ತೀರಲ್ಲಾ, ಯಾವ ಪುರುಷರ್ಥಕ್ಕೆ? ಎಂದು ಕಿಚಾಯಿಸಿದರು.

ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದವರು ಕಾಂಗ್ರೆಸ್ ನವರಲ್ಲ. ನಿಮ್ಮ ಪಕ್ಷದವರೇ, ಯಡಿಯೂರಪ್ಪ ಕೆಜೆಪಿ ಪಕ್ಷ ಕಟ್ಟಿ, ಶ್ರೀರಾಮುಲು ಬೇರೆ ಪಕ್ಷ ಕಟ್ಟಿ ಬಿಜೆಪಿ ಮುಗಿಸಿಬಿಡುತ್ತೇನೆ ಎಂದಿದ್ದನ್ನೂ ನೋಡಿದ್ದೇವೆ. ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಎನ್ನುವಂತೆ ಇವತ್ತು ನಮಗೆ ಬಂದಿದ್ದು ನಾಳೆ ನಿಮಗೂ ಬರುತ್ತದೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಎಚ್ಚರಿಸಿದರು.

ಬಿಜೆಪಿಯವರು ಪಶ್ಚಿಮ ಬಂಗಾಳವಾಯಿತು, ಗೋವಾ ಆಯಿತು, ಈಗ ಇಲ್ಲಿ ಆರಂಭಿಸಿದ್ದಾರೆ. ಬೇರೆಯವರಿಗೆ ಧ್ವನಿಯೇ ಇಲ್ಲದಂತೆ ಮಾಡಬೇಕೆಂದು ಹೊರಟಿದ್ದಾರೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎನ್ನುತ್ತ ಬೆನ್ನಿಗೆ ಚೂರಿ ಹಾಕುವಂತ ಕೆಲಸ ಮಾಡುತ್ತಿದ್ದಾರೆ. ಅಮೇರಿಕಾದಲ್ಲೂ ಆಪರಶನ್ ಕಮಲ ಮಾಡುತ್ತೇವೆನ್ನುವಂತಹ ಭಂಡತನಕ್ಕಿಳಿದಿದ್ದಾರೆ ಎಂದು ಕಿಡಿಕಾರಿದರು.

ನಾನು ಅನೇಕ ಕನಸುಗಳನ್ನು ಕಟ್ಟಿಕೊಂಡು, ಪರಿಶ್ರಮ ಪಟ್ಟು ಚುನಾವಣೆಯಲ್ಲಿ ಆಯ್ಕೆಯಾದೆ.  ಬಹಳಷ್ಟು ಕಷ್ಟಪಟ್ಟು, ತಿರಸ್ಕಾರಗಳನ್ನು ಉಂಡು ಪುರಸ್ಕಾರ ಪಡೆದಿದ್ದೇನೆ. ಆಯ್ಕೆಯಾದ ದಿನ ಸಂತೋಷದಿಂದ ಕಣ್ಣೀರು ಬಂದಿತ್ತು. ಭಕ್ತಿಯಿಂದ ನಮಸ್ಕರಿಸಿ ವಿಧಾನಸೌಧದ ಒಳಗೆ ಬಂದಿದ್ದೇನೆ.

ಕಲಿಯಲು ಬಂದವರು ಈ 14 ತಿಂಗಳಲ್ಲಿ ಏನೆಲ್ಲ ಕಲಿತಿದ್ದೇವೆ. 20 ವರ್ಷ ಇದಕ್ಕೋಸ್ಕರವೇ ಪರಿಶ್ರಮ ಪಟ್ಟು ಇಲ್ಲಿಗೆ ಬಂದಿದ್ದೇನಾ ಎನ್ನುವ ಪ್ರಶ್ನೆ ಮೂಡುತ್ತಿದೆ. ಕ್ಷೇತ್ರದ ಕೆಲಸ ಮಾಡಬೇಕಾ, ಇಂತಹ ಚದುರಂಗದಾಟ ನೋಡಬೇಕಾ ಎನ್ನುವ ಸಂದೇಹ ಬಂದಿದೆ.  ಮುಂದೆ ರಾಜಕಾರಣದಲ್ಲಿ ಹೇಗಿರಬೇಕೆನ್ನುವ ಸಮಸ್ಯೆ ಕಾಡುತ್ತಿದೆ ಎಂದು ಹೇಳಿದರು.

ಬೇರೆ ರಾಜ್ಯದವರು ಕರ್ ನಾಟಕ ಎಂದು ಲೇವಡಿ ಮಾಡುವಂತಹ ಪರಿಸ್ಥಿತಿ ಬಂದಿದೆ. ಮುಂದಿನ ಜನಾಂಗಕ್ಕೆ ಏನು ಹೇಳಬೇಕು. ರಾಜಕಾರಣಿಗಳಿಗೆ ಇಂದು ಮರ್ಯಾದೆ ಉಳಿದಿದೆಯಾ? ಬಹಳಷ್ಟು ಮುಜುಗರವಾಗುತ್ತಿದೆ ಎಂದರು.

ನಮಗೂ ಸಾಕಷ್ಟು ಒತ್ತಡವಿತ್ತು. ಆದರೆ ಯಾವುದಕ್ಕೂ ಜಪ್ಪಯ್ಯ ಎನ್ನುವ ಜಾಯಮಾನದವಳು ನಾನಲ್ಲ. ಕಿತ್ತೂರು ಚನ್ನಮ್ಮನ ನಾಡಿನಲ್ಲಿ ಹುಟ್ಟಿದವಳು ನಾನು. ಎಲ್ಲವನ್ನೂ ಧೈರ್ಯದಿಂದ ಎದುರಿಸಿ ಗೆಲ್ಲುವವಳು ನಾನು ಎಂದ ಹೆಬ್ಬಾಳಕರ್, ನಾವೆಲ್ಲ ಸೇರಿ ಕ್ಷೇತ್ರಗಳ ಅಭಿವೃದ್ಧಿ ಮಾಡೋಣ, ನಾಡು ಕಟ್ಟೋಣ. ನೀವೆಲ್ಲ ವಾಪಸ್ ಬನ್ನಿ ಎಂದು ಬಂಡಾಯ ಶಾಸಕರನ್ನು ವಿನಂತಿಸಿದರು.

 

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button