Kannada NewsKarnataka News

ಕಾಂಗ್ರೆಸ್- ಬಿಜೆಪಿ ಹೊಂದಾಣಿಕೆ ಬಗ್ಗೆ ಜನ ಜಾಗೃತರಾಗಿರಲಿ; ಪಂಜಾಬ್ ಸಿಎಂ ಭಗವಂತ ಮಾನ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ದೇಶದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಹೊಂದಾಣಿಕೆ ರಾಜಕೀಯ ಮಾಡುತ್ತಿವೆ. ಕರ್ನಾಟಕದಲ್ಲಿಯೂ ಇದನ್ನೆ ಮಾಡುತ್ತಿವೆ. ಜನರು ಜಾಗೃತರಾಗಬೇಕು” ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಹೇಳಿದರು.

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, “ದೇಶದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಹೊಂದಾಣಿಕೆ ರಾಜಕೀಯ ಮಾಡುತ್ತಿವೆ. ಕರ್ನಾಟಕದಲ್ಲಿಯೂ ಸಹ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಸರಕಾರ ರಚನೆ ಮಾಡುವಾಗ ನಾಲ್ಕೈದು ಜನ ಕಡಿಮೆ ಬಿದ್ದರೆ ಪಕ್ಷಾಂತರ ಮಾಡುವುದು ವಾಡಿಕೆಯಾಗಿದೆ” ಎಂದು ಆರೋಪಿಸಿದರು.

ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್ ನಲ್ಲಿ ಆಮ್ ಆದ್ಮಿಗೆ ಸ್ಪಷ್ಟ ಬಹುಮತ ಸಿಕ್ಕರೂ ಬಿಜೆಪಿಯವರಿಗೆ ಸೋಲನ್ನು ಸ್ವೀಕರಿಸುವ ಮನೋಭಾವ ಇಲ್ಲ. ಆದ್ದರಿಂದ ಬಿಜೆಪಿಯವರೇ ಮೇಯರ್, ಉಪಮೇಯರ್ ಮಾಡಬೇಕೆಂದು ನ್ಯಾಯಾಲಯಕ್ಕೆ ಹೋದರು. ನಾವು ಸಮರ್ಥವಾಗಿ ನ್ಯಾಯಾಲಯದಲ್ಲಿ ಹೋರಾಡಿ ಸ್ಪಷ್ಟ ಬಹುಮತ ಸಾಧಿಸಿದ್ದೇವೆ. ನಮಗೆ ಮೇಯರ್, ಉಪಮೇಯರ್ ಚುನಾವಣೆ ನಡೆಸಲು ಅನುಮತಿ ಕೊಡಿ ಎಂದಾಗ ನ್ಯಾಯಾಲಯ ಸಮ್ಮತಿ ಸೂಚಿಸಿತು. ಬಿಜೆಪಿಯವರಿಗೆ ಸೋಲನ್ನು ಅರಗಿಸಿಕೊಳ್ಳುವ ಶಕ್ತಿಯೂ ಇರಬೇಕೆಂದು ವಾಗ್ದಾಳಿ ನಡೆಸಿದರು‌.

“ಕರ್ನಾಟಕದಲ್ಲಿ ಕೆಲ ಕಡೆ ಪ್ರಚಾರ ನಡೆಸಿದ್ದೇನೆ. ಆಮ್ ಆದ್ಮಿ ಪರವಾಗಿ ಉತ್ತಮವಾದ ವಾತಾವರಣ ಇದೆ. ಜನರು ಬದಲಾವಣೆ ಬಯಸಿದ್ದಾರೆ. ಮೇ.10ಕ್ಕೆ ಕರ್ನಾಟಕದಲ್ಲಿ ವಿಧಾನಭಾ ಚುನಾವಣೆ ನಡೆಯಲಿದೆ. ಇದೇ ದಿನದಂದು ಪಂಜಾಬ್ ನಲ್ಲಿ ಉಪಚುನಾವಣೆ ನಡೆಯಲಿದೆ ಆಮ್ ಆದ್ಮಿ ರಾಷ್ಟ್ರೀಯ ಪಕ್ಷ ಘೋಷಣೆಯಾದ ಮೇಲೆ ಮೊದಲನೇ ಚುನಾವಣೆ ನಡೆಯುತ್ತಿದೆ” ಎಂದರು.

“ಆಮ್ ಆದ್ಮಿ ಮರ್ಯಾದೆಯುತ ಪಕ್ಷ. ನಮ್ಮ ನಾಯಕ ಅರವಿಂದ ‌ಕ್ರೇಜಿವಾಲ್ ದೆಹಲಿಯಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ. ಇದರ ಪರಿಣಾಮ ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಸ್ಪಷ್ಟ ಬಹುಮತದಿಂದ ಸರಕಾರ ರಚನೆ ಮಾಡಲು ಸಾಧ್ಯವಾಯಿತು” ಎಂದು ಭಗವಂತ ಮಾನ್ ಹೇಳಿದರು‌.

“ಆಮ್ ಆದ್ಮಿ ಪಕ್ಷ ದೇಶದಲ್ಲಿ ವೇಗವಾಗಿ ಬೆಳೆಯುತ್ತಿದೆ. ಇದನ್ನು ಸಹಿಸದ ಬಿಜೆಪಿ ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ಸಿಸೋಡಿಯಾ ಮನೆಯ ಮೇಲೆ ದಾಳಿ ಮಾಡಿದರು. ಅವರು ಶಾಲೆ ನಿರ್ಮಾಣ ಮಾಡುತ್ತಿರುವ ಕಾರಣಕ್ಕೆ ದುರುದ್ದೇಶದಿಂದ ನೂರಾರು ಅಧಿಕಾರಿಗಳಿಂದ ದಾಳಿ ಮಾಡಿಸಿದರು. ಅವರಿಗೆ ದಿನಕ್ಕೆ‌ ನೀಡುವ ಸಂಬಂಳದಷ್ಟು ಅಲ್ಲಿ ಹಣ ಸಿಗಲಿಲ್ಲ. ಅದೇ ರೀತಿ ಈಗ ಕರ್ನಾಟಕದಲ್ಲಿಯೂ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ‌. ಪ್ರಜಾ ಪ್ರಭುತ್ವದಲ್ಲಿ ಎಲೆಕ್ಟೆಡ್ ಜನ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ. ಸೆಲೆಕ್ಟೆಡ್ ಜನ ಅಲ್ಲ ಎಂದು ವಾಗ್ದಾಳಿ ನಡೆಸಿದರು.

“ಕರ್ನಾಟಕದಲ್ಲಿ ಕಬ್ಬಿಗೆ ಬೆಂಬಲ ಬೆಲೆ‌ ಘೋಷಣೆ ಮಾಡಲು ಸಾಧ್ಯವಾಗುತ್ತಿಲ್ಲ. ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಬರುವ ಮುನ್ನ ಒಂದು ವರ್ಷದ ಹಿಂದೆ ಕಬ್ಬಿನ ದರದ ಸಮಸ್ಯೆಯಿತು. ಒಂದೊಂದು, ಎರಡೆರಡು‌ ವರ್ಷಗಳ ಬಿಲ್ ರೈತರಿಗೆ ಸಿಗುತ್ತಿತ್ತು. ನಮ್ಮ ಸರಕಾರ ರಚನೆಯಾದ ಮೇಲೆ 3 ಸಾವಿರ ಕೋಟಿ ರೂ. ಬಿಲ್ ಪಾಸ್ ಮಾಡಿ ಈಗ ರೈತರಿಗೆ ನಿಗದಿತ ಸಮಯದಲ್ಲಿ ಕಬ್ಬಿನ ಬಿಲ್ ಸಿಗುತ್ತಿದೆ” ಎಂದರು.

ಇದಕ್ಕೂ ಮುನ್ನ ಪಂಜಾಬ ಮುಖ್ಯಮಂತ್ರಿಗೆ ಜಗಜ್ಯೋತಿ ಬಸವೇಶ್ವರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ನೀಡಿ ಬೆಳಗಾವಿ ಉತ್ತರ ಮತಕ್ಷೇತ್ರದ ಆಪ್ ಅಭ್ಯರ್ಥಿ ರಾಜಕುಮಾರ ಟೋಪಣ್ಣವರ ಗೌರವಿಸಿದರು.

ಈ‌ ಸಂದರ್ಭದಲ್ಲಿ ಆಪ್ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಆಪ್‌‌ ಜಿಲ್ಲಾಧ್ಯಕ್ಷ ಶಂಕರ ಹೆಗಡೆ, ರವೀಂದ್ರ ಬೆಲ್ಲದ, ಬಸನಗೌಡ ಚಿಕ್ಕನಗೌಡರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

https://pragati.taskdun.com/cm-basavaraj-bommairoad-showj-p-naddakichcha-sudeepshiggavi/
https://pragati.taskdun.com/raid-on-warehouse-items-amount-of-42-92-lakhs-in-the-name-of-savadatti-jds-candidate-seized/
https://pragati.taskdun.com/akash-ganga-revives-historic-waterless-well/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button