ಎಂ.ಕೆ.ಹೆಗಡೆ, ಬೆಳಗಾವಿ – ನಿನ್ನೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 24 ನಿಗಮ ಮಂಡಳಿಗೆ ಶಾಸಕರನ್ನು ಅಧ್ಯಕ್ಷರನ್ನಾಗಿಸಿ ಆದೇಶ ಹೊರಡಿಸಿದರು. ಅದಾಗಿ ಕೆಲವೆ ಹೊತ್ತಿನಲ್ಲಿ 4 ನೇಮಕವನ್ನು ಹಿಂದಕ್ಕೆ ಪಡೆದರು.
ಒಂದನ್ನು ತಾಂತ್ರಿಕ ಕಾರಣದಿಂದಾಗಿ ಹಿಂಪಡೆದರೆ, ಇನ್ನೊಂದು ಹಿರಿಯ ಶಾಸಕರೊಬ್ಬರು ತಮಗೆ ನಿಗಮ ಮಂಡಳಿ ನೀಡಿದರೆ ಅವಮಾನ ಎಂದಿದ್ದಕ್ಕೆ ವಾಪಸ್ ಪಡೆಯಲಾಯಿತು. ಇನ್ನೊಬ್ಬರು ಸಚಿವಸ್ಥಾನದ ಆಕಾಂಕ್ಷಿಯಾಗಿದ್ದರೆ ಮತ್ತೊಬ್ಬರು ತಮಗೆ ಅಷ್ಟು ದೊಡ್ಡ ಹುದ್ದೆ ಬೇಕಾಗಿಲ್ಲ ಎಂದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ಥಿತ್ವಕ್ಕೆ ಬರಲು ಸಹಕರಿಸಿದವರಿಗೆ ಈಗ ಸಚಿವಸ್ಥಾನ ನೀಡಬೇಕಾಗಿದೆ. ಎಚ್.ವಿಶ್ವನಾಥ, ಎಂಟಿಬಿ ನಾಗರಾಜ, ಯೋಗೇಶ್ವರ ಅವರಿಗೆ ಸಧ್ಯದಲ್ಲೇ ಮಂತ್ರಿಸ್ಥಾನ ಒಲಿಯಲಿದೆ. ಉಮೇಶ ಕತ್ತಿ ಕೂಡ ಸಚಿವ ಸಂಪುಟ ಸೇರಬಹುದು. ಆ ಸಂದರ್ಭದಲ್ಲಿ ಸಿಡಿದೇಳಬಹುದಾದವರನ್ನು ನೋಡಿ ಅಂಥವರಿಗೆ ಈಗ ನಿಗಮ ಮಂಡಳಿ ನೀಡುವ ಮೂಲಕ ಸಮಾಧಾನ ಪಡಿಸುವ ಮುನ್ನೆಚ್ಚರಿಕೆ ವಹಿಸಲಾಗಿದೆ.
ಇವೆಲ್ಲದರ ಅರ್ಥ ಶಾಸಕರಾದವರಿಗೆ ಅದಷ್ಟೇ ಸಾಕಾಗಲ್ಲ ಎನ್ನುವುದು. ಶಾಸಕರಾದ ನಂತರ ಅವರಿಗೆ ಮಂತ್ರಿಸ್ಥಾನ ಬೇಕು. ಅಥವಾ ಕೊನೆಯ ಪಕ್ಷ ಕೆಲವರಿಗೆ ನಿಗಮ ಮಂಡಳಿಯಾದರೂ ಸಿಗಬೇಕು. ಅವರ ಪ್ರತಿಕ್ರಿಯೆ, ತಮಗೆ ಕ್ಷೇತ್ರಕ್ಕೆ, ಜನರಿಗೆ ಸೇವೆ ಸಲ್ಲಿಸಲು ಹೆಚ್ಚಿನ ಅಧಿಕಾರಬೇಕು ಎನ್ನುವುದು. ಅಂದರೆ ಬರೇ ಶಾಸಕ ಸ್ಥಾನ ಅಧಿಕಾರವಲ್ಲವೇ? ಮಂತ್ರಿಯಾದರೆ, ನಿಗಮ ಮಂಡಳಿ ಅಧ್ಯಕ್ಷಸ್ಥಾನ ಪಡೆದರೆ ಮಾತ್ರ ಅಧಿಕಾರ ಎನ್ನುವ ಭ್ರಮೆಯಲ್ಲಿ ಅವರಿದ್ದಾರೆ.
ಚಿಂತನೆ ಬದಲಾಗಲಿ
ಒಬ್ಬ ಶಾಸಕನನ್ನು ಆಯ್ಕೆ ಮಾಡಲು ಅವರ ಹಿಂದೆ ನಿಂತು ಸಹಸ್ರಾರು ಕಾರ್ಯಕರ್ತರು ಕೆಲಸ ಮಾಡುತ್ತಾರೆ. ಎಷ್ಟೋ ಜನರು ಹತ್ತಾರು ವರ್ಷಗಳಿಂದ ಪಕ್ಷಕ್ಕಾಗಿ ಚಪ್ಪಲಿ ಸವೆದಿರುತ್ತಾರೆ. ಆದರೆ ಅವರನ್ನು ಗುರುತಿಸುವ ಕನಿಷ್ಠ ಕೆಲಸವೂ ಎಷ್ಟೋ ಶಾಸಕರಿಂದ ಆಗುವುದಿಲ್ಲ. ತಾವು ಶಾಸಕರಾದ ನಂತರ ಹಿಂತಿರುಗಿ ನೋಡುವ ಪರಿಜ್ಞಾನವೂ ಇರುವುದಿಲ್ಲ.
ಶಾಸಕಸ್ಥಾನ ಅತ್ಯಂತ ಗೌರವಯುತವಾದ ದೊಡ್ಡ ಹುದ್ದೆ. ಅದನ್ನು ಸಮರ್ಥವಾಗಿ ನಿಭಾಯಿಸಿದರೆ ಮಂತ್ರಿಸ್ಥಾನಕ್ಕಿಂತ ಹೆಚ್ಚು ಗೌರವ ಪಡೆಯಬಹುದು, ಪ್ರಾಮಾಣಿಕ ಪ್ರಯತ್ನ ಮಾಡಿದರೆ ಕ್ಷೇತ್ರಕ್ಕೆ ಬೇಕಾದಷ್ಟು ಕೆಲಸ ತರಬಹುದು. ಆದರೆ ಬಹುತೇಕ ಶಾಸಕರಿಗೆ ಶಾಸಕರಾದ ತಕ್ಷಣ ಮಂತ್ರಿಯಾಗಬೇಕೆನ್ನುವ ಆಸೆ ಬಂದುಬಿಡುತ್ತದೆ.
ಈ ನಿಗಮ ಮಂಡಳಿಗಳನ್ನೆಲ್ಲ ಶಾಸಕರಿಗೆ ನೀಡಲೇಬಾರದು. ಇದನ್ನು ಕಾರ್ಯಕರ್ತರಿಗೇ ಮೀಸಲಿಡಬೇಕು. ಹಿರಿಯ ಕಾರ್ಯಕರ್ತರು, ಟಿಕೆಟ್ ವಂಚಿತ ನಿಷ್ಠಾವಂತರಿಗೆ ನಿಗಮ ಮಂಡಳಿ ಗೌರವ ನೀಡಬೇಕು. ಎಲ್ಲ ಪಕ್ಷಗಳೂ ಇಂತದ್ದೊಂದು ಸ್ವಯಂ ನಿಬಂಧನೆ ಹಾಕಿಕೊಳ್ಳಬೇಕು.
ಶಾಸಕರಿಗೆ ಆ ಅಧಿಕಾರ ಸಾಕು. ನಿಗಮ ಮಂಡಳಿಗಳೆಲ್ಲ ಶಾಸಕಸ್ಥಾನದ ಎದುರು ಯಾವ ಲೆಕ್ಕ? ಅವಕಾಶವಿದ್ದರೆ ಅವರು ಮಂತ್ರಿಗಳಾಗಲಿ. ಆದರೆ ನಿಗಮ ಮಂಡಳಿಯೂ ತಮಗೇ ಇರಲಿ ಎನ್ನುವ ದುರಾಸೆಯನ್ನು ಬಿಟ್ಟು ತಮ್ಮನ್ನು ಗೆಲ್ಲಿಸಿದ, ಹಗಲಿರುಳು ಕೆಲಸ ಮಾಡಿದ ಹಿರಿಯ ಕಾರ್ಯಕರ್ತರಿಗೆ ನಿಗಮ ಮಂಡಳಿ ಗೌರವ ಸಿಗುವಂತೆ ಮಾಡಿದರೆ ಅದರಂತಹ ಗೌರವ ಶಾಸಕರಿಗೆ ಮತ್ಯಾವುದಿದೆ?
ಶಾಸಕರೇ ಎರಡೆರಡು ಹುದ್ದೆಗಳನ್ನು ಅಲಂಕರಿಸಿದರೆ ಉಳಿದ ಕಾರ್ಯಕರ್ತರು ಏನು ಮಾಡಬೇಕು. ಅವರು ಜೀವನವಿಡೀ ಪಕ್ಷಕ್ಕಾಗಿ ಮಣ್ಣು ಹೊರುವುದನ್ನಷ್ಟೇ ಮಾಡುತ್ತಿರಬೇಕೇ? ಇರುವ ಅಧಿಕಾರವನ್ನೇ ಸಮರ್ಥವಾಗಿ ಬಳಸಲಾರದವರು ಮತ್ತೊಂದು ಹುದ್ದೆ ಪಡೆದು ಮಾಡುವುದೇನಿದೆ?
ನಿಜವಾದ ಶಾಸಕರಾದರೆ, ನಿಜವಾದ ಪಕ್ಷ ನಿಷ್ಠರಾದರೆ, ನಿಜವಾಗಿಯೂ ಕಾರ್ಯಕರ್ತರಿಗೆ ಗೌರವ ಸಲ್ಲಿಸುವವರಾದರೆ ತಾವೇ ಮುಂದೆ ನಿಂತು ತಮ್ಮ ಹಿಂದಿರುವ ಹಿರಿಯ ಕಾರ್ಯಕರ್ತರನ್ನು ನಿಗಮ ಮಂಡಳಿಗಳಿಗೆ ನೇಮಕ ಮಾಡಬೇಕು. ಇದು ಮುಂದೆ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗುವದಕ್ಕೆ ತಾವೇ ಅಡಿಪಾಯ ಗಟ್ಟಿಗೊಳಿಸಿಕೊಂಡಂತಾಗುತ್ತದೆ. ಇಲ್ಲವಾದಲ್ಲಿ ಕ್ಷೇತ್ರದಲ್ಲಿ ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗುತ್ತದೆ.
ಪ್ರತಿಕ್ರಿಯೆಗಳಿಗೆ ಸ್ವಾಗತ – ವಾಟ್ಸಪ್ – 8197712235
(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲರಿಗೂ ಶೇರ್ ಮಾಡಿ)
ಲಕ್ಷ್ಮಣ ಸವದಿ ದೆಹಲಿ ಭೇಟಿ: ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಕ್ರಾಂತಿ?
ಸಚಿವಾಕಾಂಕ್ಷಿ ಶಾಸಕರಿಗೆ ನಿಗಮ ಮಂಡಳಿ ಗಿಫ್ಟ್ ನೀಡಿದ ರಾಜ್ಯ ಸರ್ಕಾರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ