ವೀರಶೈವ ಲಿಂಗಾಯತ ಒಳಪಂಗಡಗಳು ಒಂದಾಗಲಿ- ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್


ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ವೀರಶೈವ ಲಿಂಗಾಯತ ಒಳಪಂಗಡಗಳು ಒಂದಾಗಬೇಕು. ಆಗ ಕರ್ನಾಟಕದಲ್ಲಿ ಸಮಾಜ ಮತ್ತಷ್ಟು ಸದೃಢವಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಗುರುವಾರ ನಡೆದ ವೀರಶೈವ ಲಿಂಗಾಯತ ಸಚಿವರು ಮತ್ತು ಶಾಸಕರುಗಳಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಸಚಿವರು, ನಮ್ಮ ಸಮಾಜ ಹಿಂದೆ ಹೇಗಿತ್ತು. ಈಗ ಹೇಗಿದೆ ಎಂಬುದನ್ನು ಅರ್ಥೈಸಿಕೊಳ್ಳಬೇಕಿದೆ ಎಂದರು.

ನಾವೆಲ್ಲಾ ಸಮಾಜದ ಕೋಟಾದಡಿ ಮಂತ್ರಿಗಳಾಗಿದ್ದೇವೆ. ಸಮಾಜದ ಹಿರಿಯರು ಮಾಡಿದ ಆಸ್ತಿಯನ್ನು ನಾವಿಂದು ಊಟ ಮಾಡುತ್ತಿದ್ದೇವೆ ಅಷ್ಟೇ. ಮುಂದಿನ ದಿನಗಳಲ್ಲಿ ಸಮಾಜ ಬಾಂಧವರು ಒಗ್ಗೂಡಿಕೊಂಡು ಹೋಗಬೇಕು ಎಂದು ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಕರೆ ನೀಡಿದರು. ಕಾಯಕವೇ ಕೈಲಾಸ ಎನ್ನೋ ನಮ್ಮ ಸಮಾಜ, ಒಂದು ರೊಟ್ಟಿಯಲ್ಲಿ ಒಂದು ಚೂರು ತಾನಿಟ್ಟುಕೊಂಡು, ಉಳಿದ ಮೂರು ಚೂರನ್ನು ಬೇರೆಯವರಿಗೆ ಹಂಚುತ್ತದೆ. ಹಿಂದೆ ಮಠಗಳಲ್ಲಿ ಆರಂಭಗೊಂಡ ಅಕ್ಷರ ದಾಸೋಹ ಇಂದಿನ ಸರ್ಕಾರಗಳು ಅಳವಡಿಸಿಕೊಂಡಿವೆ ಎಂದರು.
ಇದೇ ವೇಳೆ ಸಚಿವರಾದ ಈಶ್ವರ್ ಖಂಡ್ರೆ, ಎಂ.ಬಿ.ಪಾಟೀಲ್, ಎಸ್.ಎಸ್.ಮಲ್ಲಿಕಾರ್ಜುನ್, ಶರಣಬಸಪ್ಪ ದರ್ಶನಾಪುರ್, ಡಾ.ಶರಣ ಪ್ರಕಾಶ್ ಪಾಟೀಲ್, ಶಿವಾನಂದ.ಎಸ್. ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಬಿ.ವೈ.ವಿಜಯೇಂದ್ರ ಸೇರಿದಂತೆ ಸಮುದಾಯದ ನೂತನ ಶಾಸಕರನ್ನು ಸನ್ಮಾನಿಸಲಾಯಿತು.
ವೀರಶೈವ ಮಹಾಸಭಾದ ಪ್ರಮುಖರಾದ ಶಾಮನೂರು ಶಿವಶಂಕರಪ್ಪ, ಡಾ.ಪ್ರಭಾಕರ ಕೋರೆ ಮೊದಲಾದವರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ