ರಾಜಕಾರಣ ಬದಿಗಿಟ್ಟು ಅಭಿವೃದ್ಧಿಗೆ ಒಂದಾಗೋಣ – ಲಕ್ಷ್ಮೀ ಹೆಬ್ಬಾಳಕರ್ ಮನವಿ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಚುನಾವಣೆಯ ಸಂದರ್ಭದಲ್ಲಿ ಅನೇಕರು ನನ್ನ ಮೇಲೆ ಹಲವು ರೀತಿಯ ಆರೋಪಗಳನ್ನು ಮಾಡಿದ್ದರೂ ಕ್ಷೇತ್ರದ ಜನರು ಯಾವುದಕ್ಕೂ ಕಿವಿಗೊಡದೆ ಅಭಿವೃದ್ದಿಗಾಗಿ ನನ್ನನ್ನು ಬೆಂಬಲಿಸುವ ಮೂಲಕ ನಿರೀಕ್ಷೆಗೂ ಮೀರಿ ಬಹುಮತದಿಂದ ಆಯ್ಕೆ ಮಾಡಿದ್ದೀರಿ. ಮುಂದಿನ ದಿನಗಳಲ್ಲಿ ರಾಜಕೀಯ, ಪಕ್ಷ, ಜಾತಿ, ಭಾಷೆ ಎಲ್ಲವನ್ನೂ ಬದಿಗಿಟ್ಟು ಅಭಿವೃದ್ಧಿಗಾಗಿ ಒಂದಾಗೋಣ. ಕ್ಷೇತ್ರದ ಸಮಗ್ರ ಅಭಿವೃದ್ಧಿಯ ನನ್ನ ಸಂಕಲ್ಪಕ್ಕೆ ಎಲ್ಲರೂ ಕೈ ಜೋಡಿಸಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮನವಿ ಮಾಡಿದ್ದಾರೆ.

ಕ್ಷೇತ್ರದ ನಂದಿಹಳ್ಳಿಯಲ್ಲಿ ಶನಿವಾರ ಸಂಜೆ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ನಾನು ಎಂದೂ, ಯಾರನ್ನೂ ದ್ವೇಷದಿಂದ ನೋಡಿಲ್ಲ. ನನಗೆ ಬೇಕಿರುವುದು ಕ್ಷೇತ್ರದ ಅಭಿವೃದ್ಧಿ ಮಾತ್ರ. ಜನರೂ ನನ್ನನ್ನು ಮನೆಮಗಳಂತೆ ಪ್ರೀತಿಯಿಂದ ಕಾಣುತ್ತಿದ್ದಾರೆ. ಇದೇ ಪ್ರೀತಿ, ವಿಶ್ವಾಸವನ್ನು ಉಳಿಸಿಕೊಂಡು, ಇನ್ನಷ್ಟು ಅಭಿವೃದ್ಧಿಯ ಯೋಜನೆ ಹಾಕಿಕೊಂಡಿದ್ದೇನೆ. ನಿಮ್ಮೆಲ್ಲರ ಕೃಪೆಯಿಂದ ಮಂತ್ರಿಯಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ. ಹಾಗಾಗಿ ಹೆಚ್ಚಿನ ಅಭಿವೃದ್ಧಿ ಯೋಜನೆಗಳನ್ನೂ ತರಲು ಸಾಧ್ಯವಿದೆ. ಇದೇ ರೀತಿಯ ನಿಮ್ಮ ಸಹಕಾರ ಮುಂದಿನ ದಿನಗಳಲ್ಲಿ ಸಹ ಇರಲಿ ಎಂದು ಸಚಿವರು ಕೋರಿದರು.

ನಂದಿಹಳ್ಳಿಯ ರಸ್ತೆ ಅಭಿವೃದ್ಧಿಗೆ 3 ಕೋಟಿ ರೂ., ಮಂದಿರದ ಅಭಿವೃದ್ಧಿಗೆ 2 ಕೋಟಿ ರೂಗಳನ್ನು ಮೊದಲ ಹಂತದಲ್ಲಿ ಮಂಜೂರು ಮಾಡಿಸಿದ್ದೇನೆ. ನಿಮ್ಮೆಲ್ಲರ ಜೊತೆ ಚರ್ಚಿಸಿ ಮುಂದಿನ ಹಂತಗಳಲ್ಲಿ ಮತ್ತಷ್ಟು ಅಭಿವೃದ್ಧಿ ಯೋಜನೆಗಳನ್ನು ತರೋಣ ಎಂದು ಹೆಬ್ಬಾಳಕರ್ ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ, ಸಿಡಿಪಿಒ, ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಖಾ ಶಿಂಗೆನ್ನವರ, ಉಪಾಧ್ಯಕ್ಷೆ ಕುಸುಮಾ ಪಾಟೀಲ, ಮಲ್ಲಿಕಾರ್ಜುನ ಲೋಕೂರ್, ಮಹದೇವ್ ಜಾಧವ್, ಶಶಿಕಾಂತ ಪಾಟೀಲ, ಸುವರ್ಣ ಹಂಪನ್ನವರ, ನಿಂಗವ್ವ ಕುರುಬರ, ಪ್ರಸಾದ ಪಾಟೀಲ, ನಿಂಗುಬಾಯಿ ಹಗೆದಾಳ, ಬಾಹುರಾವ್ ಪಾಟೀಲ, ರಾಮದಾಸ ಜಾಧವ್, ಸಹದೇವ್ ಬೆಳಗಾಂವ್ಕರ್, ಓಮಣ್ಣ ಕರ್ಲೇಕರ್, ಬಸು ಹಂಪನ್ನವರ, ಪರಶುರಾಮ ಕೋಲಕಾರ, ಡಾ. ಕಿರಣ ಲೋಂಡೆ, ಸಂಜೀವ ಮಾದರ್, ಯಲ್ಲಪ್ಪ ಹಗೆದಾಳ, ರಾಜು ಪಾಟೀಲ, ಪರಶು ಜಾಧವ್, ಗಣಪತಿ ಜಾಧವ್, ಪ್ರಹ್ಲಾದ ಅವಚಾರಿ, ಮಾರುತಿ ಲೋಕೂರ್ ಹಾಗೂ ಗ್ರಾಮದ ನೂರಾರು ಮಹಿಳೆಯರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ