*ಬೆಂಗಳೂರು ಜೊತೆಗೆ ಕರ್ನಾಟಕವನ್ನೂ ಜಾಗತಿಕ ಕೇಂದ್ರವನ್ನಾಗಿ ಮಾಡೋಣ: ಡಿಸಿಎಂ ಡಿ.ಕೆ.ಶಿವಕುಮಾರ್*
![](https://pragativahini.com/wp-content/uploads/2025/02/Invest4.jpg)
ಪ್ರಗತಿವಾಹಿನಿ ಸುದ್ದಿ, *ಬೆಂಗಳೂರು :*
“ಕರ್ನಾಟಕ ಅತ್ಯುತ್ತಮ ಮೂಲಸೌಕರ್ಯ, ಗುಣಮಟ್ಟದ ಶಿಕ್ಷಣ, ಮಾನವ ಸಂಪನ್ಮೂಲವನ್ನು ಹೊಂದಿದ್ದು, ಬೆಂಗಳೂರು ಜೊತೆಗೆ ಕರ್ನಾಟಕ ಹೂಡಿಕೆ ಮಾಡಲು ಅತ್ಯುತ್ತಮ ಪ್ರದೇಶವಾಗಿದೆ. ನಾವೆಲ್ಲರೂ ಸೇರಿ ಕರ್ನಾಟಕವನ್ನು ಜಾಗತಿಕ ಕೇಂದ್ರವಾಗಿ ಮಾಡಬೇಕು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಭಿಪ್ರಾಯಪಟ್ಟರು.
![](https://pragativahini.com/wp-content/uploads/2025/02/Invest5.jpg)
ನಗರದ ಅರಮನೆ ಮೈದಾನದಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕ 2025 ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಶಿವಕುಮಾರ್ ಅವರು ಮಂಗಳವಾರ ಮಾತನಾಡಿದರು.
“ಬೆಂಗಳೂರು ನಗರ ಸ್ಟಾರ್ಟ್‌ಅಪ್ ಗಳನ್ನು ಸ್ಥಾಪಿಸುವ ಯುವ ಉದ್ಯಮಿಗಳಿಗೆ ಅತ್ಯಂತ ಜನಪ್ರಿಯ ನಗರ. ಜೊತೆಗೆ ಜಾಗತಿಕ ಹೂಡಿಕೆದಾರರಿಗೆ ಕರ್ನಾಟಕವೇ ಮೊದಲ ಆಯ್ಕೆ” ಎಂದರು.
“ನಂಜುಂಡಪ್ಪ ವರದಿಯ ಅನ್ವಯದಂತೆ ಈಗಾಗಲೇ ಒಂದಷ್ಟು ಹಿಂದುಳಿದ ತಾಲೂಕುಗಳು ಹಾಗು ಪ್ರದೇಶಗಳನ್ನು ಗುರುತಿಸಲಾಗಿದೆ. ಇಲ್ಲಿ ನೀವುಗಳು ಉದ್ದಿಮೆಗಳನ್ನು ಸ್ಥಾಪಿಸಬೇಕಾಗಿ ಮನವಿ ಮಾಡುತ್ತೇನೆ. ಏಕೆಂದರೆ ಬೆಂಗಳೂರಿನ ಜನಸಂಖ್ಯೆ 1.40 ಕೋಟಿ ಮುಟ್ಟಿದೆ. ವಾಹನಗಳ ಸಂಖ್ಯೆ 1.1 ಕೋಟಿ ಮುಟ್ಟಿದೆ. ಹೊರ ಜಿಲ್ಲೆಗಳಲ್ಲಿ ಉದ್ದಿಮೆ ಸ್ಥಾಪನೆ ಮಾಡಿದರೆ ಹೆಚ್ಚಿನ ಸಬ್ಸಿಡಿ ನೀಡಲಾಗುವುದು” ಎಂದರು.
“ನಾವೆಲ್ಲರೂ ಒಟ್ಟಿಗೆ ಸೇರಿ ಭವಿಷ್ಯದ ಕರ್ನಾಟಕವನ್ನು ನಿರ್ಮಿಸಲು ಶ್ರಮಿಸಬೇಕು. ಕರ್ನಾಟಕವನ್ನು ನವ ನಾವೀನ್ಯತೆಯ, ಹೂಡಿಕೆ ಸ್ನೇಹಿ ಮತ್ತು ಸಮಾಜದ ಎಲ್ಲಾ ವರ್ಗದ ಜನರನ್ನು ಸೇರಿಸಿಕೊಂಡು ಬೆಳೆಯುವ ರಾಜ್ಯವಾಗಿ ಮಾಡಬೇಕಿದೆ” ಎಂದು ಹೇಳಿದರು.
“2000 ನೇ ಇಸವಿಯಲ್ಲಿ ರಾಜ್ಯದ ಮೊದಲ ಜಾಗತಿಕ ಹೂಡಿಕೆದಾರರ ಸಭೆ ನಡೆಯಿತು. ಅಂದಿನ ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ. ಕೃಷ್ಣ ಅವರು ಇದರ ನೇತೃತ್ವವಹಿಸಿದ್ದರು. ಆ ಸಭೆಯನ್ನು ಇನ್ಫೋಸಿಸ್ ಸಂಸ್ಥಾಪಕರಲ್ಲಿ ಒಬ್ಬರಾದ ನಾರಾಯಣ ಮೂರ್ತಿ ಅವರು ಇದನ್ನು ಉದ್ಘಾಟಿಸಿದ್ದು ಇತಿಹಾಸ” ಎಂದು ತಿಳಿಸಿದರು.
“1904 ರಲ್ಲಿ ಮೊದಲ ವಿದ್ಯುತ್ ದೀಪ ಬೆಳಗಿದ ನಗರ ಬೆಂಗಳೂರು. ಭಾರತದ ಪ್ರಮುಖ ಬಾಹ್ಯಾಕಾಶ ಉಪಗ್ರಹವನ್ನು ಅಭಿವೃದ್ಧಿಪಡಿದ ನಗರ. ವಿಶ್ವದ ಕೆಲವು ಪ್ರಮುಖ ತಂತ್ರಜ್ಞಾನ ಕಂಪನಿಗಳು ಜನಿಸಿದ ನಗರ ಬೆಂಗಳೂರು” ಎಂದರು.
“ಬೆಂಗಳೂರು ಭಾರತದ ಭವಿಷ್ಯವನ್ನು ಮುನ್ನಡೆಸುವ ಆರ್ಥಿಕ ಶಕ್ತಿ ಕೇಂದ್ರ ಎನ್ನುವುದರಲ್ಲಿ ಸಂದೇಹವಿಲ್ಲ. ನಮ್ಮ ಬೆಂಗಳೂರು ನವ ನಾವೀನ್ಯತೆ, ಪ್ರತಿಭೆ ಮತ್ತು ಡಿಜಿಟಲ್ ನಾಯಕತ್ವದ ಜಾಗತಿಕ ಕೇಂದ್ರವಾಗಿ ಈಗಾಗಲೇ ಹೊರಹೊಮ್ಮಿದೆ” ಎಂದು ತಿಳಿಸಿದರು.
“ಬೆಂಗಳೂರು ಹಲವಾರು ಯಶಸ್ಸಿನ ಕಥೆಗಳಿಗೆ ನಾಂದಿ ಹಾಡಿದ ಭೂಮಿ. ಎಲ್ಲರ ಭವಿಷ್ಯವನ್ನು ಉತ್ತಮಗೊಳಿಸಲು ನಾವು, ನೀವು ಒಟ್ಟಾಗಿ ಸಾಗಬೇಕಿದೆ” ಎಂದು ಹೇಳಿದರು.
*ಖಾಸಗಿ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಪಿಪಿಪಿ ಮಾದರಿ ಅಳವಡಿಕೆ*
“ಕರ್ನಾಟಕದ ಹೊಸ ಕೈಗಾರಿಕಾ ನೀತಿಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮೂಲಕ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ಆಲೋಚನೆ ಸರ್ಕಾರದ ಮುಂದಿದೆ. ಸಂಶೋಧನಾ ಕೇಂದ್ರಗಳಿಗೆ ಉತ್ತೇಜನ, ಕರ್ನಾಟಕವನ್ನು ಜ್ಞಾನ ರಾಜಧಾನಿಯನ್ನಾಗಿ ಮಾಡುವುದು ನಮ್ಮ ಉದ್ದೇಶ” ಎಂದು ಹೇಳಿದರು.
“ನಾವು ಇಂದು ಏನು ಮಾಡುತ್ತೇವೆ ಎಂಬುದರ ಮೇಲೆ ಭವಿಷ್ಯವು ಅವಲಂಬಿತವಾಗಿದೆ” ಎಂದು ಮಹಾತ್ಮ ಗಾಂಧಿಯವರು ಹೇಳಿದ್ದರು. ಇಂದು ನಾವು ನಮ್ಮ ಭವಿಷ್ಯ ಮಾತ್ರವಲ್ಲದೆ ಭವಿಷ್ಯದ ಪೀಳಿಗೆಯನ್ನು ರೂಪಿಸುವುದಕ್ಕಾಗಿ ಸೇರಿದ್ದೇವೆ” ಎಂದರು.
“ಪ್ರಪಂಚದ ಹಲವಾರು ಭಾಗಗಳಿಂದ ಅನೇಕ ಕನಸುಗಳನ್ನು ಹೊತ್ತು ಜನರು ಬೆಂಗಳೂರಿಗೆ ಬರುತ್ತಾರೆ. ಸಾಂಸ್ಕೃತಿಕ, ಆಧ್ಯಾತ್ಮಿಕ, ಐತಿಹಾಸಿಕವಾಗಿ ನಮ್ಮ ರಾಜ್ಯ ರಾಜಧಾನಿ ಶ್ರೀಮಂತವಾಗಿದೆ. ಈ ಸಮಾವೇಶದ ಮೂಲಕ ಕರ್ನಾಟಕಕ್ಕೆ ಎಲ್ಲಾ ಹೂಡಿಕೆದಾರರನ್ನು ಸ್ವಾಗತ ಮಾಡುತ್ತೇನೆ ಮತ್ತು ಉತ್ತಮ ಭವಿಷ್ಯವನ್ನು ನನಸಾಗಿಸಲು ನಾವು ಹೆಜ್ಜೆ ಇಡೋಣ” ಎಂದು ಹೇಳಿದರು.
ಕರ್ನಾಟಕವು ವಿಶ್ವ ದರ್ಜೆಯ ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ. ಬೆಂಗಳೂರು ನಗರವು ಉತ್ತಮ ಮಾನವ ಸಂಪನ್ಮೂಲವನ್ನು ಹೊಂದಿದೆ. ಅಲ್ಲಿ ಅತಿ ಹೆಚ್ಚು ಶಿಕ್ಷಣ ಸಂಸ್ಥೆಗಳು, ಎಂಜಿನಿಯರಿಂಗ್ ಕಾಲೇಜುಗಳು, ವೈದ್ಯಕೀಯ ಕಾಲೇಜುಗಳು, ಪ್ಯಾರಾ ಮೆಡಿಕಲ್‌ಗಳು, ಎಂಬಿಎ ಮತ್ತು ಕಾನೂನು ಕಾಲೇಜುಗಳಿವೆ. ವಿಶ್ವದ ಯಾವುದೇ ನಗರದಲ್ಲೂ ಇಷ್ಟರ ಮಟ್ಟಿಗೆ ಶಿಕ್ಷಣ ಸಂಸ್ಥೆಗಳು ಕಂಡು ಬರುವುದಿಲ್ಲ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ -2 ವಿಶ್ವದ ಅತ್ಯುತ್ತಮ ಹೊಸ ಟರ್ಮಿನಲ್. ಇದರ ಮೂಲಕ ವರ್ಷಕ್ಕೆ 40 ಮಿಲಿಯನ್ ಗಿಂತಲೂ ಹೆಚ್ಚು ಪ್ರಯಾಣಿಕರನ್ನು ನಿಭಾಯಿಸಲಾಗುತ್ತಿದೆ. ವಸತಿ ಉದ್ದಿಮೆ ಮೇಲೆ ಹೆಚ್ಚು ಹೂಡಿಕೆ ಮಾಡಬಹುದಾದ ಪ್ರದೇಶ ಬೆಂಗಳೂರು. ಶೇ. 25 ರಷ್ಟು ಹೂಡಿಕೆ ಕಚೇರಿ ಸ್ಥಳಗಳಿಗೆ ಮೀಸಲಾಗಿದೆ ಎಂದು ಅಂಕಿಅಂಶಗಳು ಹೇಳುತ್ತವೆ” ಎಂದರು.
“ಇಂದು ಹಲವಾರು ಉದ್ದಿಮೆದಾರರು ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಒಡಂಬಡಿಕೆ ಮಾಡಿಕೊಂಡರು. ಈಗಾಗಲೇ ನಮ್ಮಲ್ಲಿ 20ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಶಾಲೆಗಳು, ಟೆಕ್ ಪಾರ್ಕ್ ಗಳು, 50ಕ್ಕೂ ಹೆಚ್ಚು ಫೈವ್ ಸ್ಟಾರ್ ಹೋಟೆಲ್‌ಗಳು, ಭಾರತದ ಪಬ್ ರಾಜಧಾನಿ ಎಂದು ಬೆಂಗಳೂರನ್ನು ಈ ಸಂದರ್ಭದಲ್ಲಿ ನಾನು ಕರೆಯುತ್ತೇನೆ” ಎಂದು ಹೇಳಿದರು.
*ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದೇವೆ*
“ಬೆಂಗಳೂರು ಅಭಿವೃದ್ಧಿ ಸಚಿವನಾಗಿ ಹಲವಾರು ಮೂಲ ಸೌಕರ್ಯ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಮುಂದಾಗಿದ್ದೇನೆ. ಟನಲ್ ರಸ್ತೆ ಯೋಜನೆ, ಡಬಲ್ ಡೆಕ್ಕರ್ ಮೆಟ್ರೋ, ಎಲಿವೇಟೆಡ್ ಕಾರಿಡಾರ್, ಬಫರ್ ರಸ್ತೆಗಳ ನಿರ್ಮಾಣ, ಪ್ರವಾಸೋದ್ಯಮ ಅಭಿವೃದ್ಧಿವೆ 500 ಕೋಟಿ ವೆಚ್ಚದಲ್ಲಿ ಸ್ಕೈ ಡೆಕ್, ಬೆಂಗಳೂರು ಬಿಜಿನೆಸ್ ಕಾರಿಡಾರ್ ನಿರ್ಮಾಣ. ಇನ್ನೇನು ಕೆಲವೇ ದಿನದಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಜಾಗವನ್ನು ಘೋಷಣೆ ಮಾಡಲಾಗುವುದು. ಹೀಗೆ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗಿದೆ” ಎಂದರು.
ನೀವು ನಿಮ್ಮ ಸಿಎಸ್ಆರ್ ನಿಧಿಯನ್ನು ಶಿಕ್ಷಣಕ್ಕೆ ನೀಡಿ. ಪ್ರಾರ್ಥಮಿಕ ಶಿಕ್ಷಣಕ್ಕಾಗಿ ನೀವು ಹಣ ನೀಡಿದರೆ ನಾವು ಭೂಮಿಯನ್ನು ನೀಡುತ್ತೇವೆ. ಅಲ್ಲಿ ಹೊಸದಾಗಿ ಶಾಲೆಗಳನ್ನು ನಿರ್ಮಾಣ ಮಾಡಬಹುದು. ಕರ್ನಾಟಕವನ್ನು ಇನ್ನಷ್ಟು ಶೈಕ್ಷಣಿಕವಾಗಿ ಸಬಲಗೊಳಿಸಲು ನಿಮ್ಮ ಸಹಕಾರ ಅಗತ್ಯ” ಎಂದರು.
“ಕೈಗಾರಿಕಾ ಸಚಿವರಾದ ಎಂ ಬಿ ಪಾಟೀಲ್, ಐಟಿ ಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆ, ಇಂಧನ ಸಚಿವರಾದ ಕೆಜೆ ಜಾರ್ಜ್ ಅವರು ಇಲ್ಲಿ ಉಪಸ್ಥಿತರಿದ್ದು ನನ್ನ ಪ್ರಕಾರ ಸುಮಾರು 10 ಲಕ್ಷ ಕೋಟಿ ಬಂಡವಾಳ ಹರಿವಿನ ನಿರೀಕ್ಷೆಯಿದೆ” ಎಂದು ಹೇಳಿದರು.
“ಹೆಚ್ಚಿನ ಮೌಲ್ಯದ ಉದ್ಯೋಗಗಳನ್ನು ಸೃಷ್ಟಿಸುವುದು, ಪೂರೈಕೆ ಸರಪಳಿಗಳನ್ನು ಬಲಪಡಿಸಿ, ತಂತ್ರಜ್ಞಾನ ಆಧಾರಿತ ಉದ್ಯಮಗಳನ್ನು ಸಕ್ರಿಯಗೊಳಿಸುವುದು ನಮ್ಮ ಸರ್ಕಾರದ ಮುಂದಿರುವ ಗುರಿ” ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ