Kannada NewsKarnataka NewsLatest

ಗೋಕಾಕನ್ನು ಸ್ಮಾರ್ಟ್ ಸಿಟಿ ಮಾಡಲು ಪ್ರಯತ್ನಿಸುತ್ತೇವೆ -ಸುರೇಶ ಅಂಗಡಿ

ಪ್ರಗತಿವಾಹಿನಿ ಸುದ್ದಿ, ಗೋಕಾಕ:  ಕರ್ನಾಟಕದ ಸಮಗ್ರ ಪ್ರಗತಿಗಾಗಿ ಪಣ ತೊಟ್ಟಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕೈಗಳನ್ನು ಬಲಪಡಿಸಲು, ಬಿಜೆಪಿ ಸರ್ಕಾರ ಮೂರುವರೆ ವರ್ಷ ಸುಭದ್ರ ಆಡಳಿತ ನಡೆಸಲು ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರನ್ನು ಬೆಂಬಲಿಸಿ, ಆಶೀರ್ವಾದ ಮಾಡುವಂತೆ ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ನ್ಯಾಯವಾದಿಗಳನ್ನು ಕೋರಿದರು.
ಶನಿವಾರ ಇಲ್ಲಿಯ ನ್ಯಾಯವಾದಿಗಳ ಸಂಘದ ಕಾರ್ಯಾಲಯದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಪರ ಮತಯಾಚಿಸಿದ ಅವರು, ಗೋಕಾಕ ಕ್ಷೇತ್ರದ ಸರ್ವಾಂಗೀಣ ವಿಕಾಸಕ್ಕೆ ಬಿಜೆಪಿ ಅಭ್ಯರ್ಥಿಗೆ ಮತ ನೀಡುವಂತೆ ಕೋರಿದರು.
ರಮೇಶ ಜಾರಕಿಹೊಳಿ ಅವರು ಮೊದಲಿನಿಂದಲೂ ಸ್ವಾಭಿಮಾನಿ ರಾಜಕಾರಣಿ. ನೇರ ಮಾತುಗಾರಿಕೆ ಹಾಗೂ ನಿಷ್ಠುರವಾದಿಗೆ ಹೆಸರುವಾಸಿ. ಕಾಂಗ್ರೇಸ್ ಪಕ್ಷದಲ್ಲಿನ ಪ್ರಸಕ್ತ ವಿದ್ಯಮಾನಗಳಿಂದ ಬೇಸತ್ತು ಸಾಕಷ್ಟು ಕಹಿಗಳನ್ನು ಅನುಭವಿಸಿದ್ದಾರೆ. ಅವರ ನೋವುಗಳಿಗೆ ಬಿ.ಎಸ್.ಯಡಿಯೂರಪ್ಪನವರು ಮಾತ್ರ ಸ್ಪಂದಿಸಲು ಸಾಧ್ಯವೆಂಬ ಭಾವನೆಗಳನ್ನು ಅರ್ಥ ಮಾಡಿಕೊಂಡು ಶಾಸಕ ಹಾಗೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ ಎಂದರು.

ಇಂದು ನಮ್ಮ ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ ಎಂದರೆ ಅದಕ್ಕೆ ರಮೇಶ ಜಾರಕಿಹೊಳಿ ಅವರ ತ್ಯಾಗವೇ ಕಾರಣ. ತಾವು ಚಲಾಯಿಸುತ್ತಿರುವ ಮತ ಕೇವಲ ರಮೇಶ ಜಾರಕಿಹೊಳಿ ಅವರಿಗಲ್ಲ. ನೇರವಾಗಿ ಸರ್ಕಾರಕ್ಕೆ. ಅದರಲ್ಲೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸ್ಥಿರ ಆಡಳಿತ ಮುಂದುವರೆಸಲು ರಮೇಶ ಜಾರಕಿಹೊಳಿ ಅವರನ್ನು ಪ್ರಚಂಡ ಬಹುಮತದಿಂದ ಆಯ್ಕೆ ಮಾಡುವಂತೆ ಮನವಿ ಮಾಡಿಕೊಂಡರು.
ನಾನು, ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಸೇರಿಕೊಂಡು ಗೋಕಾಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಗೋಕಾಕ ನಗರವನ್ನು ಸ್ಮಾರ್ಟ್ ಸಿಟಿ ಮಾಡಲು ಸರ್ವ ಪ್ರಯತ್ನ ನಡೆಸುತ್ತೇವೆ ಎಂದು ಹೇಳಿದರು.

ಹೆಚ್ಚಿನ ಅಂತರದಿಂದ ಗೆಲ್ಲಿಸಿ

ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಹೆಚ್ಚಿನ ಅಂತರದಿಂದ ರಮೇಶ ಜಾರಕಿಹೊಳಿ ಅವರನ್ನು ಗೆಲ್ಲಿಸಲು ವಕೀಲರಲ್ಲಿ ಮನವಿ ಮಾಡಿದರು.

ಈಗಾಗಲೇ ಕ್ಷೇತ್ರದ ಜನತೆ, ವಿವಿಧ ಸಂಘ ಸಂಸ್ಥೆಗಳು ಮತ್ತು ವಿವಿಧ ಸಮುದಾಯಗಳು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಪ್ರಜ್ಞಾವಂತರಾದ ವಕೀಲರು, ರಮೇಶ ಜಾರಕಿಹೊಳಿ ಅವರಿಗೆ ಆಶೀರ್ವಾದ ಮಾಡಿದರೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಸಂಪುಟದಲ್ಲಿ ಸಚಿವರನ್ನಾಗಿ ನೇಮಕ ಮಾಡುತ್ತೇನೆ ಎಂದು ಸ್ವತ: ಮುಖ್ಯಮಂತ್ರಿಗಳೇ ಭರವಸೆ ಕೊಟ್ಟಿದ್ದಾರೆ ಎಂದು ಹೇಳಿದರು.

ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ, ಸವದತ್ತಿ ಶಾಸಕ ಆನಂದ ಮಾಮನಿ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಹಿರಿಯ ನ್ಯಾಯವಾದಿ ಹಾಗೂ ಬಿಜೆಪಿ ಮುಖಂಡ ಎಂ.ಎ.ಅಂಗಡಿ, ಬಿಜೆಪಿ ವಿಭಾಗೀಯ ಪ್ರಭಾರಿ ಈರಪ್ಪ ಕಡಾಡಿ, ಹಿರಿಯ ನ್ಯಾಯವಾದಿ ಬಿ.ಆರ್.ಕೊಪ್ಪ, ವಕೀಲರ ಸಂಘದ ಅಧ್ಯಕ್ಷ ಉದಯ ಸಿಂಪಿ, ಸಂಘದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕೇಂದ್ರ ಸಚಿವ ಸುರೇಶ ಅಂಗಡಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ವಕೀಲರ ಸಂಘದವರು ಸನ್ಮಾನಿಸಿದರು.

ರಮೇಶ ಜಾರಕಿಹೊಳಿ ಭೇಟಿ:  ಇದಕ್ಕೂ ಮುನ್ನ ಗೋಕಾಕ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರು ವಕೀಲರ ಸಂಘದ ಕಾರ್ಯಾಲಯಕ್ಕೆ ಭೇಟಿ ನೀಡಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button