Latest

ಕಚೇರಿ ಕೆಲಸ 5 ದಿನಕ್ಕೆ ಸೀಮಿತಗೊಳಿಸಿ; ಒಂದು ತಾಸು ಕೆಲಸ ಹೆಚ್ಚಿಸಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಜ್ಯ ಸರಕಾರಿ ಕಚೇರಿಗಳ ಕಾರ್ಯನಿರ್ವಹಣೆಯನ್ನು 5 ದಿನಗಳಿಗೆ ಸೀಮಿತಗೊಳಿಸಿ ಪ್ರತಿ ದಿನದ ಕರ್ತವ್ಯದ ಅವಧಿಯನ್ನು ಒಂದು ತಾಸು ಹೆಚ್ಚಿಸಬೇಕು ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ 7ನೇ ವೇತನ ಆಯೋಗಕ್ಕೆ ಮನವಿ ಮಾಡಿಕೊಂಡಿದೆ.

ಪ್ರಸ್ತುತ 2 ಮತ್ತು 4ನೇ ಶನಿವಾರ ರಜೆ ಇರುತ್ತದೆ. ಅದರಂತೆ 1 ಹಾಗೂ 2ನೇ ಶನಿವಾರವೂ ರಜೆ ಘೋಷಣೆಗೆ ಸರಕಾರಕ್ಕೆ ಶಿಫಾರಸು ಮಾಡುವಂತೆ ಸಂಘ ಮನವಿ ಮಾಡಿದೆ.

ತಿಂಗಳ ಎಲ್ಲ ಶನಿವಾರಗಳೂ ಸಾರ್ವತ್ರಿಕ ರಜೆ ಘೋಷಿಸಬೇಕು. ವಾರದಲ್ಲಿ ಕರ್ತವ್ಯದ ದಿನಗಳನ್ನು 5ಕ್ಕೆ ಸೀಮಿತಗೊಳಿಸಬೇಕು. ಪ್ರಸ್ತುತ ಕಚೇರಿ ಆರಂಭದ ಅವಧಿ 10.30ರಿಂದ ಇದ್ದು ಅದನ್ನು 9.30ಕ್ಕೆ ಹಾಗೂ ಕಚೇರಿ ಮುಕ್ತಾಯದ ವೇಳೆಯನ್ನು 5.30ರ ಬದಲಿಗೆ 6.30ಕ್ಕೆ ಬದಲಾಯಿಸಬೇಕು. ಇದರಿಂದ ಪ್ರತಿ ನೌಕರನೂ ಪ್ರತಿ ದಿನ ಒಂದು ತಾಸು ಅವಧಿ ಹೆಚ್ಚುವರಿಯಾಗಿ ಕೆಲಸ ನಿರ್ವಹಿಸಿದಂತಾಗುತ್ತದೆ ಎಂದು ಆಯೋಗಕ್ಕೆ ಕೇಳಿಕೊಂಡಿದೆ.

ವಾರದ ಸೇವಾವಧಿಯನ್ನು 5 ದಿನಗಳಿಗೆ ಇಳಿಕೆ ಮಾಡುವುದರಿಂದ ಸಾರಿಗೆ, ಇಂಧನ, ನೀರು, ವಿದ್ಯುತ್, ಇತರ ನಿರ್ವಹಣೆಗಳ ವೆಚ್ಚದ ಪ್ರಮಾಣ ಗಣನೀಯವಾಗಿ ತಗ್ಗಲಿದೆ. ಜೊತೆಗೆ ರಜಾವಧಿಯಲ್ಲಿ ಸರಕಾರಿ ನೌಕರರು ಪ್ರವಾಸಗಳಿಗೆ ತೆರಳುವುದರಿಂದ ನಾನಾ ರೂಪದ ತೆರಿಗೆಗಳ ಮುಖಾಂತರ ಸರಕಾರಿ ಬೊಕ್ಕಸಕ್ಕೆ ಆದಾಯ ಬರಲಿದೆ ಎಂದು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದ್ದಾರೆ.

ಪ್ರಮುಖ ಬೇಡಿಕೆಗಳು:

*ಎನ್ ಪಿಎಸ್ ಯೋಜನೆ ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆ (OPS)ನ್ನು 2006ರ ಏಪ್ರಿಲ್ 1ರಿಂದ ಪೂರ್ವಾನ್ವಯವಾಗುವಂತೆ ಮರುಜಾರಿಗೊಳಿಸಬೇಕು.

*ಮೂಲ ವೇತನಕ್ಕೆ ಹಾಲಿ ಇರುವ ಶೇ. 31 ತುಟ್ಟಿಭತ್ಯೆ ವಿಲೀನಗೊಳಿಸಿ ಶೇ.40 ಫಿಟ್ ಮೆಂಟ್ ಸೌಲಭ್ಯವನ್ನು 2022ರ ಜುಲೈ 1ರಿಂದ ಪೂರ್ವಾನ್ವಯ ಜಾರಿ ಮಾಡಬೇಕು.

*ನೌಕರರಲ್ಲಿ ಕಾರ್ಯದಕ್ಷತೆ ಕ್ರಿಯಾಶೀಲತೆ ಮತ್ತು ನೈಪುಣ್ಯ ಹೆಚ್ಚಿಸುವ ನಿಟ್ಟಿನಲ್ಲಿ ATI ಮಾದರಿ ತರಬೇತಿ ನೀಡಬೇಕು.

*ಡಿ ಗುಂಪಿನ ಕನಿಷ್ಠ ವೇತನವನ್ನು 31 ಸಾವಿರ ರೂ.ಗೆ ನಿಗದಿಗೊಳಿಸಬೇಕು/

*ಪರಿಷ್ಕರಣೆಯಾಗಲಿರುವ ವೇತನ ಶ್ರೇಣಿಗಳಲ್ಲಿನ ಕನಿಷ್ಠ ಹಾಗೂ ಗರಿಷ್ಠ ವೇತನದ ನಡುವಣ ಅನುಪಾತ 1:5:20ರ ಬದಲಿಗೆ 1:8:86ಕ್ಕೆ ನಿಗದಿಗೊಳಿಸಬೇಕು.

*ಪ್ರತಿಯೊಬ್ಬ ಸರಕಾರಿ ನೌಕರರಿಗೂ ಅವರ ಸೇವಾವಧಿಯಲ್ಲಿ ಕನಿಷ್ಠ ಪಕ್ಷ 3ರಿಂದ 4 ಬಡ್ತಿಗಳಿಗೆ ಅವಕಾಶ ಸಿಗಬೇಕು.

*ಬಾಡಿಗೆ ತಾಯ್ತನದ ಮಹಿಳಾ ನೌಕರರಿಗೆ ಶಿಶುಪಾಲನಾ ತೆರಿಗೆ ರಜೆ ಮಂಜೂರು ಮಾಡಬೇಕು.

*ಸ್ವಯಂ ನಿವೃತ್ತಿಗೆ 15 ವರ್ಷಗಳ ಕನಿಷ್ಠ ಸೇವೆ ಅಥವಾ 50 ವರ್ಷಗಳ ವಯೋಮಿತಿ 12 ವರ್ಷ ಕನಿಷ್ಠ ಸೇವೆ, 45 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಬೇಕು.

*ನಿವೃತ್ತಿ ವೇತನಕ್ಕಾಗಿ ಕನಿಷ್ಠ ಸೇವಾವಧಿಯನ್ನು 30ರ ಬದಲು 20 ವರ್ಷಗಳಿಗೆ ಇಳಿಕೆ ಮಾಡಬೇಕು.

*ರಜಾ ಪ್ರಯಾಣ ಭತ್ಯೆ 4 ವರ್ಷಕ್ಕೊಮ್ಮೆ ನೀಡಬೇಕು.

*ವಿವಾಹಿತ ಮಹಿಳಾ ನೌಕರರ ತಂದೆ- ತಾಯಿಯನ್ನು ಸಂಜೀವಿನಿ ಯೋಜನೆ ವ್ಯಾಪ್ತಿಗೆ ಒಳಪಡಿಸಬೇಕು

…ಇತ್ಯಾದಿ

ಭಾನುವಾರ ಬೆಳಗಾವಿಯ ವಿವಿಧ ನಗರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

https://pragati.taskdun.com/power-cut-in-various-urban-areas-of-belgaum-on-sunday/

*ಗೋಕಾಕ್: ಮನೆ ಕಳ್ಳತನ ಕೇಸ್; ಆರೋಪಿ ಬಂಧನ*

https://pragati.taskdun.com/gokaktheft-caseaccuesd-arrested/

*ರಾಜ್ಯಪಾಲರ ಭಾಷಣದಲ್ಲಿ ಹೊಸ ಅಡುಗೆ ಏನೂ ಇಲ್ಲ: ಡಿ.ಕೆ.ಶಿವಕುಮಾರ್*

https://pragati.taskdun.com/d-k-shivakumarreactionkarnataka-budget-sessiongovernor-speech/

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button