ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲೂಕಿನ ಲಿಂಗನಮಠ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚುಂಚವಾಡ ಗ್ರಾಮದಲ್ಲಿ
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಅನುಷ್ಠಾನಗೊಳ್ಳಲಿರುವ ಜಲಜೀವನ್ ಮೀಷನ್ ಕಾಮಗಾರಿಯಲ್ಲಿ ವಿಳಂಬ ಆಗುತ್ತಿರುವ ಕಾರಣ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಜೆಜೆಎಂ ಕಾಮಗಾರಿಯ
ಅನುಷ್ಠಾನದಲ್ಲಿ ಇಲಾಖೆಯ ಅಧಿಕಾರಿಗಳ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯ ಖಂಡಿಸಿದ ಸ್ಥಳೀಯರು ಲಿಂಗನಮಠ ಗ್ರಾಮ ಪಂಚಾಯಿತಿಗೆ ಬೀಗ
ಜಡಿದು ಪ್ರತಿಭಟನೆ ನಡೆಸಿದರು.
ಚುಂಚವಾಡ ಗ್ರಾಮದಲ್ಲಿ ಕಳೆದ ಅಕ್ಟೋಬರ್ ತಿಂಗಳಲ್ಲಿ ಜೆ.ಜೆ.ಎಂ ಕಾಮಗಾರಿಗೆ ಟೆಂಡರ್ ಕರೆದು ಕಾಮಗಾರಿಯ ವರ್ಕ್ ಆರ್ಡರ್ ಕೂಡ ನೀಡಲಾಗಿತ್ತು. ಆದರೆ ಟೆಂಡರ್ ಆಗಿ ಮೂರು ತಿಂಗಳು ಕಳೆದರೂ ಗುತ್ತಿಗೆದಾರರು ಗ್ರಾಮಕ್ಕೆ ಭೇಟಿ ನೀಡಿ ಕಾಮಗಾರಿ ಆರಂಭಿಸಿರಲಿಲ್ಲ.
ಇದನ್ನು ಗ್ರಾಮ ಪಂಚಾಯಿತಿಯವರು ಮೇಲಧಿಕಾರಿಗಳ ಗಮನಕ್ಕೆ ತಂದ ಬಳಿಕ ಗ್ರಾಮದಲ್ಲಿ ಅಲ್ಪಸ್ವಲ್ಪ ಕಾಮಗಾರಿ ಮಾಡಿದ ಗುತ್ತಿಗೆದಾರರು ಕೆಲಸವನ್ನು ಅರ್ಧಕ್ಕೆ ಬಿಟ್ಟು ಹೋಗಿದ್ದರು.
ಇದರಿಂದ ಗ್ರಾಮದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿದೆ. ಗ್ರಾಮದಲ್ಲಿ ರಸ್ತೆಗಳನ್ನು ಅಗೆದು ಹಾಕಿದ್ದರಿಂದ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ ಎಂಬ ಕಾರಣಕ್ಕೆ ಕೆರಳಿದ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿದರು.
ಪ್ರತಿಭಟನೆ ನಡೆಯುತ್ತಿರುವ ಮಾಹಿತಿ ಆಧರಿಸಿಸ್ಥಳಕ್ಕಾಗಮಿಸಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಪ್ರವೀಣ ಮಠಪತಿ, ಗ್ರಾಮ ಪಂಚಾಯಿತಿ ಬೀಗ ತೆರವುಗೊಳಿಸುವಂತೆ ಕೋರಿದರು. ಕಾಮಗಾರಿ ಆರಂಭವಾಗುವವರೆಗೆ ಬೀಗ ತೆಗೆಯುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರಿಂದ ಕೊನೆಗೆ ತಮ್ಮ ಸಿಬ್ಬಂದಿ ಮೂಲಕ ಗುತ್ತಿಗೆದಾರರನ್ನು ಹುಡುಕಿ ಚುಂಚವಾಡ ಗ್ರಾಮಕ್ಕೆ ಕರೆತಂದು ತಾವೇ ಖುದ್ದಾಗಿ ನಿಂತು ಕಾಮಗಾರಿ ಪ್ರಾರಂಭಿಸಿದ ಬಳಿಕ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿಯ ಬೀಗ ತೆರವುಗೊಳಿಸಿದರು.
ಪಿಡಿಒ ಕಾವೇರಿ ಹಿಮಕರ, ಉಪಾಧ್ಯಕ್ಷ ಕಾಸಿಂ ಹಟ್ಟಿಹೊಳಿ, ಚುಂಚವಾಡ ಗ್ರಾಮಸ್ಥರು, ಲಿಂಗನಮಠ ಗ್ರಾಪಂ ಸದಸ್ಯರು, ಸಿಬ್ಬಂದಿ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ